ಹಾವೇರಿ: ಬೆಂಬಲ ಬೆಲೆ ಯೋಜನೆಯಡಿ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಬತ್ತ ಉತ್ಪನ್ನ ಖರೀದಿ ಕೇಂದ್ರಗಳನ್ನು ಜಿಲ್ಲೆಯ ವಿವಿಧ ತಾಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ಆರಂಭಿಸುವಂತೆ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಸೂಚನೆ ನೀಡಿದರು.
ಬೆಂಬಲ ಬೆಲೆ ಯೋಜನೆಯಡಿ ಬತ್ತ ಖರೀದಿ ಕೇಂದ್ರವನ್ನು ಹಾನಗಲ್, ಶಿಗ್ಗಾಂವಿ, ಹಿರೇಕೆರೂರು ಮತ್ತು ರಾಣಿಬೆನ್ನರು ತಾಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ತೆರೆಯಲು ಸೂಚನೆ ನೀಡಿದರು.
ಬತ್ತವನ್ನು ಪ್ರತಿ ಎಕರೆಗೆ ೨೫ ಕ್ವಿಂಟಲ್ ಹಾಗೂ ಪ್ರತಿ ರೈತರಿಂದ ಗರಿಷ್ಠ ೪೦ ಕ್ವಿಂಟಲ್ ಖರೀದಿಗೆ ಅವಕಾಶವಿದೆ. ರೈತರಿಂದ ಖರೀದಿಸಿದ ಮೊತ್ತವನ್ನು ರೈತರ ಹೆಸರಿನ ಆಧಾರ್ ಸಂಖ್ಯೆ ಜೋಡಣೆಯಾದ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಬೇಕು. ಖರೀದಿಸಿದ ೧೫ ದಿನದೊಳಗಾಗಿ ಹಣ ಪಾವತಿಯಾಗಬೇಕು ಎಂದು ಸೂಚನೆ ನೀಡಿದರು.ಬೆಂಬಲ ಬೆಲೆಯಡಿ ಬತ್ತ ಖರೀದಿ ಕೇಂದ್ರ ಆರಂಭಿಸಿರುವ ಕುರಿತಂತೆ ವ್ಯಾಪಕ ಪ್ರಚಾರ ನಡೆಸಿ, ಕರಪತ್ರ, ಬ್ಯಾನರ್ ಅಳಡಿಸುವ ಮೂಲಕ ರೈತರಿಗೆ ಮಾಹಿತಿ ತಲುಪಿಸಬೇಕು. ರೈತರಿಂದ ಖರೀದಿಸಿದ ಬತ್ತ ಉತ್ಪನ್ನ ದಾಸ್ತಾನು ಮಾಡಿಕೊಳ್ಳಲು ಮುಂಜಾಗ್ರತಾ ಕ್ರಮವಾಗಿ ಉಗ್ರಾಣಗಳನ್ನು ಕಾಯ್ದಿರಿಸಬೇಕು ಎಂದು ಸೂಚನೆ ನೀಡಿದರು.
ಬೆಂಬಲ ಬೆಲೆ: ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ. ಗುಣಮಟ್ಟದ ಬತ್ತ-ಸಾಮಾನ್ಯ ಪ್ರತಿ ಕ್ವಿಂಟಲ್‌ಗೆ ₹೨,೧೮೩, ಬತ್ತ -ಗ್ರೇಡ್ ಎ ಪ್ರತಿ ಕ್ವಿಂಟಲ್‌ಗೆ ₹೨,೨೦೩ರಂತೆ ಸರ್ಕಾರ ಆದೇಶ ಹೊರಡಿಸಿದೆ. ನ. ೧೫ರಿಂದ ಡಿ. ೩೧ರ ವರೆಗೆ ರೈತರ ನೋಂದಣಿ ಆರಂಭಕ್ಕೆ ಹಾಗೂ ೦೧-೧೨-೨೦೨೩ರಿಂದ ೩೧-೦೩-೨೦೨೪ರ ವರೆಗೆ ಕರ್ನಾಟಕ ರಾಜ್ಯ ಸಹಕಾರಿ ಮಾರಾಟ ಮಂಡಳಿ ನಿಯಮಿತ ಸಂಸ್ಥೆಯ ಮೂಲಕ ಖರೀದಿಸಲು ಆದೇಶಿಸಲಾಗಿದೆ ಎಂದರು.
ಸಭೆಯಲ್ಲಿ ಜಂಟಿ ಕೈಷಿ ನಿರ್ದೇಶಕರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ತೋಟಗಾರಿಕೆ, ಸಹಕಾರಿ ಸಂಘಗಳ ಉಪನಿಬಂಧಕರು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಶಾಖಾ ವ್ಯವಸ್ಥಾಪಕರು, ರಾಜ್ಯ ಉಗ್ರಾಣ ನಿಗಮದ ವ್ಯವಸ್ಥಾಪಕರು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.