- ರಾಜ್ಯ ಗ್ರಾಪಂ ಸದಸ್ಯರ ಮಹಾಒಕ್ಕೂಟ ಜಿಲ್ಲಾಧ್ಯಕ್ಷ ದೊಗ್ಗಳ್ಳಿ ವೀರೇಶ್ ಹೇಳಿಕೆ । ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಹೋರಾಟ ತೀವ್ರ
ಕನ್ನಡಪ್ರಭ ವಾರ್ತೆ ದಾವಣಗೆರೆ
15ನೇ ಹಣಕಾಸು ಆಯೋಗದ ಅನುದಾನ ಹಾಗೂ ಉದ್ಯೋಗ ಖಾತ್ರಿ ಯೋಜನೆಯ ಸಾಮಗ್ರಿ ವೆಚ್ಚ ಬಿಡುಗಡೆಗೊಳಿಸಲು ಮತ್ತು ಇತರೆ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಡಿ.9ರಂದು ಗ್ರಾಮ ಪಂಚಾಯಿತಿ ಸದಸ್ಯರ ಬೆಳಗಾವಿ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಮಹಾಒಕ್ಕೂಟದ ದಾವಣಗೆರೆ ಜಿಲ್ಲಾಧ್ಯಕ್ಷ ದೊಗ್ಗಳ್ಳಿ ವೀರೇಶ್ ಹೇಳಿದರು.ಭಾನುವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು, 2025-26ನೇ ಸಾಲಿಗೆ ಗ್ರಾಮ ಪಂಚಾಯತಿಗಳಿಗೆ ಬಿಡುಗಡೆ ಆಗಬೇಕಾದ 15ನೇ ಹಣಕಾಸು ಆಯೋಗದ ಅನುದಾನ ಇದುವರೆವಿಗೂ ಬಿಡುಗಡೆ ಆಗಿಲ್ಲ. ಕೂಡಲೇ ಕೇಂದ್ರ ಸರ್ಕಾರದಿಂದ ಅನುದಾನ ತರಿಸಿ, ಗ್ರಾಮ ಪಂಚಾಯಿತಿಗಳಿಗೆ ಬಿಡುಗಡೆಗೊಳಿಸಲು ಸೂಕ್ತ, ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಗ್ರಾಮ ಪಂಚಾಯಿತಿ ಹಂತದ ಗ್ರಂಥಾಲಯಗಳ (ಅರಿವು ಕೇಂದ್ರ) ಮೇಲ್ವಿಚಾರಕರಿಗೆ ರಾಜ್ಯ ಸರ್ಕಾರದಿಂದ ₹12 ಸಾವಿರಗಳು, ಗ್ರಾಮ ಪಂಚಾಯಿತಿಗಳು ಸಂಗ್ರಹಿಸುವ ಗ್ರಂಥಾಲಯ ಕರ ಹಾಗೂ ಗ್ರಾಮ ಪಂಚಾಯಿತಿಗಳ ಸ್ವಂತ ಸಂಪನ್ಮೂಲ ಹೀಗೆ ಮೂರು ಮೂಲಗಳಿಂದ ಹಣ ಸಂಗ್ರಹಿಸಿ ಮಾಸಿಕ ಕನಿಷ್ಠ ವೇತನ ನೀಡಲಾಗುತ್ತಿದೆ. ಇದರಿಂದಾಗಿ ಗ್ರಾಮ ಪಂಚಾಯತಿಗಳ ಮೇಲೆ ಆರ್ಥಿಕ ಹೊರೆ ಉಂಟಾಗುತ್ತಿದೆ. ಆದ್ದರಿಂದ ರಾಜ್ಯ ಸರ್ಕಾರವೇ ಗ್ರಂಥಾಲಯ ಮೇಲ್ವಿಚಾರಕರ ಮಾಸಿಕ ಕನಿಷ್ಠ ವೇತನ ಸಂಪೂರ್ಣವಾಗಿ ಭರಿಸಬೇಕು ಎಂದು ಹೇಳಿದರು.
ಕೂಸಿನ ಮನೆ ಕಾರ್ಯಕರ್ತೆಯರಿಗೆ ಉದೋಗ ಖಾತ್ರಿ ಯೋಜನೆಯಿಂದ ಗೌರವಧನ ನೀಡಲು ಸಾಧ್ಯವಿಲ್ಲವೆಂದು ಇತ್ತೀಚೆಗೆ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಆದ್ದರಿಂದ ಅವರಿಗೂ ರಾಜ್ಯ ಸರ್ಕಾರವೇ ಮಾಸಿಕ ಗೌರವಧನ ನೀಡಬೇಕು. ಈ ಹಿಂದೆ ನಮ್ಮ ಮಹಾಒಕ್ಕೂಟ 28 ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟು ಹೋರಾಟ ಮಾಡಿತ್ತು. ಅವುಗಳಲ್ಲಿ ಅನೇಕ ಬೇಡಿಕೆಗಳನ್ನು ರಾಜ್ಯ ಸರ್ಕಾರವು ಈಡೇರಿಸಿದೆ. ಉಳಿದ ಬೇಡಿಕೆಗಳನ್ನು ಶೀಘ್ರವೇ ಈಡೇರಿಸಬೇಕು ಎಂದು ದೊಗ್ಗಳ್ಳಿ ವೀರೇಶ್ ಮನವಿ ಮಾಡಿದರು.
ಸುದ್ದಿಗೋಷ್ಟಿಯಲ್ಲಿ ವೀರೇಶ್ ಜಗಳೂರು, ಚೇತನ ಕುಮಾರ ಹರೇಹಳ್ಳಿ ಇದ್ದರು.
-7ಕೆಡಿವಿಜಿ38: