ಶಿರಹಟ್ಟಿ: ಕನ್ನಡ ಏಕೀಕರಣಕ್ಕಾಗಿ ದುಡಿದವರ ಶ್ರಮ ಸಾರ್ಥಕವಾಗಬೇಕಾದರೆ ನಾವೆಲ್ಲರೂ ಅವರನ್ನು ನಿತ್ಯ ಸ್ಮರಿಸುವ ಜತೆಗೆ ಕನ್ನಡ ಭಾಷೆ, ನೆಲ,ಜಲವನ್ನು ಉಳಿಸಿ ಬೆಳೆಸಬೇಕಾಗಿದೆ ಎಂದು ಬೆಳ್ಳಟ್ಟಿ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಉಪನ್ಯಾಸಕ ನವೀನ ಅಳವಂಡಿ ಹೇಳಿದರು.
ಹಲವಾರು ಮಹನೀಯರು ಕನ್ನಡ ನೆಲ, ಜಲ ಹಾಗೂ ಭಾಷೆಗಾಗಿ ದುಡಿದಿದ್ದಾರೆ. ಅವರ ಪರಿಶ್ರಮ ಸಾರ್ಥಕವಾಗಿಸಲು ಹೆಚ್ಚು ಕಾರ್ಯೋನ್ಮುಖರಾಗೋಣ. ಜತೆಗೆ ಕನ್ನಡ ನಾಡಿನ ಬಗ್ಗೆ ಅಭಿಮಾನವಿರಬೇಕು. ಬಹುಮುಖ್ಯವಾಗಿ ಭಾಷೆಯನ್ನು ಹೆಚ್ಚು ಬಳಸಿ ಅದನ್ನು ಉಳಿಸಿ ಬೆಳೆಸಲು ಪ್ರಬುದ್ಧರಾಗಬೇಕಾಗಿದೆ ಎಂದರು.
ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ, ನಾಡು, ನುಡಿ, ಜಲ ನಮ್ಮ ಹಕ್ಕು,ಕನ್ನಡ ನಾಡಿಗಾಗಿ ಹೋರಾಟ ಮಾಡಿದ ಆಲೂರ ವೆಂಕಟರಾಯರು, ಡೆಪ್ಯೂಟಿ ಚನ್ನಬಸಪ್ಪ,ಅಂದಾನೆಪ್ಪ ದೊಡ್ಡಮೇಟಿ ಕೊಡುಗೆ ಅವೀಸ್ಮರಣೀಯ. ಈ ಎಲ್ಲ ಮಹನೀಯರ ಋಣ ಇಂದಿಗೂ ತೀರಿಸಲಾಗಿಲ್ಲ. ಯಾರೋ ಪರದೇಶಿಗಳಿಂದ ನಮ್ಮ ಭಾಷೆ ಸೊರಗಿಲ್ಲ. ನಮ್ಮಿಂದ, ಕುರುಡು ಕಾಂಚಾಣಕ್ಕೆ ಕೈ ಒಡ್ಡುವ ಕೆಲ ಕನ್ನಡಿಗರಿಂದಲೇ ನಾಡು ನುಡಿಗೆ ಮಾರಕವಾಗಿದೆ ಎಂದು ಅಭಿಪ್ರಾಯಪಟ್ಟರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತ ಅಧ್ಯಕ್ಷ ಎಸ್.ಬಿ. ಹೊಸೂರ ಮಾತನಾಡಿ, ಕರ್ನಾಟಕದ ಏಕೀಕರಣಕ್ಕೆ ರಾಜ್ಯದ ಎರಡನೇ ಮುಖ್ಯಮಂತ್ರಿಗಳಾಗಿದ್ದ ಕೆಂಗಲ್ ಹನುಮಂತಯ್ಯನವರ ಕೊಡುಗೆ ಅಪಾರವಾಗಿದೆ. ಅಖಂಡ ಕರ್ನಾಟಕ ನಿರ್ಮಾಣ ಮಾಡಲು ಸಾಹಿತಿಗಳು, ಕೆಲ ಮುತ್ಸದ್ದಿ ರಾಜಕಾರಣಿಗಳು, ಕನ್ನಡದ ಕಟ್ಟಾಳುಗಳ ಪರಿಶ್ರಮದಿಂದ ನಾವು ಸಮೃದ್ಧ ಕರ್ನಾಟಕದಲ್ಲಿ ಇದ್ದೇವೆ. ನಾಡು ನುಡಿಯ ವಿಷಯ ಬಂದಾಗ ನಾಡಿನವರೆಲ್ಲರೂ ಒಂದಾಗಬೇಕು ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಗಿರಿಚಂದ್ರ ಹರಿಜನ, ಮಕ್ಕಳಲ್ಲಿ ಕನ್ನಡ ಭಾಷಾ ಕಲಿಕೆ ಕುಂಠಿತಗೊಳ್ಳುತ್ತಿರುವುದಕ್ಕೆ ಪೋಷಕರು, ಶಿಕ್ಷಕರು ಹಾಗೂ ಸಮುದಾಯ ಕಾರಣವೆಂದ ಅವರು, ಕನ್ನಡ ಭಾಷೆ ಬಳಸಿದಷ್ಟು ಉಳಿಸಲು ಸಾಧ್ಯ. ಕನ್ನಡ ಭಾಷೆ ಅಳಿವಿನಂಚಿನಲ್ಲಿದೆ ಎಂದು ಹೇಳುತ್ತಿದ್ದೇವೆ.ಆದರೆ ನಾವು ಎಷ್ಟರ ಮಟ್ಟಿಗೆ ಕನ್ನಡ ಬಳಸುತ್ತಿದ್ದೇವೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದರು.