ಶ್ರೀಶೈಲ ಮಠದ
ಬೆಳಗಾವಿ : ತೀವ್ರ ಕುತೂಹಲ ಕೆರಳಿಸಿದ್ದ, ಜಾರಕಿಹೊಳಿ ಹಾಗೂ ರಮೇಶ ಕತ್ತಿ ಬಣದ ನಡುವಿನ ಜಿದ್ದಾಜಿದ್ದಿಯ ಕಣವಾಗಿದ್ದ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಚುನಾವಣೆಯ ಫಲಿತಾಂಶ ಭಾನುವಾರ ಹೊರಬಿದ್ದಿದೆ. 16 ಸ್ಥಾನಗಳ ಪೈಕಿ 13 ಸ್ಥಾನಗಳಲ್ಲಿ ಜಯ ಸಾಧಿಸುವ ಮೂಲಕ ಬ್ಯಾಂಕಿನ ಆಡಳಿತದ ಚುಕ್ಕಾಣಿ ಹಿಡಿಯುವಲ್ಲಿ ಜಾರಕಿಹೊಳಿ ಬಣ ಯಶಸ್ವಿಯಾಗಿದೆ. ಆ ಮೂಲಕ 29 ವರ್ಷಗಳ ನಂತರ ಬಣಕ್ಕೆ ಪೂರ್ಣ ಪ್ರಮಾಣದ ಅಧಿಕಾರ ಸಿಕ್ಕಂತಾಗಿದೆ.
ಈ ಬಾರಿಯ ಬಿಡಿಸಿಸಿ ಬ್ಯಾಂಕಿನ ಚುನಾವಣೆ, ಜಾರಕಿಹೊಳಿ ಮತ್ತು ಕತ್ತಿ-ಸವದಿ ಬಣದ ತೀವ್ರ ಜಿದ್ದಾಜಿದ್ದಿಗೆ ಕಾರಣವಾಗಿತ್ತು. ಹುಕ್ಕೇರಿ ಕ್ಷೇತ್ರದಲ್ಲಿ ರಮೇಶ ಕತ್ತಿ ಮತ್ತು ಅಥಣಿಯಲ್ಲಿ ಶಾಸಕ ಲಕ್ಷ್ಮಣ ಸವದಿ ಗೆಲುವು ಸಾಧಿಸಿದರೂ, ಬ್ಯಾಂಕಿನ ಮೇಲೆ ಹಿಡಿತ ಸಾಧಿಸುವಲ್ಲಿ ಹಿನ್ನಡೆ ಅನುಭವಿಸಿದ್ದಾರೆ.
ಡಿಸಿಸಿ ಬ್ಯಾಂಕ್ ಒಟ್ಟು 16 ನಿರ್ದೇಶಕರ ಬಲ ಹೊಂದಿದೆ. ಈ ಪೈಕಿ ಈಗಾಗಲೇ 9 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿತ್ತು. ಈ ಪೈಕಿ ಇಬ್ಬರು ನಿರ್ದೇಶಕರು ತಟಸ್ಥ ನಿಲುವು ಹೊಂದಿದ್ದರೆ, ಉಳಿದ 7 ನಿರ್ದೇಶಕರು ಜಾರಕಿಹೊಳಿ ಬಣದಲ್ಲಿ ಗುರುತಿಸಿಕೊಂಡಿದ್ದರು. ಭಾನುವಾರ 7 ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಆದರೆ, ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಬೈಲಹೊಂಗಲ, ಕಿತ್ತೂರು, ನಿಪ್ಪಾಣಿ ಮತ್ತು ಹುಕ್ಕೇರಿ ಕ್ಷೇತ್ರಗಳ ಫಲಿತಾಂಶವನ್ನು ಕಾಯ್ದಿರಿಸಲಾಗಿದೆ.
ರಾಯಬಾಗದಿಂದ ಅಪ್ಪಾಸಾಹೇಬ ಕುಲಗುಡೆ ವಿಜಯ ಸಾಧಿಸಿದರೆ, ನಿಪ್ಪಾಣಿಯಿಂದ ಅಣ್ಣಾಸಾಹೇಬ ಜೊಲ್ಲೆ, ಕಿತ್ತೂರಿನಿಂದ ನಾನಾಸಾಹೇಬ ಪಾಟೀಲ, ಬೈಲಹೊಂಗಲದಿಂದ ಮಹಾಂತೇಶ ದೊಡ್ಡಗೌಡರ ( ಫಲಿತಾಂಶ ಕಾಯ್ದಿರಿಸಲಾಗಿದೆ) ಗೆಲುವು ಸಾಧಿಸಿದ್ದಾರೆ. ಇವರೆಲ್ಲರೂ ಜಾರಕಿಹೊಳಿ ಬಣದ ಜೊತೆಗೆ ಗುರುತಿಸಿಕೊಂಡಿದ್ದಾರೆ. ಇದರಿಂದಾಗಿ ಜಾರಕಿಹೊಳಿ ಬಣದ ಸದಸ್ಯರ ಬಲ 13ಕ್ಕೇರಿದೆ. ಈ ಮೂಲಕ ಡಿಸಿಸಿ ಬ್ಯಾಂಕಿನ ಆಡಳಿತ ಚುಕ್ಕಾಣಿ ಮೇಲೆ ಜಾರಕಿಹೊಳಿ ಬಣ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾಗಿದೆ.
ರಮೇಶ ಕತ್ತಿಗೆ ತಿರುಗೇಟು:
ಕಳೆದ ಸೆಪ್ಟಂಬರ್‌ನಲ್ಲಿ ನಡೆದಿದ್ದ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣೆಯಲ್ಲಿ ಮಾಜಿ ಸಂಸದ ರಮೇಶ ಕತ್ತಿ ಅವರು ಎಲ್ಲ 15 ಸ್ಥಾನಗಳಲ್ಲಿ ಜಯಭೇರಿ ಬಾರಿಸುವ ಮೂಲಕ ಜಾರಕಿಹೊಳಿ ಸಹೋದರರ ವಿರುದ್ಧ ಮೀಸೆ ತಿರುವಿದ್ದರು. ಆದರೆ, ಈಗ ಜಾರಕಿಹೊಳಿ ಸಹೋದರರು ಡಿಸಿಸಿ ಬ್ಯಾಂಕಿನ ಮೇಲೆ ಹಿಡಿತ ಸಾಧಿಸುವ ಮೂಲಕ ಸೋಲಿನ ಸೇಡನ್ನು ತೀರಿಸಿಕೊಂಡಂತಾಗಿದೆ.
ಶತಾಯ ಗತಾಯವಾಗಿ ಬ್ಯಾಂಕಿನ ಮೇಲೆ ಹಿಡಿತ ಸಾಧಿಸುವ ನಿಟ್ಟಿನಲ್ಲಿ ರಮೇಶ ಕತ್ತಿ ಹಾಗೂ ಲಕ್ಷ್ಮಣ ಸವದಿ ಅವರು ಒಂದಾಗಿ ಜಾರಕಿಹೊಳಿ ಸಹೋದರರಿಗೆ ಸೆಡ್ಡು ಹೊಡೆದಿದ್ದರು. ರಮೇಶ ಕತ್ತಿ ಅವರಂತೂ ಲಿಂಗಾಯತ ಟ್ರಂಪ್ ಕಾರ್ಡ್ ಬಳಸಿ ಪ್ರಚಾರ ಮಾಡಿದ್ದರು. ಜಾರಕಿಹೊಳಿ ಸಹೋದರರ ವಿರುದ್ಧ ವೈಯಕ್ತಿಕವಾಗಿಯೂ ಟೀಕಾಸ್ತ್ರ ಪ್ರಯೋಗ ಮಾಡಿದ್ದರು. ಜಾರಕಿಹೊಳಿ ಸಹೋದರರ ಬಣ ಮತ್ತು ಕತ್ತಿ-ಸವದಿ ಬಣದ ನಡುವೆ ಆರೋಪ, ಪ್ರತ್ಯಾರೋಪಗಳು ಕೇಳಿ ಬಂದಿದ್ದವು. ಕೊನೆಗೂ ಜಾರಕಿಹೊಳಿ ಬಣ ಬ್ಯಾಂಕಿನ ಮೇಲೆ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾಗಿದೆ.
==
ಅಧ್ಯಕ್ಷ ಸ್ಥಾನ ಲಿಂಗಾಯತರಿಗೆ; ಬಾಲಚಂದ್ರ ಜಾರಕಿಹೊಳಿ:
ಈ ಮಧ್ಯೆ, ಮತದಾನದ ಬಳಿಕ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅರಬಾವಿ ಶಾಸಕ ಮತ್ತು ಬೆಮೂಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಬೆಳಗಾವಿ ಡಿಸಿಸಿ ಬ್ಯಾಂಕಿನ ಚುನಾವಣೆಯಲ್ಲಿ ನಮಗೆ ಪೂರ್ಣ ಪ್ರಮಾಣದ ಅಧಿಕಾರ ಸಿಕ್ಕಿದೆ. 16 ಸ್ಥಾನಗಳ ಪೈಕಿ 13 ಸ್ಥಾನ ಗೆದ್ದಿದ್ದೇವೆ. 29 ವರ್ಷದ ನಂತರ ಮತ್ತೆ ಡಿಸಿಸಿ ಬ್ಯಾಂಕ್ ನಲ್ಲಿ ಪೂರ್ಣ ಪ್ರಮಾಣದ ಅಧಿಕಾರ ಸಿಕ್ಕಿದೆ. ಲಿಂಗಾಯತ ಸಮಾಜದವರನ್ನು ಬ್ಯಾಂಕಿನ ಅಧ್ಯಕ್ಷರನ್ನಾಗಿ ಮಾಡಲಾಗುವುದು ಎಂದು ಘೋಷಿಸಿದರು.
ಒಂದು, ಎರಡು ಸೀಟ್ ಗೆದ್ದವರನ್ನು ನಾವು ಅಧ್ಯಕ್ಷರನ್ನಾಗಿ ಮಾಡುತ್ತ ಬಂದಿದ್ದೇವು. ಆದರೆ, ಈಗ ಅಧ್ಯಕ್ಷ, ಉಪಾಧ್ಯಕ್ಷ, ಅಪೆಕ್ಸ್ ಬ್ಯಾಂಕ್ ಡೈರೆಕ್ಟರ್ ಸ್ಥಾನಗಳಿಗೆ ನಮ್ಮವರನ್ನು ಮಾಡುತ್ತೇವೆ. ಡಿಸಿಸಿ ಬ್ಯಾಂಕಿಗೆ ಲಿಂಗಾಯತ ಸಮಾಜದವರಿಗೆ ನೂರಕ್ಕೆ ನೂರರಷ್ಟು ಅಧ್ಯಕ್ಷರನ್ನಾಗಿ ಮಾಡುತ್ತೇವೆ. ರಾಜು ಕಾಗೆ, ಹಣೇಶ ಹುಕ್ಕೇರಿ ನಮ್ಮ ಬಣಕ್ಕೆ ಬೆಂಬಲ ನೀಡುತ್ತಾರೆ ಎಂದರು.
ಲಕ್ಷ್ಮಣ ಸವದಿಗೆ ಜಾರಕಿಹೊಳಿ ಸವಾಲ್:
ಡಿಸಿಸಿ ಬ್ಯಾಂಕಿಗೆ ನಮ್ಮವರೇ ಅಧ್ಯಕ್ಷರಾಗುತ್ತಾರೆ. ನಾನು ಐವತ್ತು ಕೋಟಿ ರು.ಬೆಟ್ಟಿಂಗ್ ಕಟ್ಟುತ್ತೇನೆ. ಲಕ್ಷ್ಮಣ ಸವದಿ ಬೇಕಾದರೆ ₹50 ಕೋಟಿ ಬೆಟ್ಟಿಂಗ್ ಕಟ್ಟಲಿ. ನಮ್ಮವರು ಆಗದಿದ್ದರೆ ಆಸ್ತಿ ಮಾರಿ ಐವತ್ತು ಕೋಟಿ ರು.ಕೊಡುತ್ತೇನೆ ಎಂದು ಲಕ್ಷ್ಮಣ ಸವದಿಗೆ ಸವಾಲು ಹಾಕಿದರು.
ಈ ಮಧ್ಯೆ, ಬ್ಯಾಂಕ್‌ಗೆ ನಮ್ಮವರೇ ಅಧ್ಯಕ್ಷರಾಗುತ್ತಾರೆ ಎಂದು ಲಕ್ಷ್ಮಣ ಸವದಿ ಪ್ರತಿಕ್ರಿಯೆ ನೀಡಿದ್ದು, ಇದು ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.
ನಿರೀಕ್ಷೆಯಂತೆ ಗೆಲುವು
ಏಳು ಸ್ಥಾನಗಳಲ್ಲಿ ಇಂದು ನಾವು ನಾಲ್ಕು ಸ್ಥಾನ ಗೆದ್ದಿದ್ದೇವೆ. ರಾಮದುರ್ಗ ಹಾಗೂ ಹುಕ್ಕೇರಿಯಲ್ಲಿ ಸೋತಿದ್ದೇವೆ. ಮೊದಲೇ ಹೇಳಿದ ಹಾಗೆ ನಿರೀಕ್ಷೆಯಂತೆ ನಾವು ಗೆದ್ದಿದ್ದೇವೆ. ಗೆಲ್ಲುವುದಿಲ್ಲ ಎಂದು ಗೊತ್ತಿದ್ದೂ ಅಪಪ್ರಚಾರ ಮಾಡಿದರು. ಜಾತಿ ಟ್ರಂಪ್ ಕಾರ್ಡ್ ವರ್ಕೌಟ್ ಆಗಿಲ್ಲ, ಜನ ಉತ್ತರ ಕೊಟ್ಟಿದ್ದಾರೆ.
- ಸತೀಶ ಜಾರಕಿಹೊಳಿ, ಜಿಲ್ಲಾ ಉಸ್ತುವಾರಿ ಸಚಿವ.