ಬೆಳಗಾವೀಲಿ ಬಂಧನ, ದಾವಣಗೆರೇಲಿ ಮುಕ್ತಿ

KannadaprabhaNewsNetwork | Published : Dec 21, 2024 1:15 AM

ಸಾರಾಂಶ

ದಾವಣಗೆರೆ: ಸುವರ್ಣ ಸೌಧದಲ್ಲಿ ಕಲಾಪದ ವೇಳೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ನಿಂಧನಾತ್ಮಕ ಪದ ಬಳಕೆ ಆರೋಪದಡಿ ಗುರುವಾರ ಬಂಧನಕ್ಕೆ ಒಳಗಾಗಿದ್ದ ಬಿಜೆಪಿ ವಿಪ ಸದಸ್ಯ, ಮಾಜಿ ಸಚಿವ ಸಿ.ಟಿ.ರವಿ ಅವರನ್ನು ಹೈಕೋರ್ಟ್ ಆದೇಶದಂತೆ ಶುಕ್ರವಾರ ಸಂಜೆ ನಗರದಲ್ಲಿ ಎಲ್ಲಿದ್ದರೋ ಅಲ್ಲಿಯೇ ಬೆಳಗಾವಿ ಪೊಲೀಸರಿಂದ ಬಂಧಮುಕ್ತಗೊಳಿಸಲಾಯಿತು.

ದಾವಣಗೆರೆ: ಸುವರ್ಣ ಸೌಧದಲ್ಲಿ ಕಲಾಪದ ವೇಳೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ನಿಂಧನಾತ್ಮಕ ಪದ ಬಳಕೆ ಆರೋಪದಡಿ ಗುರುವಾರ ಬಂಧನಕ್ಕೆ ಒಳಗಾಗಿದ್ದ ಬಿಜೆಪಿ ವಿಪ ಸದಸ್ಯ, ಮಾಜಿ ಸಚಿವ ಸಿ.ಟಿ.ರವಿ ಅವರನ್ನು ಹೈಕೋರ್ಟ್ ಆದೇಶದಂತೆ ಶುಕ್ರವಾರ ಸಂಜೆ ನಗರದಲ್ಲಿ ಎಲ್ಲಿದ್ದರೋ ಅಲ್ಲಿಯೇ ಬೆಳಗಾವಿ ಪೊಲೀಸರಿಂದ ಬಂಧಮುಕ್ತಗೊಳಿಸಲಾಯಿತು.

ಬೆಳಗಾವಿಯಿಂದ ಪೊಲೀಸ್ ಕಸ್ಟಡಿಯಲ್ಲಿ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಹಾಜರುಪಡಿಸಲು ಸಿ.ಟಿ.ರವಿ ಅವರನ್ನು ದಾವಣಗೆರೆ ಮಾರ್ಗವಾಗಿ ಕರೆದೊಯ್ಯಲಾಗುತ್ತಿತ್ತು. ಹೈಕೋರ್ಟ್ ಸಿ.ಟಿ.ರವಿ ಅವರನ್ನು ಎಲ್ಲಿದ್ದಾರೋ ಅಲ್ಲಿಯೇ ಬಿಡುಗಡೆಗೊಳಿಸಲು ಆದೇಶ ನೀಡಿದ್ದರಿಂದ ದಾವಣಗೆರೆಯಲ್ಲಿ ಶುಕ್ರವಾರ ಸಂಜೆ ಬೆಳಗಾವಿ ಪೊಲೀಸರು ಬಿಡುಗಡೆ ಪ್ರಕ್ರಿಯೆ ಪೂರ್ಣಗೊಳಿಸಿದರು.

ಅನಂತರ ಸರ್ಕ್ಯೂಟ್ ಹೌಸ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ, ಬೆಳಗಾವಿ ಸೇರಿದಂತೆ 3 ಜಿಲ್ಲೆಗಳ 50 ಗ್ರಾಮಗಳಲ್ಲಿ 11 ಗಂಟೆ ಕಾಲ ತಮ್ಮನ್ನು ಅಲೆದಾಡಿಸಿ, ಮಾನಸಿಕವಾಗಿ ಕುಗ್ಗಿಸುವ ಪ್ರಯತ್ನ, ದೈಹಿಕವಾಗಿ ಹಲ್ಲೆ ಮಾಡುವ ಕೆಲಸವನ್ನು ಪೊಲೀಸ್ ಬಲ ಉಪಯೋಗಿಸಿಕೊಂಡು, ಕಾಂಗ್ರೆಸ್ ಸರ್ಕಾರ ಮಾಡಿದೆ ಎಂದು ಆರೋಪಿಸಿದರು.

ಬಂಧನದ ವೇಳೆ ತಮ್ಮೊಂದಿಗಿದ್ದ ಪಕ್ಷದ ಮುಖಂಡರು, ಸಾಮಾನ್ಯ ಕಾರ್ಯಕರ್ತರು ನಾವು ನಿಮ್ಮೊಂದಿಗಿದ್ದೇವೆಂಬುದನ್ನು ತೋರಿಸಿದ್ದಾರೆ. ಇನ್ನು ನ್ಯಾಯಾಲಯದ ತೀರ್ಪಿನ ಬಗ್ಗೆ ಸತ್ಯ ಮೇವ ಜಯತೇ ಎಂಬುದಾಗಿ ಹೇಳಿದ್ದೆ. ಈಗ ಸತ್ಯಕ್ಕೆ ಜಯ ಸಿಕ್ಕಿದೆ. ಇದರಿಂದ ನಾನು ಹಿಗ್ಗುವುದಿಲ್ಲ. ಕಾಂಗ್ರೆಸ್ ಸರ್ಕಾರವು ಪೊಲೀಸರ ಬಲ ದುರ್ಬಳಕೆ ಮಾಡಿಕೊಂಡು, ಕುಗ್ಗಿಸುವ ಪ್ರಯತ್ನ ಮಾಡಿದರೂ ನಾನು ಕುಗ್ಗುವುದಿಲ್ಲ ಎಂದು ಹೇಳಿದರು.

ಕಾಂಗ್ರೆಸ್ ಸರ್ಕಾರವು ಪ್ರಯೋಗ ಮಾಡಿದ್ದನ್ನು 35 ವರ್ಷಗಳ ಹಿಂದೆಯೇ ನಾನು ಅನುಭವಿಸಿದ್ದೇನೆ. ಆ ಸಂಕಷ್ಟದಿಂದಲೇ ಹೋರಾಟ ಮಾಡಿಕೊಂಡು ಗಟ್ಟಿಯಾದವನು ನಾನು. ನೀವು ಕೊಡುವ ತೊಂದರೆ ನನ್ನಲ್ಲಿ ಇನ್ನಷ್ಟು ಹೋರಾಟಕ್ಕೆ ಶಕ್ತಿ ಕೊಡುತ್ತದೆ. ನಾನು ಸಂಕಷ್ಟದಲ್ಲಿದ್ದಾಗ ನೆರವಿಗೆ ಬಂದ ಕಾರ್ಯಕರ್ತರ ಋಣ ತೀರಿಸುವ ಕೆಲಸ ಮಾಡುತ್ತೇನೆ. ಉಳಿದ ವಿ?ವನ್ನು ನಿಧಾನಕ್ಕೆ ಮಾತನಾಡುವೆ ಎಂದು ಸಿ.ಟಿ.ರವಿ ಪ್ರತಿಕ್ರಿಯಿಸಿದರು.

ಪರಿಷತ್ತು ಸದಸ್ಯ ಸಿ.ಟಿ.ರವಿ ಬಂಧನ, ನಡೆಸಿಕೊಂಡ ರೀತಿ ಕಾಂಗ್ರೆಸ್‌ನ ರಾಜಕೀಯ ಪಿತೂರಿಗೆ ಸಾಕ್ಷಿಯಾಗಿದೆ. ಈ ಬಂಧನವೇ ರಾಜಕೀಯ ಪಿತೂರಿಯಾಗಿದ್ದು, ಇದಕ್ಕಿಂತ ಸಾಕ್ಷಿ ಬೇಕಾ? ಡಿ.ಕೆ.ಶಿವಕುಮಾರ ಗೂಂಡಾಗಿರಿ ಪ್ರವೃತ್ತಿಗೆ ತಕ್ಕ ಶಾಸ್ತಿ ಮಾಡುತ್ತೇವೆ. ಹೋರಾಟದ ರೂಪುರೇಷೆ, ಮುಂದಿನ ಹೆಜ್ಜೆ ಹೇಗಿರಬೇಕೆಂಬ ಬಗ್ಗೆ ಡಿ.21ರಂದು ಸಭೆ ನಡೆಸಿ, ನಿರ್ಧಾರ ಕೈಗೊಳ್ಳುತ್ತೇವೆ

- ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ

Share this article