;Resize=(412,232))
ಬೆಳಗಾವಿ : ಕರ್ನಾಟಕ–ಗೋವಾ ಗಡಿ ಭಾಗದಲ್ಲಿ ನಡೆದ ₹400 ಕೋಟಿ ನಗದು ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ಮತ್ತು ಆರೋಪಿಯೊಬ್ಬರ ನಡುವೆ ನಡೆದಿದೆ ಎನ್ನಲಾದ ಸಂಭಾಷಣೆಯ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ದೂರುದಾರ ಹಾಗೂ ಪೊಲೀಸ್ ಸಿಬ್ಬಂದಿ, ಥಾಣೆ ಮೂಲದ ಉದ್ಯಮಿ ಹಾಗೂ ಗುಜರಾತ್ ಮೂಲದ ಹವಾಲಾ ಕಾರ್ಯಕರ್ತರ ನಡುವಿನ ಸಂಭಾಷಣೆಗಳಿವೆ ಎನ್ನಲಾದ ಆಡಿಯೋ ದಾಖಲೆಗಳು, ವಿಡಿಯೋಗಳು ಮತ್ತು ಡಿಜಿಟಲ್ ಫೈಲ್‌ಗಳನ್ನು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸಲ್ಲಿಸಿರುವುದಾಗಿ ತಿಳಿದುಬಂದಿದೆ.
ಈ ದಾಖಲೆ ಒಂದರಲ್ಲಿ, ಹವಾಲಾ ಕಾರ್ಯಕರ್ತನು ನಾಸಿಕ್ ಪೊಲೀಸ್ ಅಧಿಕಾರಿಯೊಬ್ಬರಿಗೆ ಮಾತನಾಡುತ್ತಾ, ಉದ್ಯಮಿ ಮತ್ತು ಆಶ್ರಮದ ನಡುವೆ ಮಧ್ಯಸ್ಥಿಕೆ ವಹಿಸುವ ಪ್ರಯತ್ನ ಮಾಡುವುದಾಗಿ ಹೇಳಿರುವುದು ಕೇಳಿಬರುತ್ತದೆ. ಅದೇ ವೇಳೆ, ಆರೋಪಿತ ದರೋಡೆ ಪ್ರಕರಣದಲ್ಲಿ ಆಶ್ರಮದ ಯಾವುದೇ ಪಾತ್ರವಿಲ್ಲ ಎಂದು ಆತ ಹೇಳಿರುವುದರ ಜೊತೆಗೆ, ಆ ಆಶ್ರಮವು ಹಲವು ವರ್ಷಗಳಿಂದ ಕಪ್ಪು ಹಣದ ವ್ಯವಹಾರ ಕ್ಷೇತ್ರದಲ್ಲಿ ಸಕ್ರಿಯವಾಗಿತ್ತು ಎಂಬ ಹೇಳಿಕೆಯೂ ದಾಖಲೆಗಳಲ್ಲಿ ಇದೆ ಎಂದು ದೂರು ತಿಳಿಸಿದೆ.
ವೈರಲ್ ಆಡಿಯೋಗಳಲ್ಲಿ ಹಣ ಸಾಗಾಟದ ಪ್ರಕ್ರಿಯೆ, ನಗದು ನಾಪತ್ತೆಯಾದ ಹಿನ್ನೆಲೆ ಹಾಗೂ ಅದಕ್ಕೆ ಸಂಬಂಧಿಸಿದ ಜವಾಬ್ದಾರಿಗಳ ಬಗ್ಗೆ ಚರ್ಚೆ ನಡೆದಿರುವುದು ಕೇಳಿಬರುತ್ತಿದೆ. ಸಂಭಾಷಣೆಯ ಪ್ರಕಾರ, ಹಣ ಸಾಗಾಟದ ಸಂಪೂರ್ಣ ಜವಾಬ್ದಾರಿಯನ್ನು ವ್ಯಕ್ತಿಯೊಬ್ಬ ಹೊತ್ತಿದ್ದು, ಆತನ ಸಹಚರರ ಮೂಲಕ ಹಣ ಸಾಗಿಸಲು ಸೂಚಿಸಲಾಗಿತ್ತು ಎನ್ನಲಾಗಿದೆ. ಆದರೆ ಇದೀಗ ಹಣ ಸಾಗಾಟಕ್ಕೆ ನಿಯೋಜಿಸಲ್ಪಟ್ಟಿದ್ದ ವ್ಯಕ್ತಿಯ ಸಹಚರರು ನಾಪತ್ತೆಯಾಗಿದ್ದು, ಹಣ ಎಲ್ಲಿಗೆ ಹೋಯಿತು ಎಂಬುದು ಸ್ಪಷ್ಟವಾಗಿಲ್ಲ. ಈ ಹಿನ್ನೆಲೆಯಲ್ಲಿ ಹೊಣೆಹೊತ್ತ ವ್ಯಕ್ತಿಯೇ ಸ್ವತಃ ಪ್ರಕರಣದ ಫಾಲೋಅಪ್ ಮಾಡುತ್ತಿದ್ದಾನೆ ಎಂಬ ಮಾಹಿತಿಯೂ ಆಡಿಯೋದಲ್ಲಿದೆ.
ಇನ್ನು, ಈ ಪ್ರಕರಣದಲ್ಲಿ ಗುಜರಾತ್ ಮೂಲದ ಒಬ್ಬ ಪ್ರಭಾವಿ ರಾಜಕಾರಣಿ ಶಾಮೀಲಾಗಿದ್ದು, ಸಂಪೂರ್ಣ ವಿಚಾರಗಳು ಆ ರಾಜಕಾರಣಿಗೆ ತಿಳಿದಿವೆ ಎಂದು ಸಂಭಾಷಣೆಯಲ್ಲಿ ಹೇಳಲಾಗಿದೆ. ಆದರೆ ಈ ಆಡಿಯೋಗೆ ಯಾವುದೇ ಆಧಾರವಿಲ್ಲ. ಆದರೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಸಂಭಾಷಣೆಯ ಹೆಚ್ಚಾಗಿ ಮರಾಠಿ ಭಾಷೆಯಲ್ಲಿದೆ.