ಸಚಿವೆ ಹೆಬ್ಬಾಳ್ಕರ್‌ ಕ್ಷೇತ್ರದಲ್ಲೇ ಶೆಟ್ಟರ್‌ ‘ಬಾಡಿಗೆ ಮನೆ’

ಸಾರಾಂಶ

ಬೆಳಗಾವಿ ಬಿಜೆಪಿ ಅಭ್ಯರ್ಥಿ, ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಹಿಂದೆ ನೀಡಿದ್ದ ವಾಗ್ದಾನದಂತೆಯೇ ಇದೀಗ ಬೆಳಗಾವಿಯಲ್ಲಿ ಮನೆ ಮಾಡಿದ್ದಾರೆ.

ಬೆಳಗಾವಿ: ಬೆಳಗಾವಿ ಬಿಜೆಪಿ ಅಭ್ಯರ್ಥಿ, ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಹಿಂದೆ ನೀಡಿದ್ದ ವಾಗ್ದಾನದಂತೆಯೇ ಇದೀಗ ಬೆಳಗಾವಿಯಲ್ಲಿ ಮನೆ ಮಾಡಿದ್ದಾರೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಪ್ರತಿನಿಧಿಸುತ್ತಿರುವ ಬೆಳಗಾವಿ ಗ್ರಾಮೀಣ ಕ್ಷೇತ್ರದ ಎಚ್‌.ಡಿ.ಕುಮಾರಸ್ವಾಮಿ ಬಡಾವಣೆಯ ಪ್ರಥಮ ಮುಖ್ಯರಸ್ತೆ, 3ನೇ ತಿರುವಿನಲ್ಲಿರುವ ಮನೆಯನ್ನು ಬಾಡಿಗೆ ಪಡೆದಿದ್ದಾರೆ. 

ಯುಗಾದಿ ಹಬ್ಬದ ದಿನ, ಮಂಗಳವಾರದಂದು ತಮ್ಮ ಕುಟುಂಬ ಸದಸ್ಯರೊಂದಿಗೆ ಶೆಟ್ಟರ್‌ ಅವರು ಗೃಹ ಪ್ರವೇಶ ಮಾಡಿದರು. ಶೆಟ್ಟರ್‌ ಹೊರಗಿನವರು, ಅವರು ತಮ್ಮ ಸ್ಥಳೀಯ ವಿಳಾಸ ಹೇಳಲಿ ಎಂದು ಲಕ್ಷ್ಮೀ ಹೆಬ್ಬಾಳ್ಕರ್‌ ಚುನಾವಣಾ ಪ್ರಚಾರದ ವೇಳೆ ಸವಾಲು ಹಾಕಿದ ಬೆನ್ನಲ್ಲೇ ಅವರ ಕ್ಷೇತ್ರದಲ್ಲೇ ಮನೆ ಮಾಡುವ ಮೂಲಕ ಶೆಟ್ಟರ್‌ ತಿರುಗೇಟು ನೀಡಿದಂತಾಗಿದೆ.

ಮನೆಯಲ್ಲಿ ಪೂಜಾ ಕೈಂಕರ್ಯದ ಬಳಿಕ ಹಾಲು ಉಕ್ಕಿಸುವ ಶಾಸ್ತ್ರವೂ ನಡೆಯಿತು. ಈ ವೇಳೆ, ಸಂಸದೆ ಮಂಗಲ ಅಂಗಡಿ, ಜಗದೀಶ್‌ ಶೆಟ್ಟರ್‌ ಪುತ್ರ ಸಂಕಲ್ಪ, ಸೊಸೆ ಶ್ರದ್ಧಾ ಶೆಟ್ಟರ್‌ ಮತ್ತಿತರರು ಉಪಸ್ಥಿತರಿದ್ದರು. ಬಳಿಕ ಮಾತನಾಡಿ, ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ನಾನು ಗೃಹ ಪ್ರವೇಶ ಮಾಡಿದ್ದೇನೆ. ಬೆಳಗಾವಿಯಲ್ಲಿ ನಾನು ಕಚೇರಿಯನ್ನೂ ತೆರೆಯುತ್ತೇನೆ. ನಮ್ಮ ಕಾರ್ಯಕರ್ತರಿಗೆ ವಾಗ್ದಾನ ಮಾಡಿದಂತೆ ಮನೆ ಮಾಡಿದ್ದೇನೆ ಎಂದರು.

Share this article