3-4 ದಿನದಲ್ಲಿ ನೆರೆಹಾನಿ ಪ್ರವಾಸ : ದೇವೇಗೌಡ

Published : Oct 04, 2025, 07:50 AM IST
HD Devegowda birthday

ಸಾರಾಂಶ

ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಕಲ್ಯಾಣ ಕರ್ನಾಟಕ ಭಾಗದ ನೆರಪೀಡಿತ ಜಿಲ್ಲೆಗಳಿಗೆ ಖುದ್ದು ಪ್ರವಾಸ ಮಾಡಿ ವಾಸ್ತವಾಂಶಗಳನ್ನು ತಿಳಿದುಕೊಳ್ಳುತ್ತೇನೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡ ಹೇಳಿದ್ದಾರೆ.

 ಬೆಂಗಳೂರು :  ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಕಲ್ಯಾಣ ಕರ್ನಾಟಕ ಭಾಗದ ನೆರಪೀಡಿತ ಜಿಲ್ಲೆಗಳಿಗೆ ಖುದ್ದು ಪ್ರವಾಸ ಮಾಡಿ ವಾಸ್ತವಾಂಶಗಳನ್ನು ತಿಳಿದುಕೊಳ್ಳುತ್ತೇನೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡ ಹೇಳಿದ್ದಾರೆ.

ಬಹುದಿನಗಳ ನಂತರ ಶುಕ್ರವಾರ ಪಕ್ಷದ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಮೂರು ದಿನಗಳ ಹಿಂದೆ ಮುಖ್ಯಮಂತ್ರಿ ಅವರು ನೆರೆಹಾವಳಿಯ ವೈಮಾನಿಕ ಸಮೀಕ್ಷೆ ಮಾಡಿದ್ದಾರೆ. ನಾನು ಅವರ ಬಗ್ಗೆ ಆಪಾದನೆ ಮಾಡುವುದಿಲ್ಲ. ಈ ಸಮೀಕ್ಷೆಯಲ್ಲಿ ಆರು ಜಿಲ್ಲೆಗಳಲ್ಲಿ ಬೆಳೆ ಹಾನಿಯಾಗಿರುವುದು ಕಂಡು ಬಂದಿದೆ. 50ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಜಾನುವಾರುಗಳು ತೇಲಿ ಹೋಗಿವೆ. ರೈತರು ಬೆಳೆದ ಬೆಳೆಗಳು ಸಂಪೂರ್ಣ ನಾಶವಾಗಿವೆ. ಈ ವೇಳೆ ಮುಖ್ಯಮಂತ್ರಿ ಅವರು ಎಕರೆ ಎಷ್ಟು ಪರಿಹಾರ ಕೊಡುತ್ತೇವೆ ಎಂದು ಘೋಷಿಸಿದ್ದಾರೆ ಎಂದು ಪ್ರಶ್ನಿಸಿದರು.

ಫೀಲ್ಡ್‌ಗೆ ಹೋಗಿ ನಿಖರವಾಗಿ ಎಷ್ಟು ಏರಿಯಾದಲ್ಲಿ ಹಾನಿಯಾಗಿದೆ ಎಂದು ಗೊತ್ತು ಮಾಡುವ ಮತ್ತು ನೋವಿನಲ್ಲಿರುವ ಜನರಿಗೆ ಸ್ಪಂದಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಮಂತ್ರಿಗಳು ಕೆಲಸ ಮಾಡಬೇಕು. ಈ ದಿಕ್ಕಿನಲ್ಲಿ ಕಾರ್ಯಾಚರಣೆ ಮಾಡುತ್ತಾರೆ ಎಂದು ಭಾವಿಸುತ್ತೇನೆ. ಈ ವಿಷಯದಲ್ಲಿ 48 ಗಂಟೆಯೊಳಗೆ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿಗಳು ಏನು ಮಾಡಿದ್ದಾರೆ ಎಂದು ನಾನು ಇಲ್ಲಿ ಕುಳಿತು ಮಾತನಾಡಲು ಆಗುವುದಿಲ್ಲ ಎಂದರು.

ನೆರೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪ್ರತಿಕ್ರಿಯೆ:

ನೆರೆ ಹಾನಿ ಸ್ಥಳಕ್ಕೆ ತೆರಳಿ ಏನು ಕೆಲಸ ನಡೆಯುತ್ತಿದೆ? ನೋವಿನಲ್ಲಿರುವ ರೈತರಿಗೆ ಪರಿಹಾರ ಕೊಟ್ಟಿದ್ದಾರಾ ಅಥವಾ ಇಲ್ಲವಾ ಎಂಬುದನ್ನು ನೋಡಿ ಮಾತನಾಡಬೇಕು. ಮುಂದಿನ ಮೂರ್ನಾಲ್ಕು ದಿನದ ಬಳಿಕ ವಿಮಾನದಲ್ಲಿ ನಾನೇ ಕಲಬುರಗಿಗೆ ತೆರಳಿ ಬಳಿಕ ಕೆಲ ಪ್ರದೇಶಗಳಿಗೆ ರಸ್ತೆ ಮೂಲಕ ತೆರಳಿ ವಾಸ್ತವಾಂಶ ತಿಳಿದುಕೊಳ್ಳುತ್ತೇನೆ. ಸರ್ಕಾರ ಏನು ಮಾಡಿದೆ ಅಥವಾ ಮಾಡಿಲ್ಲ ಎಂಬುದರ ಬಗ್ಗೆ ನನ್ನ ಅಭಿಪ್ರಾಯ ಹೇಳುತ್ತೇನೆ ಎಂದು ದೇವೇಗೌಡರು ತಿಳಿಸಿದರು.

ನೆರೆಹಾನಿ ಬಗ್ಗೆ ಮೋದಿಗೆ ತಿಳಿಸುವೆ:

ಮಹಾರಾಷ್ಟ್ರದಿಂದ ಭೀಮಾ ನದಿಗೆ ಹೆಚ್ಚಿನ ನೀರು ಬಿಟ್ಟ ಪರಿಣಾಮ ಆರು ಜಿಲ್ಲೆಗಳ ಅನೇಕ ಹಳ್ಳಿಗಳು, ರಸ್ತೆಗಳು, ಸೇತುವೆಗಳು, ಮನೆಗಳು ಹಾಗೂ ಬೆಳೆಗಳು ನಾಶವಾಗಿವೆ. ಮೊದಲ ಬಾರಿಗೆ ಈ ಆರು ಜಿಲ್ಲೆಗಳಲ್ಲಿ ಅತಿವೃಷ್ಟಿಯಿಂದ ಹಾನಿಯಾಗಿದೆ. ಇದು ನೋವಿನ ವಿಚಾರ. ಮೂರ್ನಾಲ್ಕು ದಿನ ಬಿಟ್ಟು ನಾನೇ ಸ್ಥಳಕ್ಕೆ ತೆರಳಿ ನೋಡುತ್ತೇನೆ. ಎಷ್ಟರ ಮಟ್ಟಿಗೆ ಪರಿಹಾರ ಕಾರ್ಯಕ್ರಮ ನಡೆದಿದೆ ಅಥವಾ ನಡೆದಿಲ್ಲ? ಎಷ್ಟು ಜಾನುವಾರುಗಳು ಸತ್ತಿವೆ? ಏನು ಪರಿಹಾರ ಕೊಟ್ಟಿದ್ದಾರೆ? ಮೃತ ರೈತರ ಕುಟುಂಬಕ್ಕೆ ಏನು ಕೊಟ್ಟಿದ್ದಾರೆ ಎಂಬುದರ ಬಗ್ಗೆ ಸ್ಥಳದಲ್ಲಿ ಮಾಹಿತಿ ಸಂಗ್ರಹಿಸಿ ಪ್ರಧಾನಿ ಮೋದಿ ಅವರಿಗೆ ತಿಳಿಸುತ್ತೇನೆ ಎಂದರು.

ಪರಿಹಾರಕ್ಕೆ ಮೋದಿಗೆ ಒತ್ತಾಯಿಸುವೆ:

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಗೌಡರು, ಈ ಬಗ್ಗೆ ಈಗಾಗಲೇ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ. ದೇಶದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಪ್ರಧಾನಿ ಮೋದಿ ಅವರಿಗೆ ಬಿಡುವಿಲ್ಲದ ಕಾರ್ಯಕ್ರಮಗಳಿವೆ. ಅಗತ್ಯ ಬಿದ್ದರೆ ನಾನೇ ಖದ್ದು ದೆಹಲಿಗೆ ತೆರಳಿ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿ ನೆರೆ ಪರಿಹಾರಕ್ಕೆ ಒತ್ತಾಯಿಸುತ್ತೇನೆ ಎಂದು ತಿಳಿಸಿದರು.

ಗ್ಯಾರಂಟಿ ಯೋಜನೆಗಳಿಂದ

ರಾಜ್ಯ ಬರಡು: ಎಚ್‌ಡಿಡಿ

ನಾನು ಈ ವಿಚಾರದಲ್ಲಿ ರಾಜಕೀಯ ಬೆರೆಸಲ್ಲ. ರಾಜ್ಯದ ಕಾಂಗ್ರೆಸ್‌ ಶಾಸಕರೇ ಗ್ಯಾರಂಟಿ ಕಾರ್ಯಕ್ರಮಗಳ ಅನುಷ್ಠಾನದಿಂದ ರಾಜ್ಯ ಬರಡಾಗಿದೆ. ಹಣಕಾಸು ಸ್ಥಿತಿ ಹದಗೆಟ್ಟಿದೆ ಎಂದು ಹೇಳಿದ್ದಾರೆ. ಅವರಲ್ಲೇ ಗೊಂದಲವಿದೆ. ಅತೀವೃಷ್ಟಿ ಬಂದಾಗ ರಾಜ್ಯ ಸರ್ಕಾರ ತನ್ನ ಸಂಪನ್ಮೂಲದಿಂದ ಸಂಕಷ್ಟದಲ್ಲಿರುವ ಜನರಿಗೆ ಶಕ್ತಿ ಮೀರಿ ಸಹಾಯ ಮಾಡುವ ಜವಾಬ್ದಾರಿಯಿದೆ. ಆದರೆ, ಈ ವಿಚಾರದಲ್ಲಿ ಅವರಲ್ಲೇ ಗೊಂದಲವಿದೆ. ಹೀಗಾಗಿ ಅದರ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ. ಮೂರ್ನಾಲ್ಕು ದಿನದ ಬಳಿಕ ನಾನೇ ಒಂದು ರೌಂಡ್‌ ಹೋಗಿ ಏನು ನಡೆದಿದೆ ಅಥವಾ ನಡೆದಿಲ್ಲ ಎಂಬುದನ್ನು ಕಣ್ಣಾರೆ ಕಂಡು ಮತ್ತೆ ನಿಮ್ಮನ್ನು ಎದುರಾಗುತ್ತೇನೆ ಎಂದು ಪ್ರಶ್ನೆಯೊದಕ್ಕೆ ಎಚ್‌.ಡಿ.ದೇವೇಗೌಡ ಉತ್ತರಿಸಿದರು.

PREV
Read more Articles on

Recommended Stories

ಬೆಳಗಾವಿ ಜಿಲ್ಲೆಯ ನೆರೆ ವೀಕ್ಷಿಸಿದ ಬಿಜೆಪಿ
ಮಹಾಲಕ್ಷ್ಮೀ ಸಂಘದ ಪ್ರಧಾನ ಕಚೇರಿ ಉದ್ಘಾಟನೆ ಇಂದು