ಡಿ.9 ರಿಂದ ಹತ್ತು ದಿನ ಬೆಳಗಾವಿಯ ಚಳಿಗಾಲದ ಅಧಿವೇಶನ : ರಾಜ್ಯ ಸರ್ಕಾರಕ್ಕೆ ಅಗ್ನಿ ಪರೀಕ್ಷೆ

KannadaprabhaNewsNetwork |  
Published : Dec 08, 2024, 01:18 AM ISTUpdated : Dec 08, 2024, 06:16 AM IST
ಸುವರ್ಣ ಸೌಧ | Kannada Prabha

ಸಾರಾಂಶ

ಉಪ ಚುನಾವಣೆ ಭರ್ಜರಿ ಗೆಲುವು ಹಾಗೂ ಜನ ಕಲ್ಯಾಣೋತ್ಸವ ಯಶಸ್ಸಿನ ಹುಮ್ಮಸ್ಸಿನಲ್ಲಿರುವ ರಾಜ್ಯ ಸರ್ಕಾರಕ್ಕೆ ಸೋಮವಾರದಿಂದ ಹತ್ತು ದಿನಗಳ ಕಾಲ ನಡೆಯಲಿರುವ ಬೆಳಗಾವಿಯ ಚಳಿಗಾಲದ ಅಧಿವೇಶನದ ರೂಪದಲ್ಲಿ ಅಗ್ನಿ ಪರೀಕ್ಷೆ ಎದುರಾಗಿದೆ.

 ಬೆಂಗಳೂರು : ಉಪ ಚುನಾವಣೆ ಭರ್ಜರಿ ಗೆಲುವು ಹಾಗೂ ಜನ ಕಲ್ಯಾಣೋತ್ಸವ ಯಶಸ್ಸಿನ ಹುಮ್ಮಸ್ಸಿನಲ್ಲಿರುವ ರಾಜ್ಯ ಸರ್ಕಾರಕ್ಕೆ ಸೋಮವಾರದಿಂದ ಹತ್ತು ದಿನಗಳ ಕಾಲ ನಡೆಯಲಿರುವ ಬೆಳಗಾವಿಯ ಚಳಿಗಾಲದ ಅಧಿವೇಶನದ ರೂಪದಲ್ಲಿ ಅಗ್ನಿ ಪರೀಕ್ಷೆ ಎದುರಾಗಿದೆ.

ವಕ್ಫ್‌, ಮುಡಾ, ಬಾಣಂತಿಯರ ಸಾವಿನಂತಹ ವಿವಾದಗಳನ್ನು ಮುಂದಿಟ್ಟುಕೊಂಡು ಸರ್ಕಾರದ ಮೇಲೆ ಮುಗಿ ಬೀಳಲು ಪ್ರತಿಪಕ್ಷಗಳು ಸಜ್ಜಾಗಿದ್ದರೆ, ಕೊರೋನಾ ಹಗರಣ ಕುರಿತ ಕುನ್ಹಾ ವರದಿ, ಬಿ.ಎಸ್‌.ಯಡಿಯೂರಪ್ಪ ಹಾಗೂ ಬಿ.ವೈ.ವಿಜಯೇಂದ್ರ ಮೇಲಿನ ಬಿಡಿಎ ಹಗರಣ ಆರೋಪ, ಲೈಂಗಿಕ ದೌರ್ಜನ್ಯ ಪ್ರಕರಣ, ಯತ್ನಾಳ್‌-ವಿಜಯೇಂದ್ರ ಕಚ್ಚಾಟ ಪ್ರಸ್ತಾಪಿಸಿ ಪ್ರತಿಪಕ್ಷಗಳನ್ನು ಕಟ್ಟಿ ಹಾಕಲು ಸರ್ಕಾರವೂ ಸಿದ್ಧತೆ ನಡೆಸಿದೆ. ಹೀಗಾಗಿ ಸದನ ಕದನದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ಜಟಾಪಟಿ ನಿರೀಕ್ಷಿಸಲಾಗಿದೆ.

ಕುಂದಾ ನಗರಿಯ ಸುವರ್ಣಸೌಧದಲ್ಲಿ 11ನೇ ಚಳಿಗಾಲದ ಅಧಿವೇಶನ ನಡೆಯಲಿದೆ. ರಾಜ್ಯ ಸರ್ಕಾರಕ್ಕೆ ಮುಡಾ ಪ್ರಕರಣದಲ್ಲಿ ಇ.ಡಿ (ಜಾರಿ ನಿರ್ದೇಶನಾಲಯ) ಹೊರಗೆಡವಿರುವ ತನಿಖಾ ವಿಚಾರಗಳನ್ನು ಮುಂದಿಟ್ಟುಕೊಂಡು ಮುಖಭಂಗ ಉಂಟು ಮಾಡಲು ಬಿಜೆಪಿ-ಜೆಡಿಎಸ್ ಸಜ್ಜಾಗಿವೆ. ಇದರ ಜತೆಗೆ ವಕ್ಫ್‌ ಭೂ ವಿವಾದ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳ ಮಾನ್ಯತೆಗಿದ್ದ ನಿಯಮ ಸಡಿಲ, ಗುತ್ತಿಗೆಯಲ್ಲೂ ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡಬೇಕೆಂಬ ಪ್ರಸ್ತಾವನೆ ಸೇರಿ ರಾಜ್ಯ ಸರ್ಕಾರ ಅಲ್ಪಸಂಖ್ಯಾತರ ತುಷ್ಠೀಕರಣ ನಡೆಸುತ್ತಿದೆ ಎಂದು ಬಿಂಬಿಸುವುದು, ಜತೆಗೆ ಬಾಣಂತಿಯರ ಸರಣಿ ಸಾವು ಉಂಟಾಗಿದ್ದರೂ ಯಾರೊಬ್ಬರೂ ಬಳ್ಳಾರಿಗೆ ಭೇಟಿ ನೀಡಿ ಪರಿಹಾರ ನೀಡದಿರುವುದು ಹಾಗೂ ತಪ್ಪಿತಸ್ಥ ಕಂಪೆನಿಗಳ ಮೇಲೆ ಕ್ರಮ ಕೈಗೊಳ್ಳದ ಬಗ್ಗೆ ಸದನದಲ್ಲಿ ಆಕ್ರೋಶ ವ್ಯಕ್ತಪಡಿಸಲೂ ಎನ್‌ಡಿಎ ಕೂಟ ಸಿದ್ದತೆ ನಡೆಸಿದೆ.

ಅದೇ ರೀತಿ ಗ್ಯಾರಂಟಿಗಳ ಅನುಷ್ಠಾನದಲ್ಲಿನ ಲೋಪ, ಅಭಿವೃದ್ಧಿ ಕಾಮಗಾರಿಗಳಿಗೆ ಆದ್ಯತೆ ನೀಡದಿರುವುದು, ಅಧಿಕಾರ ಹಂಚಿಕೆಯಂಥ ಅಸ್ತ್ರಗಳೊಂದಿಗೆ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಮುಂದಾಗಿವೆ ಎಂದು ತಿಳಿದುಬಂದಿದೆ.

ಪ್ರತಿಪಕ್ಷಗಳ ಮೇಲೆ ಪ್ರತಿದಾಳಿಗೆ ಕೈ ಸಜ್ಜು: ಮತ್ತೊಂದೆಡೆ ಅಧಿವೇಶನದಲ್ಲಿ ನ್ಯಾ.ಕುನ್ಹಾ ವರದಿ ಪ್ರಸ್ತಾಪಿಸುವ ಮೂಲಕ ಯಡಿಯೂರಪ್ಪ ಹಾಗೂ ಬಿ.ಶ್ರೀರಾಮುಲು ಮೇಲೆ ಕ್ರಿಮಿನಲ್‌ ಪ್ರಕರಣ ದಾಖಲಿಸುವಂತೆ ಮಾಡಿರುವ ಶಿಫಾರಸನ್ನು ಎತ್ತಿ ತೋರಿಸಿ ಪ್ರತಿದಾಳಿ ನಡೆಸಲು ಕಾಂಗ್ರೆಸ್‌ ಸಜ್ಜಾಗಿದೆ.

ಜತೆಗೆ ಯಡಿಯೂರಪ್ಪ ಹಾಗೂ ಬಿ.ವೈ.ವಿಜಯೇಂದ್ರ ಮೇಲಿನ ಬಿಡಿಎ ಹಗರಣ ಆರೋಪ, ಯಡಿಯೂರಪ್ಪ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ, ಗಣಿ ಅಕ್ರಮ ಸೇರಿ ವಿವಿಧ ಹಗರಣ, ಕೇಂದ್ರದ ಅನುದಾನ ತಾರತಮ್ಯ, ಮುನಿರತ್ನ ಪ್ರಕರಣ, ಯತ್ನಾಳ್‌-ವಿಜಯೇಂದ್ರ ಕಚ್ಚಾಟ ಪ್ರಸ್ತಾಪಿಸಿ ಪ್ರತಿಪಕ್ಷಗಳನ್ನು ಕಟ್ಟಿ ಹಾಕಲು ಸರ್ಕಾರವೂ ಸರ್ವ ಸಿದ್ಧತೆ ನಡೆಸಿದೆ. ಪ್ರತಿಪಕ್ಷಗಳು ಪ್ರಸ್ತಾಪಿಸುವ ಯಾವ್ಯಾವ ವಿವಾದದ ಬಗ್ಗೆ ಯಾರೆಲ್ಲ ಸಚಿವರು ಉತ್ತರಿಸಬೇಕು. ಅವರಿಗೆ ಪೂರಕವಾಗಿ ಯಾರೆಲ್ಲ ಶಾಸಕರು ಸಾಥ್‌ ನೀಡಬೇಕು ಎಂಬ ಹೊಣೆಗಾರಿಕೆಯನ್ನೂ ನಿಗದಿ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಹೀಗಾಗಿ ಆಡಳಿತ-ಪ್ರತಿಪಕ್ಷಗಳ ಆರೋಪ-ಪ್ರತ್ಯಾರೋಪಗಳ ಮೂಲಕ ಚಳಿಗಾಲದ ಅಧಿವೇಶನವು ಬಿಸಿಯೇರುವ ಸಾಧ್ಯತೆಯಿದೆ.

15 ವಿಧೇಯಕಗಳ ಮಂಡನೆ: ಮತ್ತೊಂದೆಡೆ ರಾಜ್ಯ ಸರ್ಕಾರ ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯ ಕುಲಾಧಿಪತಿ ಸ್ಥಾನ ರಾಜ್ಯಪಾಲರಿಂದ ಕಿತ್ತು ಮುಖ್ಯಮಂತ್ರಿಗಳಿಗೆ ನೀಡುವ ವಿಧೇಯಕ ಮಂಡಿಸುತ್ತಿದ್ದು, ಇದು ರಾಜ್ಯಪಾಲರು ಹಾಗೂ ಸರ್ಕಾರದ ನಡುವಿನ ಬಿರುಕು ತೀವ್ರಗೊಳಿಸುವ ಸಾಧ್ಯತೆಯಿದೆ.

ಇನ್ನು 11 ಸಾವಿರ ಕೋಟಿಗೂ ಹೆಚ್ಚು ಗಣಿ ಆದಾಯ ಸಂಗ್ರಹಿಸುವ ಮೂರು ಖನಿಜ ಮತ್ತು ಕಲ್ಲು ಗಣಿಗಾರಿಕೆ ತಿದ್ದುಪಡಿ ವಿಧೇಯಕಗಳು, ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳ ಮಾನ್ಯತೆ ಉಳಿಸಲು ನಿರ್ದಿಷ್ಟ ಸಂಖ್ಯೆಯ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ದಾಖಲಾತಿ ಇರಬೇಕೆಂಬ ನಿಯಮ ಸಡಿಲಿಕೆ, ಠೇವಣಿದಾರರ ಹಿತರಕ್ಷಣೆ ತಿದ್ದುಪಡಿ ವಿಧೇಯಕ ಸೇರಿ 15 ವಿಧೇಯಕ ಹಾಗೂ ತಿದ್ದುಪಡಿ ವಿಧೇಯಕ ಮಂಡನೆಗೆ ರಾಜ್ಯ ಸರ್ಕಾರ ಮುಂದಾಗಿದೆ.

 ಉ-ಕ ಅಭಿವೃದ್ಧಿ ಬಗ್ಗೆ ಪ್ರತ್ಯೇಕ ಚರ್ಚೆ

ಪ್ರತಿ ಬಾರಿಯ ಚಳಿಗಾಲದ ಅಧಿವೇಶನದ ಮಾದರಿಯಲ್ಲೇ ಉತ್ತರ ಕರ್ನಾಟಕ ಭಾಗದ ಬಗ್ಗೆ ಪ್ರತ್ಯೇಕ ಚರ್ಚೆಗೆ ಉಭಯ ಸದನಗಳಲ್ಲಿ ಅವಕಾಶ ನೀಡುವ ಸಾಧ್ಯತೆಯಿದೆ. ಕೃಷ್ಣಾ ಮೇಲ್ದಂಡೆ ಯೋಜನೆ, ಮಹದಾಯಿ ಯೋಜನೆ ಸೇರಿ ಉತ್ತರ ಕರ್ನಾಟಕ ಭಾಗದ ನೀರಾವರಿ ಯೋಜನೆಗಳು, ಬೆಳಗಾವಿ ಸುವರ್ಣ ಸೌಧಕ್ಕೆ ಇಲಾಖೆಗಳು ಸ್ಥಳಾಂತರಗೊಳ್ಳದಿರುವುದು, ಅನುದಾನ ತಾರತಮ್ಯ ಸೇರಿ ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ಕುರಿತು ಚರ್ಚೆ ನಡೆಯುವ ಸಾಧ್ಯತೆಯಿದೆ. ಇದೇ ವೇಳೆ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸರ್ಕಾರ ವಿಶೇಷ ಪ್ಯಾಕೇಜ್‌ ಘೋಷಿಸುವ ನಿರೀಕ್ಷೆಯೂ ಇದೆ ಎಂದು ಮೂಲಗಳು ತಿಳಿಸಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜೆಡಿಯು ನಾಯಕ ನಿತೀಶ್‌ ರಾಜ್ಯಸಭೆಗೆ - ಸಿಎಂ ಸ್ಥಾನಕ್ಕೆ ರಾಜೀನಾಮೆ
ಈ ಸಾಲಲ್ಲಿ ಅಬಕಾರಿ ರಾಜಸ್ವ ಟಾರ್ಗೆಟ್‌ ಕಷ್ಟ? 11 ತಿಂಗಳಲ್ಲಿ ಮದ್ಯ ಮಾರಾಟ ಗಣನೀಯ ಕುಸಿತ