ಕನ್ನಡಪ್ರಭ ವಾರ್ತೆ ಬೆಳಗಾವಿ
ದೇಶದಲ್ಲಿ ನಾವೆಲ್ಲ ವಿವಿಧ ಸಂಸ್ಕೃತಿಯಡಿ ಬೆಳೆದಿದ್ದೇವೆ. ಹಿರಿಯರಿಗೆ ಗೌರವ ಕೊಡುವ ಪದ್ದತಿಯನ್ನು ಹೊಂದಿದ್ದೇವೆ. ನಾವೆಲ್ಲರೂ ಪ್ರಗತಿಪರ ಚಿಂತನೆಯಲ್ಲಿ ಬೆಳೆದು ಬಂದಿದ್ದು, ಜನರ ಪ್ರತಿನಿಧಿಯಾಗಿ ಕ್ಷೇತ್ರವನ್ನು ಸುಧಾರಣೆ ಮಾಡುವುದೇ ನನ್ನ ಕನಸಾಗಿದೆ. ಕುಮಾರಸ್ವಾಮಿ ಬಡಾವಣೆಯಲ್ಲಿ ಅಚ್ಚುಕಟ್ಟಾದ ವಾತಾವರಣ, ನಿಸರ್ಗವನ್ನು ಹೊಂದಿದೆ. ಜೊತೆಗೆ ಇಲ್ಲಿ ಪ್ರೀತಿ, ವಿಶ್ವಾಸವನ್ನು ಹೊಂದಿದ ಜನ ಕೂಡ ಇದ್ದಾರೆ. ಸದಾ ಸಕಾರಾತ್ಮಕ ವಾತಾವರಣ ಇರುವುದರಿಂದ ಈ ಬಡಾವಣೆಯನ್ನು ಬೆಳೆಸಬೇಕೆಂಬ ಉತ್ಸಾಹ ಬರುತ್ತದೆ. ಅಭಿವೃದ್ಧಿಗಾಗಿ ಜನರು ಸ್ಪಂದಿಸಿದರೆ ನಮಗೂ ಸಂತೋಷದಿಂದ ಕೆಲಸ ಮಾಡಲು ಅನುಕೂಲವಾಗುತ್ತದೆ. ಈ ಬಡಾವಣೆಯಲ್ಲಿ ಸುಮಾರು 4 ಕಿ.ಮೀ. ರಸ್ತೆ ಮಾರ್ಗದಲ್ಲಿ ಮರು ಡಾಂಬರೀಕರಣ ಮಾಡಲಾಗುತ್ತದೆ. ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಲಾಗುವುದು. ಅಲ್ಲದೇ, ಹಳೆಯ ಟಿಸಿಗಳನ್ನು ಬದಲಾವಣೆಮಾಡಬೇಕಿದೆ ಎಂದು ಹೇಳಿದರು.
ರಸ್ತೆ ಡಾಂಬರೀಕರಣ ಕಾಮಗಾರಿ ಮುಗಿದ ಬಳಿಕ ಎರಡನೇ ಹಂತದಲ್ಲಿ ಪ್ಲೇವರ್‌ಗಳನ್ನು ಅಳವಡಿಸುವ ಕಾಮಗಾರಿ ಕೈಗೊಳ್ಳಲಾಗುತ್ತದೆ. ಶಿವಾಲಯ ಮಂದಿರದ ಪಕ್ಕದಲ್ಲಿ ಪ್ರಸಾದ ನಿಲಯ ಕಟ್ಟಡ ನಿರ್ಮಿಸುವ ಆಸೆಯೂ ನನಗಿದೆ. ಅದರಂತೆ ಡಾ.ಬಿ.ಆರ್.ಅಂಬೇಡ್ಕರ ಸಮುದಾಯ ಭವನ ನಿರ್ಮಾಣಕ್ಕೆ ₹ 25 ಲಕ್ಷ ಅನುದಾನ ನೀಡಲಾಗುವುದು ಎಂದು ಸಚಿವೆ ಭರವಸೆ ನೀಡಿದರು.ಈ ಸಂದರ್ಭದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರನ್ನು ಬಡಾವಣೆಯ ಪರವಾಗಿ ಸನ್ಮಾನಿಸಿ, ಗೌರವಿಸಲಾಯಿತು. ಎಚ್.ಡಿ. ಕುಮಾರಸ್ವಾಮಿ ಬಡಾವಣೆಯ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘ ಅಧ್ಯಕ್ಷ ವ್ಹಿ. ಜಿ.ನೀರಲಗಿಮಠ, ಸಿ.ಬಿ.ಸಂಗೊಳ್ಳಿ, ಎಸ್.ಸಿ. ಗಂಗಾಪುರ, ಸುಶೀಲಾ ಪ್ರಭು, ಕುಮಾರಸ್ವಾಮಿ ಲೇಔಟ್ ನ ಮುಖಂಡರು, ನಿವಾಸಿಗಳು ಉಪಸ್ಥಿತರಿದ್ದರು.