ಕನ್ನಡಪ್ರಭ ವಾರ್ತೆ ದಾವಣಗೆರೆ
ಮುಂಬರುವ 2028ರ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತವಿದ್ದು, ಈ ಹಿನ್ನೆಲೆಯಲ್ಲಿ ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಬೇಕು ಎಂದು ಪಕ್ಷದ ರಾಜ್ಯ ಉಸ್ತುವಾರಿ ರಾಧಾಮೋಹನ ದಾಸ್ ಅಗರವಾಲ್ ಹೇಳಿದರು.ನಗರದ ಗುಂಡಿ ಮಹದೇವಪ್ಪ ಕಲ್ಯಾಣ ಮಂಟಪದಲ್ಲಿ ಗುರುವಾರ ದಕ್ಷಿಣ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಹಾಗೂ ವಿಸ್ತಾರಕರಿಗೆ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭಾರೀ ಬಹುಮತದೊಂದಿಗೆ ಗೆದ್ದು, ಅಧಿಕಾರಕ್ಕೆ ಬರುವುದು ಖಚಿತ. ಆದರೆ, ಅದಕ್ಕೊಂದು ಷರತ್ತು ಸಹ ಇದೆ. ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲೇಬೇಕು. ದಾವಣಗೆರೆ ದಕ್ಷಿಣ ಕ್ಷೇತ್ರವನ್ನು ಗೆಲ್ಲಲೇಬೇಕೆಂಬ ಬಗ್ಗೆ ನಿಮಗೆಲ್ಲರಿಗೂ ಅರಿವು ಇರಬೇಕು ಎಂದು ಕಿವಿಮಾತು ಹೇಳಿದರು.ಉಪಚುನಾವಣೆಗೆ ನಮ್ಮ ಮುಂದೆ ಕಾಲಾವಕಾಶ ಸಾಕಷ್ಟು ಕಡಿಮೆ ಇದೆ. ಕೇವಲ ಒಂದೇ ತಿಂಗಳಷ್ಟೇ ಉಳಿದಿದೆ. ನಮ್ಮೆಲ್ಲಾ ಮುಖಂಡರು, ಕಾರ್ಯಕರ್ತರು ಉಪ ಚುನಾವಣೆ ಮುಗಿಯುವವರೆಗೂ ಬೂತ್ ಬಿಟ್ಟು ಕದಲಬಾರದು. ಕಮಲದ ಗುರುತು ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗಾಗಿ ನೀವೆಲ್ಲರೂ ಕೆಲಸ ಮಾಡಬೇಕು. ಬಿಜೆಪಿಯಲ್ಲಿ ದೊಡ್ಡ ಮಟ್ಟದ ಕಾರ್ಯಕರ್ತರಿದ್ದಾದರೆ. ಇಷ್ಟೊಂದು ಸಂಖ್ಯೆಯಲ್ಲಿದ್ದರೂ ನಾವು ಸೋತರೆ ಅದು ನಾಚಿಕೆಗೇಡಿನ ವಿಷಯವಾಗುತ್ತದೆ ಎಂದು ಎಚ್ಚರಿಸಿದರು.
ಚಹಾ ಮಾರುವ ಸಾಮಾನ್ಯ ವ್ಯಕ್ತಿ ದೇಶದ ಪ್ರಧಾನಿಯಾಗಲು ಬಿಜೆಪಿಯಲ್ಲಿ ಮಾತ್ರ ಸಾಧ್ಯ. ಯಾವುದೇ ರಾಜಕೀಯ ಕುಟುಂಬದ ಹಿನ್ನೆಲೆ ಇಲ್ಲದ ನರೇಂದ್ರ ಮೋದಿ ಈ ಮಟ್ಟಿಗೆ ಬೆಳೆದಿರು
ವುದೇ ಬಿಜೆಪಿ ಕಾರ್ಯಕರ್ತರಿಗೆ ನೀಡುವ ಅವಕಾಶ, ಪ್ರೋತ್ಸಾಹಕ್ಕೆ ಸಾಕ್ಷಿಯಾಗಿದೆ. ಮೋದಿಯವರು ಪ್ರಧಾನಿಯಾಗಿ 12 ವರ್ಷಗಳಾಗಿದ್ದು, ಯಾವುದೇ ಭ್ರಷ್ಟಾಚಾರದ ಆರೋಪ ಕೇಂದ್ರದ ಮೇಲಾಗಲಿ, ಪ್ರಧಾನಿ ಮೇಲಾಗಲಿ ಇಲ್ಲ. ಭ್ರಷ್ಟಾಚಾರ ರಹಿತ ಆಡಳಿತ ನೀಡಿದ ಕೀರ್ತಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ ಎಂದು ತಿಳಿಸಿದರು.
ಹತ್ತಾರು ಸುಳ್ಳು ಹೇಳಿಕೊಂಡೇ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಸಿದ್ದರಾಮಯ್ಯ ಅಹಿಂದ ಜಪ ಮಾಡುತ್ತಿದ್ದುದರಿಂದ ರಾಜ್ಯದ ಜನತೆ ನಂಬಿದ್ದರು. ಅಧಿಕಾರಕ್ಕೆ ಬಂದ ನಂತರ ರೈತರಿಗೆನೀಡುವ 4 ಸಾವಿರ ಕಿಸಾನ್ ಸಮ್ಮಾನ್ ಯೋಜನೆ ನಿಲ್ಲಿಸಿದರು. ಹೈನುಗಾರಿಕೆಗೆ ಯಡಿಯೂರಪ್ಪ ಸಿಎಂ ಆಗಿದ್ದಾಗ ಪ್ರೋತ್ಸಾಹ ನೀಡಿದ್ದರು. ಸಿದ್ದರಾಮಯ್ಯ 1 ಸಾವಿರ ಕೋಟಿ ರು.ಗೂ ಅಧಿಕ ಪ್ರೋತ್ಸಾಹಧನ ಉಳಿಸಿಕೊಂಡಿದ್ದಾರೆ. ಹಣವನ್ನೇ ಕ್ರೋಢೀಕರಿಸಲು ಸಾಧ್ಯವಾಗದೇ ದರ ಏರಿಕೆ ಮಾಡಿ, ಗ್ಯಾರಂಟಿಗಳನ್ನು ತಂದರು ಎಂದು ಕುಟುಕಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ಮಾಜಿ ಸಚಿವರಾದ ಜಿ.ಕರುಣಾಕರ ರೆಡ್ಡಿ, ಎಂ.ಪಿ.ರೇಣುಕಾಚಾರ್ಯ, ಮಾಜಿ ಶಾಸಕರಾದ ಎಸ್.ವಿ.ರಾಮಚಂದ್ರ, ಮಾಡಾಳ್ ವಿರುಪಾಕ್ಷಪ್ಪ, ಎಂ.ಬಸವರಾಜ ನಾಯ್ಕ, ಲೋಕಿಕೆರೆ ನಾಗರಾಜ, ಬಿ.ಜಿ.ಅಜಯಕುಮಾರ, ಕೆ.ಎಂ.ಸುರೇಶ, ಚಂದ್ರಶೇಖರ ಪೂಜಾರ, ಎಚ್.ಸಿ.ಜಯಮ್ಮ, ಪಿ.ಸಿ.ಶ್ರೀನಿವಾಸ ಭಟ್, ಆರ್.ಎಲ್.ಶಿವಪ್ರಕಾಶ, ಅನಿಲಕುಮಾರ ನಾಯ್ಕ, ಅಣ್ಣೇಶ ಐರಣಿ, ಧನಂಜಯ ಕಡ್ಲೇಬಾಳು, ವಿಪ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್.ಶಿವಯೋಗಿಸ್ವಾಮಿ, ಮಾಡಾಳ ಮಲ್ಲಿಕಾರ್ಜುನ, ಎಚ್.ಪಿ.ವಿಶ್ವಾಸ್, ರಾಜು ವೀರಣ್ಣ ಇತರರು ಇದ್ದರು. ಇತರರು ಇದ್ದರು.