ಕನ್ನಡಪ್ರಭ ವಾರ್ತೆ ಬಾಗಲಕೋಟೆ
ನವನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಹಮ್ಮಿಕೊಂಡಿದ್ದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ರಾಜ್ಯದಲ್ಲಿ ನೆಲೆಸಿದ 6 ಕೋಟಿಗೂ ಅಧಿಕ ಜನರ ನೆಮ್ಮದಿ ಜೀವನಕ್ಕಾಗಿ ಪೊಲೀಸ್ ಇಲಾಖೆ ಹಗಲಿರುಳು ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತಿದೆ. ಕಳ್ಳ ಕಾಕರನ್ನು, ದುಷ್ಟರನ್ನು, ಕೊಲೆಗಡುಕರನ್ನು ಮಟ್ಟಹಾಕಿ ಶಾಂತಿ-ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್ ಇಲಾಖೆ ಮಹತ್ತರ ಕಾರ್ಯ ಮಾಡುತ್ತಿದೆ ಎಂದು ಹೇಳಿದರು.
ಪೊಲೀಸ್ ಇಲಾಖೆಯಲ್ಲಿ ಮಾಹಿತಿ ನೀಡುವ ಬಾತ್ಮಿದಾರರಿಂದ ಹಿಡಿದು ಅಪಘಾತ, ಅವಘಡ, ಪ್ರವಾಹದಂತಹ ಸಮಯದಲ್ಲಿ ಮಾಹಿತಿ ನೀಡುವ ಪ್ರಜ್ಞಾವಂತ ಜನರೊಂದಿಗೆ ಇಲಾಖೆ ಕಾರ್ಯನಿರ್ವಹಿಸುತ್ತಿದೆ. ದೇಶದಲ್ಲಿಯೇ ಕರ್ನಾಟಕ ಪೊಲೀಸ್ ಅನೇಕ ಮಹತ್ತರ ಕಾರ್ಯ ಮಾಡಿ ಹೆಸರು ಮಾಡಿದೆ. ತಂತ್ರಜ್ಞಾನ ಅಳವಡಿಕೆ, ಸೂಕ್ಷ್ಮ ಪ್ರದೇಶದಲ್ಲಿ ಡಿ.ಎನ್.ಎ. ಕೇಂದ್ರ ಸ್ಥಾಪನೆ, ತನಿಖಾಧಿಕಾರಿಗಳಿಗೆ ಸಹಾಯವಾಗುವಂತೆ ಅಧಿಕಾರಿಗಳನ್ನು ನಿಯೋಜಿಸುವುದು ಸೇರಿದಂತೆ ಅನೇಕ ಕಾರ್ಯಗಳಿಗೆ ಅನುಕೂಲವಾಗುವಂತಹ ತಂತ್ರಜ್ಞಾನದ ಕಾರ್ಯವಿಧಾನ ಪ್ರಾರಂಭಿಸಿದೆ ಎಂದರು.ತಂತ್ರಜ್ಞಾನ ಹೆಚ್ಚಿದಂತೆಲ್ಲ ಅಪರಾಧಿಗಳ ಮನೋವಿಕಾರ ಕೂಡ ಹೆಚ್ಚಾಗುತ್ತಿದೆ. ಇದರಿಂದ ತನಿಖಾಧಿಕಾರಿಗಳಿಗೆ ತಲೆನೋವಾಗಿದೆ. ಇದಕ್ಕೆ ಉದಾಹರಣೆ ಎಂಬಂತೆ ಇತ್ತೀಚೆಗೆ ನಡೆದ ಬಿಟ್ ಕ್ವಾಯಿನ್ ಪ್ರಕರಣ. ಇಂತಹ ಪ್ರಕರಣಗಳಿಗೆ ತಾತ್ವಿಕ ಅಂತ್ಯ ಹಾಡಲು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ಸಿಬ್ಬಂದಿಗೆ ಅತ್ಯುನ್ನದ ಸುಧಾರಿಸಿದ ತರಬೇತಿ ಕೂಡ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಗಳನ್ನು ಸನ್ಮಾನಿಸಲಾಯಿತು. ಪ್ರಾರಂಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಸ್ವಾಗತಿಸಿ, ವರದಿ ವಾಚನ ಮಾಡಿದರು. ನಂತರ ಕವಾಯತು ವೀಕ್ಷಣೆ ನಡೆಯಿತು. ಕಾರ್ಯಕ್ರಮದಲ್ಲಿ ಕಮಾಂಡಿಂಗ್ ಅಧಿಕಾರಿ ಸಂಜಯ ಕಡೆ ಉಪಸ್ಥಿತರಿದ್ದರು. ಕೊನೆಯಲ್ಲಿ ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ ವಂದಿಸಿದರು.