ಕನ್ನಡಪ್ರಭ ವಾರ್ತೆ ರಾಮದುರ್ಗ
ಪಟ್ಟಣದ ರಾಠಿ ಫಾರ್ಮ್ ಹೌಸ್‌ನಲ್ಲಿ ಮಂಗಳವಾರ ನಡೆದ ಲೋಕಸಭಾ ಚುನಾವಣೆಯ ಸಮ್ಮಿಲ ಸ್ವಾಭಿಮಾನಿ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಅವರು, 2014ರಲ್ಲಿ ನಾನು ಲೋಕಸಭೆಗೆ ನಿಂತಾಗ ಇಲ್ಲಿಯ ಜನರು ನನ್ನ ಪರವಾಗಿ ಸಾಕಷ್ಟು ಹೋರಾಟ ಮಾಡಿದರು. ಇದೀಗ 10 ವರ್ಷಗಳ ಬಳಿಕ ನನ್ನ ಮಗ ಬಂದಿದ್ದಾನೆ. ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಿ. 2014ರಲ್ಲಿ ಎಲ್ಲರು ಶ್ರಮಿಸಿದರೂ ಸೋತೆವು. ಆದರೆ, ಈಗಿನ ಪರಿಸ್ಥಿತಿ ಭಿನ್ನವಾಗಿದೆ. ನಮ್ಮ ನಾಯಕ ಅಶೋಕ್ ಪಟ್ಟಣ ಅವರು ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು ಅಭ್ಯರ್ಥಿ ಗೆಲುವಿಗೆ ಅನುಕೂಲವಾಗಲಿದೆ. ನನಗೆ ಕೊಟ್ಟ ರೀತಿಯಲ್ಲೇ ನಿಮ್ಮ ಸೇವೆ ಮಾಡಲು ನನ್ನ ಮಗನಿಗೂ ಅವಕಾಶ ಮಾಡಿಕೊಡಿ ಎಂದರು ಕೋರಿದರು.
ನನ್ನ ಸ್ವಕ್ಷೇತ್ರ ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದಲೇ 60 ಸಾವಿರಕ್ಕೂ ಅಧಿಕ ಮತಗಳು ಲೀಡ್, ಬೆಳಗಾವಿ ದಕ್ಷಿಣ, ಬೆಳಗಾವಿ ಉತ್ತರ ಕ್ಷೇತ್ರಗಳಿಂದ 85 ಸಾವಿರ ಮತಗಳ ಮುನ್ನಡೆ ಸಿಗುವ ವಿಶ್ವಾಸವಿದೆ. ರಾಮದುರ್ಗದಲ್ಲಿ ಸಿಕ್ಕಿರುವ ಬೆಂಬಲ ನೋಡಿದರೆ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ 2 ಲಕ್ಷ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸ ಮೂಡುತ್ತಿದೆ ಎಂದರು.ಕರ್ನಾಟಕದ 7 ಕೋಟಿ ಜನರಿಗೆ ನಾನೊಬ್ಬಳೆ ಮಹಿಳಾ ಸಚಿವೆಯಾಗಿ ನಿಂತಿದ್ದೇನೆ. ಇಂದು ರಾಜ್ಯಾದ್ಯಂತ ಸೇವೆ ಮಾಡುವ ಅವಕಾಶ ಲಭಿಸಿದೆ. ಇದು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ. ಹಿರಿಯ ಶಾಸಕ ಅಶೋಕ್ ಪಟ್ಟಣ ಅವರು ಸಚಿವರಾಗಬೇಕಿತ್ತು. ಅದು ನನ್ನ ಅಪೇಕ್ಷೆಯೂ ಆಗಿತ್ತು. ಆದರೆ, ಬದ್ಧತೆಗೆ ಹೆಸರಾಗಿರುವ ಅಶೋಕ್ ಪಟ್ಟಣ ಅವರು ಕಾಂಗ್ರೆಸ್ ಪಕ್ಷದ ಕಟ್ಟಾಳುವಾಗಿದ್ದಾರೆ ಎಂದು ಬಣ್ಣಿಸಿದರು.
ಗ್ಯಾರಂಟಿ ಯೋಜನೆಗಳಿಗಾಗಿ ನಮ್ಮ ಸರ್ಕಾರ ಪ್ರತಿ ವರ್ಷ ₹೬೦ ಸಾವಿರ ಕೋಟಿ ಖರ್ಚು ಮಾಡುತ್ತಿದೆ. ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರ ಆರ್ಥಿಕ ಶಕ್ತಿ ವೃದ್ಧಿಸಿದ್ದು, ಮಹಿಳೆಯರನ್ನು ಸಬಲೀಕರಣ ಮಾಡುವುದೇ ನಮ್ಮ ಸರ್ಕಾರದ ಉದ್ದೇಶ ಎಂದರು.
ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಮಾತನಾಡಿ, ತಾಯಿ ಅವರ ಮಾರ್ಗದರ್ಶನದಲ್ಲಿ ರಾಜಕೀಯ ಜೀವನ ಆರಂಭಿಸಿದ್ದು, ಜನರ ಪ್ರೀತಿ ವಿಶ್ವಾಸ ನೋಡಿದ ಮೇಲೆ ಜೀವನ ಪೂರ್ತಿ ಸಮಾಜ ಸೇವೆ ಮಾಡಬೇಕು ಎಂದು ತೀರ್ಮಾನಿಸಿರುವೆ ಎಂದರು.
ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಾತನಾಡಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ, ಜಹೂರ್ ಹಾಜಿ, ಸುರೇಶ ಪತ್ತೆಪೂರ್, ರಾಯಪ್ಪ ಕತ್ತಿ, ಜೆ.ಬಿ.ರಂಗನಗೌಡ್ರ, ಸೋಮಶೇಖ ಸಿದ್ಲಿಂಗಪ್ಪನವರ, ರಾಜೇಶ್ವರಿ ಮೆಟಗುಡ್, ಗಾಯಿತ್ರಿ ದೇವಾಂಗಮಠ್, ಮಂಜುಳಾ ದೇವರೆಡ್ಡಿ, ಚಿದಾನಂದ ದೊಡಮನಿ, ದುರಗಪ್ಪ ಮೂಲಿಮನಿ, ಹಜರತಸಾಬ್ ಪೈಲವಾನ್, ಪ್ರಕಾಶ ತಳವಾರ, ರಮೇಶ್ ಅಣ್ಣಿಗೇರಿ, ನಿಂಗಪ್ಪ ದಂಡಿನದರ್ಗಿ, ಪರಸಪ್ಪ ಜಂಗವಾಡ, ಚಿನ್ನಪ್ಪ ಮುದೆನೂರ್, ಬಸನಗೌಡ ಪ್ಯಾಟಿಗೌಡರ್, ರಾಮಣ್ಣ ಬಿಡಕಿ, ಕೃಷ್ಣಗೌಡ ಪಾಟೀಲ, ವಿಜಯಕುಮಾರ ರಾಠೋಡ್, ಕೆ.ಎಚ್.ಮುಮ್ಮರೆಡ್ಡಿ ಉಪಸ್ಥಿತರಿದ್ದರು.