ಅನ್ನದಾತರ ಬಂದ್‌ ಕರೆಗೆ ಓಗೊಟ್ಟ ಬಳ್ಳಾರಿ

KannadaprabhaNewsNetwork |  
Published : Nov 11, 2023, 01:17 AM ISTUpdated : Nov 11, 2023, 01:18 AM IST
ಬಳ್ಳಾರಿ ಬಂದ್ ನ ಫೋಟೋಗಳು ಹಾಗೂ ಕ್ಯಾಪ್ಷನ್ ಗಳು   | Kannada Prabha

ಸಾರಾಂಶ

ನಗರದ ವ್ಯಾಪಾರಿಗಳು ಸ್ವಯಂಪ್ರೇರಣೆಯಿಂದ ಅಂಗಡಿ, ಹೋಟೆಲ್‌ಗಳನ್ನು ಬಂದ್ ಮಾಡಿಕೊಳ್ಳುವ ಮೂಲಕ ರೈತ ಚಳವಳಿಗೆ ಸ್ಪಂದಿಸಿದರು.

ಕನ್ನಡಪ್ರಭ ವಾರ್ತೆ ಬಳ್ಳಾರಿಬೆಳೆಗಳ ರಕ್ಷಣೆಗೆ ಎಚ್‌ಎಲ್‌ ಕಾಲುವೆಗೆ ನ. 30ರ ವರೆಗೆ ನೀರು ಹರಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಕರೆ ನೀಡಿದ್ದ "ಬಳ್ಳಾರಿ ಬಂದ್ " ಶಾಂತಿಯುತವಾಗಿ ನಡೆದು, ಸ್ಥಳೀಯರ ಸಹಕಾರದಿಂದ ಭಾಗಶಃ ಯಶಸ್ವಿಯಾಯಿತು.

ಬೆಳಗ್ಗೆ ನೀರಸವಾಗಿ ಕಂಡುಬಂದ ಬಂದ್ 11 ಗಂಟೆ ಬಳಿಕ ಚುರುಕು ಪಡೆಯಿತು. ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ನೂರಾರು ರೈತರು ಬಂದ್ ಮಾಡಿ ಸಹಕರಿಸುವಂತೆ ಹೋಟೆಲ್, ಅಂಗಡಿ ಹಾಗೂ ಇತರೆ ವ್ಯಾಪಾರಿಗಳನ್ನು ಮನವಿ ಮಾಡಿಕೊಳ್ಳುತ್ತಿರುವ ದೃಶ್ಯಗಳು ಕಂಡುಬಂದವು.ಬಂದ್ ಹಿನ್ನೆಲೆಯಲ್ಲಿ ನಗರದ ಪ್ರಮುಖ ವಾಣಿಜ್ಯ ಚಟುವಟಿಕೆ ಕೇಂದ್ರಗಳಾದ ಬೆಂಗಳೂರು ರಸ್ತೆ, ಬ್ರಾಹ್ಮಣ ಬೀದಿ, ಕೆಸಿ ರಸ್ತೆ, ಇನ್‌ಫ್ಯಾಂಟ್ರಿ ರಸ್ತೆ, ಟ್ಯಾಂಕ್ ಬಂಡ್ ರಸ್ತೆ, ಗ್ಲಾಸ್ ಬಜಾರ್, ತೇರುಬೀದಿ, ಗ್ರಹಂ ರಸ್ತೆಗಳಲ್ಲಿ ಅಂಗಡಿಗಳು ಭಾಗಶಃ ಬಂದ್ ಆಗಿದ್ದವು. ನಗರದ ವ್ಯಾಪಾರಿಗಳು ಸ್ವಯಂಪ್ರೇರಣೆಯಿಂದ ಅಂಗಡಿ, ಹೋಟೆಲ್‌ಗಳನ್ನು ಬಂದ್ ಮಾಡಿಕೊಳ್ಳುವ ಮೂಲಕ ರೈತ ಚಳವಳಿಗೆ ಸ್ಪಂದಿಸಿದರು.

ವ್ಯಾಪಾರ ವಾಣಿಜ್ಯ ಚಟುವಟಿಕೆಗಳು ಭಾಗಶಃ ಬಂದ್ ಆಗಿದ್ದರಿಂದ ನಗರದ ಪ್ರಮುಖ ರಸ್ತೆಗಳು ಜನರಿಲ್ಲದೆ ಬಿಕೋ ಎಂದವು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಚೇರಿಗಳು, ಶಾಲಾ, ಕಾಲೇಜುಗಳು, ಬ್ಯಾಂಕುಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಆಟೋ, ಸರ್ಕಾರಿ ಬಸ್‌, ವಾಹನಗಳ ಓಡಾಟಕ್ಕೆ ಯಾವುದೇ ಸಮಸ್ಯೆ ಎದುರಾಗಲಿಲ್ಲ. ಚಿತ್ರಮಂದಿರಗಳು ಬಂದ್‌ ಬೆಂಬಲಿಸಿ ಮುಚ್ಚಿದ್ದವು.ಮಾತಿನ ಚಕಮಕಿ:

ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ನೂರಾರು ರೈತರು ನಗರದಲ್ಲಿ ಬೃಹತ್ ಪಾದಯಾತ್ರೆ ನಡೆಸಿ, ಬಂದ್ ಬೆಂಬಲಿಸುವಂತೆ ಸಾರ್ವಜನಿಕರನ್ನು ಮನವಿ ಮಾಡಿಕೊಂಡರು.ಇಲ್ಲಿನ ನಗರೂರು ನಾರಾಯಣರಾವ್ ಪಾರ್ಕ್‌ನಿಂದ ಮೆರವಣಿಗೆ ಹೊರಟ ರೈತರು ಗಡಗಿಚೆನ್ನಪ್ಪ ವೃತ್ತದಲ್ಲಿ ಸಮಾವೇಶಗೊಂಡರು. ವೃತ್ತದಲ್ಲಿ ಸುಮಾರು ಎರಡು ತಾಸಿಗೂ ಹೆಚ್ಚು ಹೊತ್ತು ಧರಣಿ ನಡೆಸಿದ ಪ್ರತಿಭಟನಾಕಾರರು, ರೈತರ ಹಿತ ಕಾಯಲು ಸರ್ಕಾರ ಕಾಲುವೆಗೆ ನೀರು ಹರಿಸಬೇಕು. ಕೂಡಲೇ ಸರ್ಕಾರ ಹಾಗೂ ಜಿಲ್ಲಾಡಳಿತ ರೈತ ಮುಖಂಡರೊಂದಿಗೆ ಚರ್ಚಿಸಬೇಕು ಎಂದು ಆಗ್ರಹಿಸಿದರು.

ಬೇಡಿಕೊಳ್ಳುವ ಪರಿಸ್ಥಿತಿ:

ಇದೇ ವೇಳೆ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಮಾಧವರೆಡ್ಡಿ ಕರೂರು ಹಾಗೂ ಚಾಗನೂರು ಮಲ್ಲಿಕಾರ್ಜುನ ರೆಡ್ಡಿ ಅವರು, ಅನ್ನ ನೀಡುವ ರೈತರು ಇಂದು ಬೀದಿಗೆ ಬಂದು ಬೆಳೆಗಳಿಗೆ ನೀರು ಕೊಡಿ ಎಂದು ಬೇಡಿಕೊಳ್ಳುವ ಪರಿಸ್ಥಿತಿ ಬಂದಿದೆ. ರೈತರ ಬೆಳೆಗಳನ್ನು ರಕ್ಷಣೆ ಮಾಡುವುದು ಸರ್ಕಾರ ಹಾಗೂ ಜಿಲ್ಲಾಡಳಿತದ ಕರ್ತವ್ಯವೂ ಆಗಿದೆ. ಮಳೆಯಿಲ್ಲದೆ ಕಂಗಾಲಾಗಿರುವ ರೈತರು ಬೆಳೆಗಳು ಹಾನಿಯಾಗುವ ಭೀತಿಯಲ್ಲಿದ್ದಾರೆ. ಈಗಾಗಲೇ ಕೃಷಿ ಚಟುವಟಿಕೆಗಳಿಗೆ ಸಾಲ ಮಾಡಿಕೊಂಡಿರುವ ರೈತಾಪಿ ಸಮುದಾಯ, ನೀರಿಲ್ಲದೆ ಬೆಳೆ ಹಾನಿಯಾದರೆ ಮತ್ತಷ್ಟು ಸಮಸ್ಯೆ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಹೀಗಾಗಿ ಜಿಲ್ಲಾಡಳಿತ ಕೂಡಲೇ ರೈತರ ಬೆಳೆಗಳಿಗೆ ನೀರು ಕೊಡುವ ಕುರಿತು ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು. ಈ ವಿಚಾರದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಹೆಚ್ಚು ಜವಾಬ್ದಾರಿ ತೆಗೆದುಕೊಂಡು ರೈತರ ಹಿತ ಕಾಯಬೇಕು ಎಂದು ಆಗ್ರಹಿಸಿದರು. ಬಳಿಕ ಪ್ರತಿಭಟನಾಕಾರರು ಮೆರವಣಿಗೆ ಮೂಲಕ ಬೆಂಗಳೂರು ರಸ್ತೆ, ಎಪಿಎಂಸಿ ರಸ್ತೆ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿ ತಲುಪಿದರು.ನಗರದ ಮೋತಿ ವೃತ್ತ ಹಾಗೂ ಗಡಗಿ ಚೆನ್ನಪ್ಪ ವೃತ್ತದಲ್ಲಿ ರೈತರು ಟ್ರ್ಯಾಕ್ಟ್‌ರ್‌ಗಳನ್ನು ನಿಲ್ಲಿಸಿಕೊಂಡು ರಸ್ತೆತಡೆ ನಡೆಸಿದರು. ಇದೇ ವೇಳೆ ಬೈಕ್ ಸವಾರರು ಹಾಗೂ ರೈತರ ನಡುವೆ ಮಾತಿನ ಚಕಮಕಿ ನಡೆಯಿತು. ಬೈಕ್‌ಗಳ ಓಡಾಟಕ್ಕೆ ದಾರಿ ಮಾಡಿಕೊಡುವಂತೆ ಸ್ಥಳೀಯರ ಕೋರಿಕೆಗೆ ಕೆಲ ರೈತರು ವಿರೋಧ ವ್ಯಕ್ತಪಡಿಸಿದರು.

ಗಡಗಿ ಚೆನ್ನಪ್ಪ ವೃತ್ತದಲ್ಲೂ ರೈತರು ಹಾಗೂ ಬೈಕ್ ಸವಾರರ ನಡುವೆ ವಾಕ್ಸಮರ ನಡೆಯಿತು. ಸಾರ್ವಜನಿಕರಿಗೆ ತೊಂದರೆ ಕೊಟ್ಟು ಪ್ರತಿಭಟನೆ ನಡೆಸುತ್ತಿದ್ದೀರಿ ಎಂದು ಕೆಲ ಬೈಕ್ ಸವಾರರು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ರೈತರು, ನಾವು ನಮ್ಮ ಸ್ವಾರ್ಥಕ್ಕಾಗಿ ಹೋರಾಟ ಮಾಡುತ್ತಿಲ್ಲ. ಬೆಳೆ ಬೆಳೆದು ನಿಮಗೆ ನಾಳೆ ಅನ್ನ ನೀಡುತ್ತೇವೆ ಎಂದು ತಿರುಗೇಟು ನೀಡಿದರು. ಮಾತಿನ ಚಕಮಕಿ ಶುರುವಾಗುತ್ತಿದ್ದಂತೆಯೇ ಪೊಲೀಸರು ಮಧ್ಯಪ್ರವೇಶಿಸಿ, ರೈತರನ್ನು ಸಮಾಧಾನಿಸಿದರು.

ಮಧ್ಯಾಹ್ನದ 3 ಗಂಟೆ ಬಳಿಕ ಎಂದಿನಂತೆ ವ್ಯಾಪಾರ- ವಹಿವಾಟು ಶುರುಗೊಂಡಿತು. ಬಳ್ಳಾರಿ ಬಂದ್ ಹಿನ್ನೆಲೆಯಲ್ಲಿ ನಗರದೆಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ನಗರದ ಪ್ರಮುಖ ವೃತ್ತಗಳು ಹಾಗೂ ರಸ್ತೆಗಳಲ್ಲಿ ಪೊಲೀಸರನ್ನು ನಿಯೋಜಿಸಿ, ಯಾವುದೇ ಅಹಿತಕರ ಘಟನೆಗಳು ಜರುಗದಂತೆ ನಿಗಾ ಇಡಲಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಅವರು ಗಡಗಿ ಚನ್ನಪ್ಪ ವೃತ್ತ ಸೇರಿದಂತೆ ವಿವಿಧೆಡೆ ತೆರಳಿ ಪ್ರತಿಭಟನೆ ಸ್ವರೂಪವನ್ನು ವೀಕ್ಷಿಸಿದರು.

ಮಂಗಳಮುಖಿಯರ ಬೆಂಬಲ:ಬಳ್ಳಾರಿ ಬಂದ್‌ಗೆ ಮಂಗಳಮುಖಿಯರು ಬೆಂಬಲ ವ್ಯಕ್ತಪಡಿಸಿ, ಪ್ರತಿಭಟನೆಯಲ್ಲಿ ಪಾಲ್ಗೊಂಡರು. ನಗರದ ಮೋತಿ ವೃತ್ತದಲ್ಲಿ ಜರುಗಿದ ಪ್ರತಿಭಟನೆಯಲ್ಲಿ 30ಕ್ಕೂ ಹೆಚ್ಚು ಮಂಗಳಮುಖಿಯರು ರೈತ ಚಳವಳಿಗೆ ಸಾಥ್ ನೀಡಿದರು.

ಇದೇ ವೇಳೆ ಮಾತನಾಡಿದ ಮಂಗಳಮುಖಿಯರು, ಮಳೆಯಿಲ್ಲದೆ ರೈತರು ಕಷ್ಟದಲ್ಲಿದ್ದಾರೆ. ಸರ್ಕಾರ ರೈತರಿಗೆ ಸ್ಪಂದಿಸಿ, ಕಾಲುವೆಗಳಿಗೆ ನೀರು ಬಿಡಬೇಕು. ರೈತರಿಲ್ಲದೆ ಯಾರೂ ಬದುಕಲು ಸಾಧ್ಯವಿಲ್ಲ. ಅನ್ನನೀಡುವ ರೈತರನ್ನು ಸರ್ಕಾರ ಕಡೆಗಣಿಸಬಾರದು ಎಂದು ಮಂಗಳಮುಖಿಯರು ಒತ್ತಾಯಿಸಿದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ