ಕ್ಯಾನ್ಸರ್‌ಪೀಡಿತರಿಗೆ ಕೈಗೆಟಕುವ ದರದಲ್ಲಿ ಚಿಕಿತ್ಸೆ ನೀಡಿ - ರಾಷ್ಟ್ರಪತಿ ಮುರ್ಮು ಸಲಹೆ

ಸಾರಾಂಶ

ಐಸಿಎಂಆರ್ ಸಮೀಕ್ಷೆಯಂತೆ ದೇಶದಲ್ಲಿ ಸುಮಾರು 20 ಮಿಲಿಯನ್‌ಗೂ ಅಧಿಕ ಜನ ಪ್ರತಿವರ್ಷ ಕ್ಯಾನ್ಸರ್ ಪೀಡಿತರಾಗುತ್ತಿದ್ದು, ಸುಮಾರು 7 ಮಿಲಿಯನ್‌ಗೂ ಅಧಿಕ ಜನರು ಪ್ರತಿವರ್ಷ ಸಾವಿಗೀಡಾಗುತ್ತಿದ್ದಾರೆ.

ಬೆಳಗಾವಿ :  ಐಸಿಎಂಆರ್ ಸಮೀಕ್ಷೆಯಂತೆ ದೇಶದಲ್ಲಿ ಸುಮಾರು 20 ಮಿಲಿಯನ್‌ಗೂ ಅಧಿಕ ಜನ ಪ್ರತಿವರ್ಷ ಕ್ಯಾನ್ಸರ್ ಪೀಡಿತರಾಗುತ್ತಿದ್ದು, ಸುಮಾರು 7 ಮಿಲಿಯನ್‌ಗೂ ಅಧಿಕ ಜನರು ಪ್ರತಿವರ್ಷ ಸಾವಿಗೀಡಾಗುತ್ತಿದ್ದಾರೆ. ಆದ್ದರಿಂದ ದೇಶದಲ್ಲಿ ಕ್ಯಾನ್ಸರ್‌ ಆಸ್ಪತ್ರೆಗಳು ಹೆಚ್ಚಾಗಬೇಕು ಮತ್ತು ಉಚಿತ ಹಾಗೂ ಕೈಗೆಟಕುವ ದರದಲ್ಲಿ ಚಿಕಿತ್ಸೆ ಲಭ್ಯವಾಗಬೇಕು ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅಭಿಪ್ರಾಯಪಟ್ಟಿದ್ದಾರೆ.

ಕೆಎಲ್ಇ ಸಂಸ್ಥೆ ನೂತನವಾಗಿ ಪ್ರಾರಂಭಿಸಿರುವ ಕೆಎಲ್ಇ ಡಾ.ಸಂಪತಕುಮಾರ ಹಾಗೂ ಡಾ. ಉದಯಾ ಶಿವಣಗಿ ಕ್ಯಾನ್ಸರ್‌ ಆಸ್ಪತ್ರೆಯನ್ನು ಶುಕ್ರವಾರ ಜನಸೇವೆಗೆ ಅರ್ಪಿಸಿ ಮಾತನಾಡಿದ ಅವರು, ಮುಖ್ಯವಾಗಿ ದೇಶದಲ್ಲಿ ಹಿರಿಯ ನಾಗರಿಕರಿಗೆ ಕ್ಯಾನ್ಸರ್ ಅತೀ ಹೆಚ್ಚು ಬಾಧಿಸುತ್ತಿದೆ. ಹಾಗಾಗಿ ಕ್ಯಾನ್ಸರ್‌ ಕುರಿತು ಜಾಗೃತಿ ಕಾರ್ಯ ನಿರಂತರವಾಗಿ ನಡೆಯಬೇಕು ಎಂದು ಅವರು ಹೇಳಿದರು.

ಕೆಎಲ್‌ಇ ಸಂಸ್ಥೆ ಅತ್ಯಾಧುನಿಕವಾದ ಕ್ಯಾನ್ಸರ್‌ ಆಸ್ಪತ್ರೆ ಜನಸೇವೆಗೆ ಅರ್ಪಿಸಿರುವುದನ್ನು ಮುಕ್ತಕಂಠದಿಂದ ಶ್ಲಾಘಿಸಿದ ರಾಷ್ಟಪತಿ, ಭಾರತದಲ್ಲಿ ಎಲ್ಲರಿಗೂ ಆರೋಗ್ಯ ವ್ಯವಸ್ಥೆ ಕಲ್ಪಿಸುವುದು ಅತ್ಯಗತ್ಯ. ಆದ್ದರಿಂದಲೇ ಕೇಂದ್ರ ಸರ್ಕಾರ ಆಯುಷ್ಮಾನ್‌ ಭಾರತದಂತಹ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ. ಈ ರಾಷ್ಟ್ರೀಯ ಆರೋಗ್ಯ ವಿಮಾ ಯೋಜನೆ ವ್ಯಾಪಕ ವ್ಯಾಪ್ತಿ ಮತ್ತು ಬೃಹತ್ ಪರಿಣಾಮ ಹೊಂದಿರುವ ಲಕ್ಷಾಂತರ ಜನರ ಜೀವನದ ಗುಣಮಟ್ಟ ಸುಧಾರಿಸುವಲ್ಲಿ ಗಮನಾರ್ಹ ಕೊಡುಗೆ ನೀಡಿದೆ ಎಂದರು.

ವೈದ್ಯಕೀಯ ಜರ್ನಲ್ ಪ್ರಕಾರ, ಆಯುಷ್ಮಾನ್ ಭಾರತ್ ಜನ ಆರೋಗ್ಯ ಯೋಜನೆಯಿಂದಾಗಿ ಕ್ಯಾನ್ಸರ್ ಚಿಕಿತ್ಸೆ ಸಮಯೋಚಿತವಾಗಿ ಪ್ರಾರಂಭಿಸುವಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿದೆ. ಈ ಯೋಜನೆ ಪ್ರಾರಂಭದ ಹಿಂದಿನ ಅವಧಿಗೆ ಹೋಲಿಸಿದರೆ ಕ್ಯಾನ್ಸರ್ ರೋಗನಿರ್ಣಯ ಮತ್ತು ಚಿಕಿತ್ಸೆಯ ಪ್ರಾರಂಭದ ನಡುವಿನ ಅವಧಿ ಕಡಿಮೆ ಮಾಡಲಾಗಿದೆ. ಇದು ಮುಖ್ಯವಾಗಿ ಕಡಿಮೆ ಆದಾಯದ ಗುಂಪುಗಳಿಗೆ ಅನುಕೂಲವಾಗಿದೆ. ಈಗ ಈ ಯೋಜನೆ ವ್ಯಾಪ್ತಿಯನ್ನು 70 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲಾ ಹಿರಿಯ ನಾಗರಿಕರನ್ನು ಸೇರಿಸಲು ವಿಸ್ತರಿಸಲಾಗಿದೆ. ಇದು ಹಿರಿಯ ನಾಗರಿಕರು ಕ್ಯಾನ್ಸರ್ ಸೇರಿ ಹಲವಾರು ಕಾಯಿಲೆಗಳಿಗೆ ಕೈಗೆಟುಕುವ ದರದಲ್ಲಿ ಚಿಕಿತ್ಸೆ ಪಡೆಯಲು ಸಹಕಾರಿಯಾಗಿದೆ ಎಂದರು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಜೀವನಶೈಲಿ ಹಾಗೂ ಆಹಾರ ಪದ್ಧತಿಯಿಂದಾಗಿ ಕ್ಯಾನ್ಸರ್‌ ರೋಗ ಅತ್ಯಧಿಕವಾಗಿ ಕಂಡು ಬರುತ್ತಿದೆ. ಆರಂಭಿಕವಾಗಿ ಕಂಡು ಹಿಡಿದು ಚಿಕಿತ್ಸೆ ನೀಡಬೇಕಾಗಿದೆ. ಅದಕ್ಕಾಗಿ ಗ್ರಾಮೀಣ ಪ್ರದೇಶ ಜನರ ಆರೋಗ್ಯ ಸುಧಾರಿಸಲು ಅತೀ ಹೆಚ್ಚು ಅನುದಾನ ನೀಡಲಾಗುತ್ತಿದೆ. ಉತ್ತರ ಕರ್ನಾಟಕದಲ್ಲಿ ಕೆಎಲ್‌ಇ ಸಂಸ್ಥೆಯು ಜನರ ಅನಾರೋಗ್ಯವನ್ನು ಹೋಗಲಾಡಿಸಲು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.

ಕೆಎಲ್ ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಮಾತನಾಡಿ, ದಾನಿಗಳಿಂದಲೇ ಕೆಎಲ್ಇ ಸಂಸ್ಥೆಯು ಹೆಮ್ಮರವಾಗಿ ಬೆಳೆದು ಬಂದಿದೆ. ಸಪ್ತರ್ಷಿಗಳು ನೆಟ್ಟ ಸಸಿ ಇಂದು ಬೃಹದಾಕಾರವಾಗಿದ್ದು, ಮುಖ್ಯವಾಗಿ ಆರೋಗ್ಯ, ತಾಂತ್ರಿಕ ಹಾಗೂ ಕೃಷಿ ವಿಜ್ಞಾನ ಶಿಕ್ಷಣ ನೀಡುತ್ತಿದೆ. ಈ ಭಾಗದಲ್ಲಿ ಕ್ಯಾನ್ಸರ್‌ ಅತೀ ಹೆಚ್ಚು ಕಂಡು ಬರುತ್ತಿದ್ದು, ಅದರ ನಿರ್ಮೂಲನೆಗಾಗಿ ಸುಮಾರು 300 ಹಾಸಿಗೆಗಳ ಆಸ್ಪತ್ರೆ ಜನಸೇವೆಗೆ ನೀಡಲಾಗಿದೆ ಎಂದು ತಿಳಿಸಿದರು.

ಈ ವೇಳ‍ೆ ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕೊಹೊಳಿ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ, ಸಂಸದ ಜಗದೀಶ ಶೆಟ್ಟರ್‌, ಸಂಸ್ಥೆಯ ಅಧ್ಯಕ್ಷ ಮಹಾಂತೇಶ ಕೌಜಲಗಿ, ದಾನಿಗಳಾದ ಡಾ. ಸಂಪತಕುಮಾರ ಎಸ್. ಶಿವಣಗಿ ಹಾಗೂ ಡಾ. ಉದಯಾ ಶಿವಣಗಿ ಇತರರಿದ್ದರು.

Share this article