ಕ್ರಿಸ್ಮಸ್‌ ಆಚರಣೆಗೆ ಬೆಳಗಾವಿ ನಗರ ಸಜ್ಜು

KannadaprabhaNewsNetwork |  
Published : Dec 24, 2024, 12:45 AM IST
ಕ್ಯಾಂಪ್‌ ಪ್ರದೇಶದಲ್ಲಿರುವ ಚರ್ಚನ್ನು ವಿದ್ಯುತ್‌ ದೀಪಗಳಿಂದ ಸಿಂಗರಿಸಲಾಗಿದೆ | Kannada Prabha

ಸಾರಾಂಶ

ವರ್ಷಾಂತ್ಯದ ಬಹುದೊಡ್ಡ ಹಬ್ಬ ಕ್ರಿಸ್ಮಸ್‌ ಆಚರಣೆಗೆ ಗಡಿ ಜಿಲ್ಲೆ ಬೆಳಗಾವಿ ಸಜ್ಜುಗೊಂಡಿದೆ. ಕ್ರೈಸ್ತರ ಧರ್ಮಿಯರ ಮನೆಗಳ ಮುಂದೆ ನಕ್ಷತ್ರ ಬುಟ್ಟಿಗಳು ಗಮನ ಸೆಳೆಯುತ್ತಿವೆ. ಬಾಲಯೇಸುವಿಗಾಗಿ ಪುಟ್ಟ ಗೋದಲಿ ಸಿದ್ಧಗೊಳ್ಳುತ್ತಿವೆ. ಮನೆಯೊಳಗೆ ಕೇಕ್‌ ತಯಾರಿಗೆ ಭರದ ಸಿದ್ಧತೆ ನಡೆದಿದೆ. ಕ್ರಿಸ್ಮಸ್‌ ಟ್ರೀ ವಿದ್ಯುತ್‌ ದೀಪಾಲಂಕಾರದಿಂದ ಝಗಮಗಿಸುತ್ತಿವೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ವರ್ಷಾಂತ್ಯದ ಬಹುದೊಡ್ಡ ಹಬ್ಬ ಕ್ರಿಸ್ಮಸ್‌ ಆಚರಣೆಗೆ ಗಡಿ ಜಿಲ್ಲೆ ಬೆಳಗಾವಿ ಸಜ್ಜುಗೊಂಡಿದೆ. ಕ್ರೈಸ್ತರ ಧರ್ಮಿಯರ ಮನೆಗಳ ಮುಂದೆ ನಕ್ಷತ್ರ ಬುಟ್ಟಿಗಳು ಗಮನ ಸೆಳೆಯುತ್ತಿವೆ. ಬಾಲಯೇಸುವಿಗಾಗಿ ಪುಟ್ಟ ಗೋದಲಿ ಸಿದ್ಧಗೊಳ್ಳುತ್ತಿವೆ. ಮನೆಯೊಳಗೆ ಕೇಕ್‌ ತಯಾರಿಗೆ ಭರದ ಸಿದ್ಧತೆ ನಡೆದಿದೆ. ಕ್ರಿಸ್ಮಸ್‌ ಟ್ರೀ ವಿದ್ಯುತ್‌ ದೀಪಾಲಂಕಾರದಿಂದ ಝಗಮಗಿಸುತ್ತಿವೆ.

ಕ್ರಿಸ್ಮಸ್‌ ಆಚರಣೆಗೆ ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ 100ಕ್ಕೂ ಅಧಿಕ ಚರ್ಚ್‌ಗಳು ಹಾಗೂ ಕ್ರೈಸ್ತರ ಮನೆಗಳಲ್ಲಿ ಭರದ ಸಿದ್ಧತೆ ನಡೆದಿದೆ. ಡಿ.25ರಂದು ಕ್ರಿಸ್ಮಸ್‌ ಆಚರಣೆ ಇದ್ದರೂ ಡಿ.24ರ ರಾತ್ರಿಯಿಂದಲೇ ಚರ್ಚ್‌ಗಳಲ್ಲಿ ಬಾಲ ಏಸುವಿನ ಜನನದ ಕಾರ್ಯಕ್ರಮದೊಂದಿಗೆ ವಿಶೇಷ ಕಾರ್ಯಕ್ರಮ ಆರಂಭಗೊಳ್ಳಲಿವೆ. ಮಧ್ಯರಾತ್ರಿ ಸಾಮೂಹಿಕ ಪ್ರಾರ್ಥನೆ ನೆರವೇರಲಿದೆ. ಬಳಿಕ ಕ್ರೈ ಸ್ತರು ಪರಸ್ಪರ ಸಿಹಿ ತಿನಿಸುಹಂಚಿಕೊಳ್ಳಲಿದ್ದಾರೆ. ಡಿ.25ರ ಬೆಳಗಿನ ಜಾವದವರೆಗೂ ನಡೆಯುವ ಸಂತೋಷ ಕೂಟದ ವಿಶೇಷ ಗೀತಗಾಯನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಹಬ್ಬದ ಹಿನ್ನೆಲೆಯಲ್ಲಿ ಬಿಷಪ್‌ ಅವರು ಸಂದೇಶ ನೀಡಲಿದ್ದಾರೆ.ಕ್ರಿಸ್ಮಸ್‌ ಹಿನ್ನೆಲೆ ನಗರದ ಫಾತಿಮಾ ಕೆಥಿಡ್ರಲ್ ಚರ್ಚ್‌, ಐ.ಸಿ. ಚರ್ಚ್‌, ಸೇಂಟ್ ಅಂಥೋನಿ ಚರ್ಚ್‌, ಮೌಂಟ್ಕಾರ್ಮಲ್ ಚರ್ಚ್‌, ಸೇಂಟ್ ಮೇರಿ ಚರ್ಚ್‌, ಮೆಥೋಡಿಸ್ಟ್ ಚರ್ಚ್‌ ಸೇರಿದಂತೆ ಜಿಲ್ಲೆಯಲ್ಲಿರುವ ಎಲ್ಲ ಚರ್ಚ್‌ಗಳು ವಿದ್ಯುತ್‌ ದೀಪಾಲಂಕಾರದಿಂದ ಝಗಮಗಿಸುತ್ತಿವೆ. ನಕ್ಷತ್ರ ಬುಟ್ಟಿಗಳು ಮೆರಗು ನೀಡುತ್ತಿವೆ. ಯೇಸು ಕ್ರಿಸ್ತನ ಜನನದ ಸನ್ನಿವೇಶ ಬಿಂಬಿಸುವ ಗೋದಲಿಗಳು ಗಮನ ಸೆಳೆಯುತ್ತಿವೆ.

ವಿಶೇಷವಾಗಿ ಕ್ಯಾಂಪ್‌ ಪ್ರದೇಶದಲ್ಲಿರುವ ಚರ್ಚ್‌ಗಳು ಹಾಗೂ ಕ್ರೈಸ್ತರ ಮನೆಗಳ ಎದುರು ವಿಶೇಷ ಅಲಂಕಾರ ಗಮನ ಸೆಳೆಯುತ್ತಿವೆ. ಡಿ.24ರ ಮಧ್ಯರಾತ್ರಿಯಿಂದಲೇ ವಿಶೇಷ ಪ್ರಾರ್ಥನೆ ಮೂಲಕ ಕ್ರಿಸ್ಮಸ್ ಕಳೆಗಟ್ಟಲಿದೆ.

ಕ್ರಿಸ್ಮಸ್‌ ಸಂದರ್ಭದಲ್ಲಿ ಕ್ರೈಸ್ತರು ಹೊಸ ಬಟ್ಟೆಗಳನ್ನು ಧರಿಸಿ ಕೇಕ್‌ ಹಾಗೂ ಅಕ್ಕಿ, ರವೆ ಲಡ್ಡು, ವಿವಿಧ ರೀತಿಯ ಚಕ್ಕುಲಿ, ಅಕ್ಕಿ ಹಿಟ್ಟಿನಿಂದ ತಯಾರಿಸಿದ ತಿಂಡಿಗಳನ್ನು ನೆರೆಹೊರೆಯವರಿಗೆ, ಸ್ನೇಹಿತರು ಸಂಬಂಧಿಕರಿಗೆ ವಿತರಿಸಿ ಸಂಭ್ರಮಿಸುತ್ತಾರೆ. ಡಿ.1ರಂದು ಧಾರ್ಮಿಕ ಆಚರಣೆಗಳಿಗೆ ತೆರೆ ಬೀಳಲಿದೆ.

ಪ್ರೀತಿ ಹಂಚುವುದು, ಬೆಳಕನ್ನು ಪಸರಿಸುವುದೇ ಕ್ರಿಸ್ಮಸ್‌: ಕ್ರಿಸ್ಮಸ್ ಹಬ್ಬವು ಪ್ರೀತಿಯನ್ನು ಹಂಚುವುದು ಹಾಗೂ ಬೆಳಕನ್ನು ಪಸರಿಸುವುದೇ ಆಗಿದೆ. ದೇವರ ಆಗಮನ ಮೂಲಕ ಬೆಳಕು ಹರಡುವ ಸಮಯವಿದು. ಬಡವರಿಗೆ ಕೈಲಾದಷ್ಟು ನೆರವಾಗಿ, ಸಂಕಷ್ಟದಲ್ಲಿರುವವರನ್ನು ಆರೈಕೆ ಮಾಡುವುದರಿಂದ ದೇವರು ಸಂತೋಷ ಪಡುತ್ತಾನೆ. ತಪ್ಪೊಪ್ಪಿಗೆ ಹಾಗೂ ಕ್ಷಮಿಸುವ ಗುಣ ಬೆಳೆಸಿಕೊಳ್ಳುವ ಮೂಲಕ ಕ್ರಿಸ್ಮಸ್ ಅನ್ನು ಹೆಚ್ಚು ಅರ್ಥ ಪೂರ್ಣವಾಗಿಸೋಣ ಎಂದು ಬಿಷಪ್ ಡೆರಿಕ್ ಫರ್ನಾಂಡೀಸ್ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ರಿಸ್ಮಸ್‌ ಹಿನ್ನೆಲೆಯಲ್ಲಿ ಡಿ.24ರ ರಾತ್ರಿಯಿಂದಲೇ ನಗರ ಸೇರಿದಂತೆ ಜಿಲ್ಲೆಯ ಎಲ್ಲ ಚರ್ಚ್‌ಗಳಲ್ಲಿ ಪ್ರಾರ್ಥನೆ ಮಾಡಲಾಗುವುದು. 25ರಂದು ಕ್ರಿಸ್ಮಸ್‌ ಆಚರಿಸಲಾಗುವುದು. ಡಿ.29ರಂದು ಕ್ಯಾಂಪ್‌ನ ಫಾತಿಮಾ ಕ್ಯಾಥೆಡ್ರಲ್‌ನಲ್ಲಿ 2025ರ ವರ್ಷದ ಕಾರ್ಯಕ್ರಮ ಆಯೋಜಿಸಲಾಗಿದೆ. ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಬಾಗಲಕೋಟೆ ಮತ್ತು ಕೊಲ್ಲಾಪುರ ಜಿಲ್ಲೆಯ ಚಂದಗಡ ತಾಲೂಕಿನ ಜನರು ಆಗಮಿಸುವರು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಲೂಯಿಸ್‌ ರಾಡ್ರಿಕ್ಸ್‌ ಉಪಸ್ಥಿತರಿದ್ದರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ
ಕಡಿಮೆ ಗುಣದ ಔಷಧಿ ಎರಡೇ ದಿನಕ್ಕೇ ಮಾರುಕಟ್ಟೆಯಿಂದ ವಾಪಸ್‌: ಸಚಿವ