ಬಿಜೆಪಿಯವರಿಗೆ ಅಭಿವೃದ್ಧಿ ಬೇಕಿಲ್ಲ, ರಾಜಕೀಯವಷ್ಟೇ: ಸಚಿವ ಸಂತೋಷ ಲಾಡ್‌

KannadaprabhaNewsNetwork |  
Published : Dec 08, 2024, 01:18 AM IST
454 | Kannada Prabha

ಸಾರಾಂಶ

ಈಗಾಗಲೇ ವಕ್ಫ್ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಸ್ಪಷ್ಟೀಕರಣ ಕೊಟ್ಟಿದ್ದು, ಯಾವೊಬ್ಬ ರೈತನಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಹೇಳಿದ್ದಾರೆ. ಆದರೆ. ಸುಖಾಸುಮ್ಮನೆ ಬಿಜೆಪಿ ಇದರಲ್ಲಿ ರಾಜಕಾರಣ ಮಾಡಿ, ತಮ್ಮಲ್ಲಿಯೇ ಒಡಕು ಮಾಡಿಕೊಳ್ಳುತ್ತಿದೆ.

ಹುಬ್ಬಳ್ಳಿ:

ಬಿಜೆಪಿಯವರಿಗೆ ಅಭಿವೃದ್ಧಿ ಬೇಕಿಲ್ಲ, ಬದಲಾಗಿ ರಾಜಕೀಯ ಅಷ್ಟೇ ಬೇಕು. ರಾಜಕಾರಣ ಲಾಭ ಪಡೆಯುವುದು ಅವರ ಸಿದ್ಧಾಂತವಾಗಿದೆ ಎಂದು ಸಚಿವ ಸಂತೋಷ ಲಾಡ್ ಕಿಡಿಕಾರಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲ ಸರ್ಕಾರಗಳು ವಕ್ಫ್ ವಿಚಾರವಾಗಿ ನೋಟಿಸ್ ಕೊಟ್ಟಿವೆ. ಆದರೆ, ಬಿಜೆಪಿ ಇದನ್ನು ರಾಜಕೀಯಕ್ಕೆ ಬಳಕೆ ಮಾಡಿಕೊಳ್ಳುತ್ತಿದೆ. ಈ ಹಿಂದೆ ಉಳುವವನೇ ಭೂಮಿಯ ಒಡೆಯ ಕಾರ್ಯಕ್ರಮವನ್ನು ಜಾರಿಗೆ ತಂದಿದ್ದು ಕಾಂಗ್ರೆಸ್. ಬಡವರಿಗೆ ಭೂಮಿ ಒದಗಿಸುವ ಕಾರ್ಯವನ್ನು ಕಾಂಗ್ರೆಸ್ ಮಾಡಿದೆ ಎಂದರು.

ಈಗಾಗಲೇ ವಕ್ಫ್ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಸ್ಪಷ್ಟೀಕರಣ ಕೊಟ್ಟಿದ್ದು, ಯಾವೊಬ್ಬ ರೈತನಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಹೇಳಿದ್ದಾರೆ. ಆದರೆ. ಸುಖಾಸುಮ್ಮನೆ ಬಿಜೆಪಿ ಇದರಲ್ಲಿ ರಾಜಕಾರಣ ಮಾಡಿ, ತಮ್ಮಲ್ಲಿಯೇ ಒಡಕು ಮಾಡಿಕೊಳ್ಳುತ್ತಿದೆ ಎಂದು ತಿಳಿಸಿದರು. ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಹಾಮಾನವತಾವಾದಿ ಬಸವಣ್ಣನವರ ಬಗ್ಗೆ ನೆಗೆಟಿವ್ ಮಾತನಾಡಿದರೆ ಪ್ರಚಾರ ಪಡೆಯಬಹುದೆಂಬ ಉದ್ದೇಶದಿಂದ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಹೈಕಮಾಂಡ್‌ ತೀರ್ಮಾನಿಸುತ್ತೆ:

ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಬಣ ರಾಜಕೀಯ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಲಾಡ್, ಯಾರು ವೈಯಕ್ತಿಕ ಹೇಳಿಕೆ ಕೊಟ್ಟಿಲ್ಲ. ಆದರೆ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಈಗಾಗಲೇ ಈ ಬಗ್ಗೆ ಸ್ಪಷ್ಟೀಕರಣ ಕೊಟ್ಟಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಅಪ್ರಸ್ತುತ. ಸಿಎಂ ಬದಲಾವಣೆ ಹೈಕಮಾಂಡ್ ತೀರ್ಮಾನಿಸುತ್ತದೆ ಎಂದು ಸ್ಪಷ್ಟಪಡಿಸಿದರು.

ನಕಲಿ ಕಾರ್ಮಿಕ ಕಾರ್ಡ್‌ ರದ್ದು ಮಾಡಲು ಹೋಗಿ ಅಸಲಿ ಕಾರ್ಮಿಕರ ಕಾರ್ಡ್ ರದ್ದಾಗಿರುವ ಕುರಿತು ಮಾತನಾಡಿ, ಆ ತರಹ ರಾಜ್ಯದಲ್ಲಿ ಯಾವುದೇ ಘಟನೆ ನಡೆದಿಲ್ಲ. ಒಂದು ವೇಳೆ ಹಾಗೇನಾದರೂ ನಡೆದಿದ್ದೆ ಆದಲ್ಲಿ ಕಾರ್ಮಿಕ ಕಾರ್ಡ್‌ ಮಾಡಿಸಿಕೊಡುವ ಪ್ರಾಮಾಣಿಕ ಕೆಲಸ ಮಾಡಲಾಗುವುದು ಎಂದರು.

ಮಾಹಿತಿಯಿಲ್ಲ:

ಸಚಿವ ಸಂಪುಟ ವಿಸ್ತರಣೆ ಕುರಿತು ಮಾತನಾಡಿ, ಈ ಕುರಿತು ನನಗೆ ಯಾವುದೇ ಮಾಹಿತಿಯಿಲ್ಲ. ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ಸರ್ಕಾರ ನಿರ್ಧಾರ ಮಾಡಿದೆ. ವಿಪಕ್ಷಗಳು ರಾಜಕೀಯ ಮಾಡದೇ ಇದಕ್ಕೆ ಸಹಕಾರ ನೀಡಬೇಕು ಎಂದರು.

ಮುಸಲ್ಮಾನರು ನಮ್ಮ ಬ್ರದರ್ಸ್ ಅಂತ ಡಿಸಿಎಂ ಡಿ.ಕೆ. ಶಿವಕುಮಾರ ಹೇಳಿದ್ದು, ಕುಕ್ಕರ್‌ನಲ್ಲಿ ಬಾಂಬ್ ಇಟ್ಟವರನ್ನಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ಹಿಂದೆ ಬಿಜೆಪಿ ಸರ್ಕಾರದಲ್ಲಿ ಮುಸ್ಲಿಂ ಸಚಿವರಿರಲಿಲ್ಲವೇ?. ಬರೀ ಮುಸ್ಲಿಮರ ವಿರುದ್ಧ ಮಾತನಾಡಿ ಹಿಂದೂಗಳ ಮತ ಪಡೆಯುತ್ತಾರೆ. ಹಿಂದೂಗಳ ಮೇಲೆ ಅಷ್ಟೊಂದು ಕಾಳಜಿ ಇವರಿಗಿದ್ದರೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು 10 ವರ್ಷದ ಕಳೆದರೂ ಹಿಂದೂ ಪ್ಯಾಕೇಜ್ ಘೋಷಣೆ ಮಾಡಿದ್ದಾರೆಯೇ ಎಂದು ಪ್ರಶ್ನಿಸಿದರು.

ಓಲೈಕೆ ಮಾಡಿಲ್ಲ:

ಹುಬ್ಬಳ್ಳಿ ಗಲಭೆ ಪ್ರಕರಣ ವಾಪಸ್, ಮುಸ್ಲಿಂ ಓಲೈಕೆ ವಿಚಾರಕ್ಕೆ ತಿರುಗೇಟು ನೀಡಿ, ಇದು ಓಲೈಕೆಯಲ್ಲ. ಪದೇ ಪದೇ ಇದೊಂದೇ ಪ್ರಕರಣ ಕುರಿತು ಏಕೆ ಕೇಳುತ್ತೀರಿ?. ಇದೇ ತರಹದ 42 ಪ್ರಕರಣ ಹಿಂಪಡೆಯಲಾಗಿದೆ. ಹಿಂದೆಯೂ ಬಿಜೆಪಿ ಅಧಿಕಾರದಲ್ಲಿದ್ದ ವೇಳೆ ಪೊಲೀಸರ ಮೇಲೆ ಹಲ್ಲೆ ಮಾಡಿದ ಪ್ರಕರಣವನ್ನು ಹಿಂಪಡೆದಿದ್ದಾರೆ ಅದರ ಬಗ್ಗೆಯೂ ಚರ್ಚೆಯಾಗಲಿ ಎಂದು ಲಾಡ್‌ ಹೇಳಿದರು.

ಜೋಶಿ ಉತ್ತರಿಸಲಿ:

ನೇಹಾ ಹಿರೇಮಠ ಪ್ರಕರಣ ನಡೆದ ವೇಳೆ ಬಿಜೆಪಿ ನಾಯಕರೆಲ್ಲರೂ ಓಡಿ ಬಂದು ಸಾಂತ್ವನ ಹೇಳಿದರು. ಅದೇ ಅಂಜಲಿ ಅಂಬಿಗೇರ ಕೊಲೆಯಾದ ವೇಳೆ ಎಲ್ಲಿದ್ದರು. ಸ್ಥಳೀಯರೇ ಆಗಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಬಂದು ಸಾಂತ್ವನ ಹೇಳಬೇಕಿತ್ತಲ್ಲವೇ, ಏಕೆ ಬರಲಿಲ್ಲ?. ಈ ಕುರಿತು ಜೋಶಿ ಅವರಿಗೆ ಪ್ರಶ್ನೆ ಮಾಡಿ ಎಂದರು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌