ಪುರ ಗ್ರಾಮ ಪಂಚಾಯಿತಿ ನೂತನ ಉಪಾಧ್ಯಕ್ಷ ಅಶೋಕ್ ಗೆ ಅಭಿನಂದನೆ
ಜನಪ್ರತಿನಿಧಿಗಳಾಗಿ ಆಯ್ಕೆಯಾದವರು ರಾಜಕೀಯವನ್ನು ಚುನಾವಣೆಗೆ ಮಾತ್ರ ಸೀಮಿತ ಮಾಡುವ ಮೂಲಕ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಕಡೂರು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಹೇಳಿದರು.
ತಾಲೂಕಿನ ಪುರ ಗ್ರಾಮ ಪಂಚಾಯಿತಿ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದ ಅಶೋಕ್ ಗೆ ಅಭಿನಂದಿಸಿ ಮಾತನಾಡಿ, ಜನರು ಚುನಾವಣೆ ಮೂಲಕ ಗ್ರಾಪಂ ಸದಸ್ಯರಾಗಿ ಆಯ್ಕೆ ಮಾಡಿ ಕಳಿಸಿದಾಗ ಅವರ ಜವಾಬ್ದಾರಿ ಹೆಚ್ಚಿರುತ್ತದೆ. ಜನತಂತ್ರ ವ್ಯವಸ್ಥೆಯಲ್ಲಿ ಚುನಾವಣೆ ಅನಿವಾರ್ಯ. ಜನಪ್ರತಿನಿಧಿಗಳು ತಮ್ಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಅಭಿವೃದ್ಧಿಗೆ ಆಧ್ಯತೆ ನೀಡಿ ಕೆಲಸ ಮಾಡಲಿ ಎಂದರು.ಅಭಿವೃದ್ಧಿಯೇ ಬೇರೆ ರಾಜಕೀಯವೇ ಬೇರೆ. ಕುಡಿವ ನೀರು, ರಸ್ತೆ, ಬೀದಿದೀಪ ಸೇರಿದಂತೆ ಸರ್ಕಾರದ ಸವಲತ್ತುಗಳು ಜನರಿಗೆ ತಲುಪುವಂತೆ ನೂತನ ಉಪಾಧ್ಯಕ್ಷ ಅಶೋಕ್, ಅಧ್ಯಕ್ಷರು ಮತ್ತು ಸದಸ್ಯರ ಸಹಕಾರದಿಂದ ಕೆಲಸ ನಿರ್ವಹಿಸಲಿ ಎಂದು ಹೇಳಿದರು.
ಕಾರ್ಯಕ್ರಮಕ್ಕೂ ಮುನ್ನ ನಡೆದ ಚುನಾವಣೆಯಲ್ಲಿ ಅಭ್ಯರ್ಥಿ ಮನು ಕುಮಾರ್ 2 ಮತ ಪಡೆದರೆ, ಅಶೋಕ್ 8 ಮತ ಪಡೆದು ಆಯ್ಕೆಯಾದರೆಂದು ಚುನಾವಣಾಧಿಕಾರಿ ಜಯದೇವ ಪ್ರಕಟಿಸಿದರು.
ಪುರ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷರಾಗಿ ಆಯ್ಕೆಯಾದ ಅಶೋಕ್ ಅವರನ್ನು ಅಭಿನಂದಿಸಲಾಯಿತು. ಕಡೂರು ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್ ಮತ್ತಿತರರು ಇದ್ದರು.