ಜಿಬಿಎಸ್‌ ಸೋಂಕಿಗೆ ಕರ್ನಾಟಕದಲ್ಲಿ ಮೊದಲ ಸಾವು - ಕೊಲ್ಲಾಪುರ ಆಸ್ಪತ್ರೇಲಿ ಚಿಕಿತ್ಸೆ ವೇಳೆ ನಿಧನ

Published : Feb 18, 2025, 05:31 AM IST
 Guillain Barre Syndrome

ಸಾರಾಂಶ

ಕಳೆದ 2 ತಿಂಗಳ ಅವಧಿಯಲ್ಲಿ ದೇಶದ 5 ರಾಜ್ಯಗಳಲ್ಲಿ 18 ಜನರನ್ನು ಬಲಿ ಪಡೆದಿರುವ ನರಸಂಬಂಧಿ ವ್ಯಾಧಿಯಾದ ಗುಯಿಲಿನ್ ಬರ್ರೆ ಸಿಂಡ್ರೋಮ್‌ (ಜಿಬಿಎಸ್‌)ಗೆ ಇದೀಗ ಕರ್ನಾಟಕದ ಮೊದಲ ವ್ಯಕ್ತಿ ಬಲಿಯಾಗಿದ್ದಾರೆ.

 ಕೊಲ್ಹಾಪುರ/ ಚಿಕ್ಕೋಡಿ: ಕಳೆದ 2 ತಿಂಗಳ ಅವಧಿಯಲ್ಲಿ ದೇಶದ 5 ರಾಜ್ಯಗಳಲ್ಲಿ 18 ಜನರನ್ನು ಬಲಿ ಪಡೆದಿರುವ ನರಸಂಬಂಧಿ ವ್ಯಾಧಿಯಾದ ಗುಯಿಲಿನ್ ಬರ್ರೆ ಸಿಂಡ್ರೋಮ್‌ (ಜಿಬಿಎಸ್‌)ಗೆ ಇದೀಗ ಕರ್ನಾಟಕದ ಮೊದಲ ವ್ಯಕ್ತಿ ಬಲಿಯಾಗಿದ್ದಾರೆ.

ಚಿಕ್ಕೋಡಿಯ 64 ವರ್ಷದ ವೃದ್ಧರೊಬ್ಬರು ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಶನಿವಾರ ಈ ವ್ಯಾಧಿಯಿಂದ ಸಾವಿಗೀಡಾಗಿದ್ದಾರೆ. ಇದು ಈ ಕಾಯಿಲೆಗೆ ರಾಜ್ಯದವರು ಬಲಿಯಾದ ಮೊದಲ ಪ್ರಕರಣವಾಗಿದೆ. ಇದರೊಂದಿಗೆ ಕರ್ನಾಟಕ ಅಕ್ಕಪಕ್ಕದ ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲಿ ಈಗಾಗಲೇ ಈ ವ್ಯಾಧಿ ಕಾಣಿಸಿಕೊಂಡಿದೆ.

ಇದು ಸಾಂಕ್ರಾಮಿಕ ಅಲ್ಲವಾದರೂ, ಭಾರೀ ಪ್ರಮಾಣದಲ್ಲಿ ಮಾರಣಾಂತಿಕವೂ ಅಲ್ಲವಾದರೂ, ವ್ಯಾಧಿ ತಗಲಲು ನಿಖರ ಕಾರಣ ಏನು ಎಂಬುದು ಇದುವರೆಗೂ ಖಚಿತವಾದ ಹಿನ್ನೆಲೆಯಲ್ಲಿ ವಿವಿಧ ರಾಜ್ಯಗಳಲ್ಲಿ ಈ ಕುರಿತು ಆತಂಕ ಉಂಟಾಗಿದೆ. ಮೊದಲಿಗೆ ಮಹಾರಾಷ್ಟ್ರದಲ್ಲಿ ಕಾಣಿಸಿಕೊಂಡಿದ್ದ ಜಿಬಿಎಸ್‌ಗೆ ಈವರೆಗೆ ಮಹಾರಾಷ್ಟ್ರದಲ್ಲಿ 11, ಪಶ್ಚಿಮ ಬಂಗಾಳದಲ್ಲಿ 3, ಆಂಧ್ರಪ್ರದೇಶದಲ್ಲಿ 2, ಅಸ್ಸಾಂ, ತಮಿಳುನಾಡು ಹಾಗೂ ಕರ್ನಾಟಕದ ಒಬ್ಬರು ಸೇರಿ ದೇಶದಲ್ಲಿ ಒಟ್ಟು 19 ಜನ ಸಾವನ್ನಪ್ಪಿದ್ದಾರೆ.

ಏನಿದು ಜಿಬಿಎಸ್‌?:

ಇದೊಂದು ನರಸಂಬಂಧಿ ವ್ಯಾಧಿ. ದೇಹದ ನರಮಂಡಲದ ಮೇಲೆ ಹಾಗೂ ರೋಗ ನಿರೋಧಕ ಶಕ್ತಿಯ ಮೇಲೆ ಇದು ಪ್ರಭಾವ ಬೀರುತ್ತದೆ. ಈ ವ್ಯಾಧಿಗೆ ತುತ್ತಾದ ವ್ಯಕ್ತಿಯ ಕೈಕಾಲು ಮರಗಟ್ಟಿ, ಮಾಂಸಖಂಡಗಳು ಬಲಹೀನವಾಗಿ ನೋವು ಕಾಣಿಸಿಕೊಳ್ಳುತ್ತದೆ. ಇದರಿಂದಾಗಿ ಅಂಗಾಂಗಗಳ ನಡುವೆ ಸಹಕಾರ ಹಾಗೂ ಸಮತೋಲನ ಸಾಧಿಸಲು ಕಷ್ಟವಾಗುತ್ತದೆ. ಇದು ಹೆಚ್ಚಾಗಿ ನಡುವಯಸ್ಕರು ಮತ್ತು ಮಕ್ಕಳಲ್ಲಿ ಕಂಡುಬರುತ್ತದೆ. ದೇಹದಲ್ಲಿನ ರೋಗನಿರೋಧಕ ಶಕ್ತಿಯು ನರಗಳ ಮೇಲೆ ದಾಳಿ ನಡೆಸಿದಾಗ ಜಿಬಿಎಸ್‌ ಉಂಟಾಗುತ್ತದೆ.

ಕಾರಣ ಏನು?:

ಜಿಬಿಎಸ್‌ ವ್ಯಾಧಿಗೆ ನಿಖರ ಕಾರಣ ಪತ್ತೆಯಾಗಿಲ್ಲವಾದರೂ, ಇದು ಕಲುಷಿತ ನೀರು, ಆಹಾರ ಸೇವನೆಯಿಂದ ನಮ್ಮ ದೇಹವನ್ನು ಸೇರುವ ವೈರಸ್‌ ಹಾಗೂ ಬ್ಯಾಕ್ಟೀರಿಯಾಗಳಿಂದ ಉಂಟಾಗುತ್ತದೆ. ಬ್ಯಾಕ್ಟೀರಿಯಾ ಅಥವಾ ವೈರಲ್ ಸೋಂಕು ಉಂಟಾಗಿದ್ದರೆ, ಇತ್ತೀಚೆಗಷ್ಟೇ ಲಸಿಕೆ ಪಡೆದಿದ್ದರೆ, ಶಸ್ತ್ರಚಿಕಿತ್ಸೆ ಮತ್ತು ನರರೋಗಗಳಿಗೆ ಒಳಗಾಗಿದ್ದರೆ ಈ ಕಾಯಿಲೆ ಬರುವ ಸಂಭವ ಅಧಿಕವಿರುತ್ತದೆ ಎನ್ನಲಾಗುತ್ತಿದೆ.

PREV
Stay informed with the latest news from Belagavi district (ಬೆಳಗಾವಿ ಸುದ್ದಿ) — covering local governance, industry & economy, agriculture and farming, heritage & tourism, community events, civic issues, and district-level developments in Belagavi only on Kannada Prabha News.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಮೇವು ಕತ್ತರಿಸುವ ಯಂತ್ರ ಮತ್ತು ಮ್ಯಾಟ್ ವಿತರಣೆ