ಬೆಳಗಾವಿ ಗ್ರಾಮೀಣ ಕಾಂಗ್ರೆಸ್‌ ಕಮೀಟಿ, ಚಿಕ್ಕೋಡಿ ಜಿಲ್ಲಾ ಕೈ ಸಾರಥ್ಯ ಯಾರ ಪಾಲಿಗೆ?

KannadaprabhaNewsNetwork |  
Published : Jan 03, 2025, 01:33 AM ISTUpdated : Jan 03, 2025, 11:08 AM IST
Congress flag

ಸಾರಾಂಶ

ಬೆಳಗಾವಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್‌ ಕಮೀಟಿ ಹಾಗೂ ಚಿಕ್ಕೋಡಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್‌ ಕಮೀಟಿ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮತ್ತೆ ಮುನ್ನೆಲೆಗೆ ಬಂದಿದ್ದು, ಬೆಳಗಾವಿ ಮತ್ತು ಚಿಕ್ಕೋಡಿ ಕೈ ಸಾರಥಿ ಯಾರಾಗುತ್ತಾರೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.

ಶ್ರೀಶೈಲ ಮಠದ

 ಬೆಳಗಾವಿ : ಬೆಳಗಾವಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್‌ ಕಮೀಟಿ ಹಾಗೂ ಚಿಕ್ಕೋಡಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್‌ ಕಮೀಟಿ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮತ್ತೆ ಮುನ್ನೆಲೆಗೆ ಬಂದಿದ್ದು, ಬೆಳಗಾವಿ ಮತ್ತು ಚಿಕ್ಕೋಡಿ ಕೈ ಸಾರಥಿ ಯಾರಾಗುತ್ತಾರೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.

ಕಳೆದ ಒಂದು ವರ್ಷದಿಂದ ನೂತನ ಜಿಲ್ಲಾಧ್ಯಕ್ಷರ ಆಯ್ಕೆಗಾಗಿ ಕಸರತ್ತು ನಡೆದಿದ್ದರೂ ಈವರೆಗೆ ಆಯ್ಕೆ ನಡೆಯದೇ ವಿಳಂಬವಾಗುತ್ತಿದೆ. ಹಾಲಿ ಜಿಲ್ಲಾಧ್ಯಕ್ಷರ ಅವಧಿ ಪೂರ್ಣಗೊಂಡು ವರ್ಷವಾಗಿದೆ. ಆಡಳಿತಾರೂಢ ಕಾಂಗ್ರೆಸ್‌ ಸರ್ಕಾರ ರಾಜ್ಯದಲ್ಲಿರುವುದರಿಂದ ಸಹಜವಾಗಿಯೇ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ, ಲಾಬಿ ಕೂಡ ನಡೆದಿದೆ ಎನ್ನಲಾಗಿದೆ. ಆದರೆ, ಒಂದು ಮೂಲಗಳ ಪ್ರಕಾರ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರ ತೆಗೆದುಕೊಳ್ಳುವ ನಿಲುವಿನ ಮೇಲೆ ಕಾಂಗ್ರೆಸ್‌ ಅಧ್ಯಕ್ಷರ ನೇಮಕ ಪ್ರಕ್ರಿಯೆ ನಡೆಯಲಿದೆ. ಅಲ್ಲದೇ, ಬೆಳಗಾವಿ ಮತ್ತು ಚಿಕ್ಕೋಡಿ ಜಿಲ್ಲಾಧ್ಯಕ್ಷರ ನೇಮಕಕ್ಕೆ ಪಕ್ಷಕ್ಕೆ ತಲಾ ಒಬ್ಬರ ಹೆಸರನ್ನೂ ಶಿಫಾರಸು ಮಾಡಲಾಗಿದೆ. ಹಾಗಾಗಿ, ಎರಡೂ ಸ್ಥಾನಕ್ಕೆ ಬಹುತೇಕವಾಗಿ ಅವಿರೋಧ ಆಯ್ಕೆ ನಡೆಯುವ ಸಾಧ್ಯತೆಗಳಿವೆ.

ಬೆಳಗಾವಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಬಸವರಾಜ ಶೇಗಾವಿ ಹಾಗೂ ಚಿಕ್ಕೋಡಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಅರ್ಜುನ ನಾಯಕವಾಡಿ ಅವರ ಹೆಸರು ಪ್ರಮುಖವಾಗಿ ಕೇಳಿಬರುತ್ತಿವೆ. ಆದಾಗ್ಯೂ ಇವರ ಜೊತೆಗೆ ಬೇರೆ ಆಕಾಂಕ್ಷಿಗಳು ಇದ್ದಾರೆ. ಹಾಗಾಗಿ, ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆಯುತ್ತಿದೆ. ತಮ್ಮ ನಾಯಕರ ಮೇಲೆ ಪ್ರಭಾವ ಬೀರಿ ಅಧ್ಯಕ್ಷ ಸ್ಥಾನ ಗಿಟ್ಟಿಸಿಕೊಳ್ಳುವ ಲಾಬಿ ಕೂಡ ಜೋರಾಗಿ ನಡೆಯುತ್ತಿದೆ.ಬೆಳಗಾವಿ ಅಧ್ಯಕ್ಷ ಸ್ಥಾನಕ್ಕೆ ಮಹಾಂತೇಶ ಮತ್ತಿಕೊಪ್ಪ, ರಾಜಾಸಲೀಂ ಕಾಶಿಮನವರ, ಮೋಹನ ರೆಡ್ಡಿ ಅವರು ಕೂಡ ಜಿಲ್ಲಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ನೂತನ ಅಧ್ಯಕ್ಷ ಸ್ಥಾನದ ನೇಮಕಾತಿ ಆದೇಶ ತೆಗೆದುಕೊಂಡು ಬರಲು ಬೆಂಗಳೂರಿಗೆ ತೆರಳಿ, ಹಾಗೆ ಬರೀಗೈಯಲ್ಲಿ ಮರಳಿ ಬೆಳಗಾವಿಗೆ ಬಂದಿದ್ದಾರೆ. ಆದರೆ, ಈವರೆಗೆ ಯಾರಿಗೂ ನೇಮಕಾತಿ ಆದೇಶ ಪ್ರತಿ ಅವರ ಕೈಗೆ ಸೇರಿಲ್ಲ. ಹುದ್ದೆ ಮಾತ್ರ ಭರ್ತಿಯಾಗುತ್ತಿಲ್ಲ. ನೇಮಕ ಪ್ರಕ್ರಿಯೆ ವಿಳಂಬವಾಗುತ್ತಲೇ ಸಾಗಿದೆ. ಹಾಗಾಗಿ, ಆಕಾಂಕ್ಷಿಗಳು ಜಾತಕ ಪಕ್ಷಿಯಂತೆ ಆದೇಶ ಪ್ರತಿಗಾಗಿ ಕಾಯುವಂತಾಗಿದೆ. ನೂತನ ಅಧ್ಯಕ್ಷರು ಯಾರಾಗುತ್ತಾರೆ ಎಂಬುದು ಕಾರ್ಯಕರ್ತರಲ್ಲಿ ತೀವ್ರ ಕುತೂಹಲ ಕೆರಳಿಸುವಂತೆ ಮಾಡಿದೆ.

ಸುದೀರ್ಘ ಅವಧಿಗೆ ಅಧ್ಯಕ್ಷರು

ಲಿಂಗಾಯತ ಸಮುದಾಯದ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮತ್ತು ವಿನಯ ನಾವಲಗಟ್ಟಿ ಅವರು ಜಿಲ್ಲಾ ಕಾಂಗ್ರೆಸ್‌ ಕಮೀಟಿ ಅಧ್ಯಕ್ಷರಾಗಿ ಸುದೀರ್ಘವಾಗಿ ಎರಡು ಅವಧಿವರೆಗೆ ಸೇವೆ ಸಲ್ಲಿಸಿದ್ದಾರೆ. ಹಾಲಿ ಬೆಳಗಾವಿ ಗ್ರಾಮೀಣ ಕಾಂಗ್ರೆಸ್‌ ಕಮೀಟಿ ಅಧ್ಯಕ್ಷ ವಿನಯ ನಾವಲಗಟ್ಟಿ ಮತ್ತು ಚಿಕ್ಕೋಡಿ ಹಾಲಿ ಜಿಲ್ಲಾಧ್ಯಕ್ಷ ಲಕ್ಷ್ಮಣರಾವ್‌ ಚಿಂಗಳೆ ಅವರ ಅಧಿಕಾರವಧಿ ಪೂರ್ಣಗೊಂಡು ವರ್ಷವೇ ಆಗಿದೆ. ಅಲ್ಲದೇ, ವಿನಯ ನಾವಲಗಟ್ಟಿ ಅವರನ್ನು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷರನ್ನಾಗಿ ಹಾಗೂ ಲಕ್ಷ್ಮಣರಾವ್‌ ಚಿಂಗಳೆ ಅವರನ್ನು ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಸರ್ಕಾರ ನೇಮಕ ಮಾಡಿದೆ. ಆದಾಗ್ಯೂ ಸದ್ಯ ಅವರನ್ನೇ ಅಧ್ಯಕ್ಷರನ್ನಾಗಿ ಮುಂದುವರೆಸಲಾಗಿದೆ. ಇಲ್ಲಿ ಒಬ್ಬರಿಗೆ ಒಂದೇ ಹುದ್ದೆ ಅನ್ವಯಿಸುವುದಿಲ್ಲವೇ ಎಂಬುದು ಕಾರ್ಯಕರ್ತರ ಪ್ರಶ್ನೆ.

ಇದೀಗ ಮತ್ತೆ ಜಿಲ್ಲಾಧ್ಯಕ್ಷರ ನೇಮಕಾತಿ ಪ್ರಕ್ರಿಯೆ ವಿಚಾರ ಮುನ್ನೆಲೆಗೆ ಬಂದಿರುವುದರಿಂದ ಕಾಂಗ್ರೆಸ್‌ನಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಸತತವಾಗಿ ಲಿಂಗಾಯತ ಸಮುದಾಯಕ್ಕೆ ಅಧ್ಯಕ್ಷ ಸ್ಥಾನ ನೀಡಲಾಗಿದ್ದು, ಈಗ ಬೇರೆ ಸಮುದಾಯದವರಿಗೂ ಅವಕಾಶ ಕಲ್ಪಿಸುವಂತೆ ಬೇಡಿಕೆಯನ್ನೂ ಪಕ್ಷದ ಮುಖಂಡರ ಮುಂದೆ ಬೇಡಿಕೆಯನ್ನೂ ಈಡಲಾಗಿದೆ. ಏನೇ ಆಗಲಿ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷರ ಸ್ಥಾನ ಯಾರ ಪಾಲಿಗೆ ಒಲಿಯಲಿದೆ ಎನ್ನುವುದನ್ನು ಕಾಯ್ದುನೋಡಬೇಕಷ್ಟೇ.

ಬೆಳಗಾವಿ ಮತ್ತು ಚಿಕ್ಕೋಡಿ ಕಾಂಗ್ರೆಸ್‌ ಜಿಲ್ಲಾಧ್ಯಕ್ಷರ ನೇಮಕಾತಿಗೆ ಸಂಬಂಧಿಸಿದಂತೆ ಈಗಾಗಲೇ ತಲಾ ಒಬ್ಬ ಕಾರ್ಯಕರ್ತರ ಹೆಸರನ್ನು ಪಕ್ಷದ ಹೈಕಮಾಂಡ್‌ಗೆ ಶಿಫಾರಸು ಮಾಡಲಾಗಿದೆ. ಕೂಡಲೇ ನೂತನ ಅಧ್ಯಕ್ಷರನ್ನು ನೇಮಕ ಮಾಡಲಾಗುವುದು.

ಸತೀಶ ಜಾರಕಿಹೊಳಿ, ಜಿಲ್ಲಾ ಉಸ್ತುವಾರಿ ಸಚಿವ.

ಜಿಲ್ಲಾ ಗ್ರಾಮೀಣ ಕಾಂಗ್ರೆಸ್‌ ಕಮೀಟಿ ಅಧ್ಯಕ್ಷ ಸ್ಥಾನಕ್ಕೆ ನೇಮಕ ಪ್ರಕ್ರಿಯೆ ವೇಳೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಆದ್ಯತೆ ನೀಡಬೇಕು. ಕಳೆದ ಎರಡು ಬಾರಿ ಲಿಂಗಾಯತ ಸಮುದಾಯಕ್ಕೆ ಆದ್ಯತೆ ನೀಡಲಾಗಿದೆ. ನಿಗಮ ಮಂಡಳಿಗಳಿಗೆ ನೇಮಕ ವಿಚಾರದಲ್ಲಿ ಎಸ್‌ಸಿ, ಎಸ್‌ಟಿ ಸಮುದಾಯದವರನ್ನು ಕಡೆಗಣಿಸಲಾಗಿದೆ. ಮುಂಬರುವ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಸ್ಥಾನ ನೀಡಬೇಕು.

ಗಜು ಧರನಾಯ್ಕ್‌, ಕಾಂಗ್ರೆಸ್‌ ಮುಖಂಡ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

2025ರಲ್ಲಿ ಬಿಯರ್‌ ಮಾರಾಟ ಭಾರೀ ಕುಸಿತ
ಜನಾಶೀರ್ವಾದದಿಂದ ದೀರ್ಘಾವಧಿ ಸಿಎಂ : ಸಿದ್ದು