ಜಿಲ್ಲಾ ವಾಣಿಜ್ಯ, ಕೈಗಾರಿಕಾ ಸಂಸ್ಥೆಯ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಾಸಕಕನ್ನಡಪ್ರಭ ವಾರ್ತೆ ಬಳ್ಳಾರಿ
ಅಂದಾಜು ₹300 ಕೋಟಿ ವೆಚ್ಚದಲ್ಲಿ ಬಳ್ಳಾರಿಯ ವಿಮಾನ ನಿಲ್ದಾಣ ಕಾಮಗಾರಿಗೆ ಶೀಘ್ರ ಚಾಲನೆ ನೀಡಲಾಗುವುದು ಎಂದು ನಗರ ಶಾಸಕ ನಾರಾ ಭರತ್ ರೆಡ್ಡಿ ತಿಳಿಸಿದರು.ನವೀಕರಣಗೊಂಡ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿ ಈಗಾಗಲೇ ಪೂರಕ ಕ್ರಮ ಕೈಗೊಳ್ಳಲಾಗುತ್ತಿದೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನ ₹300 ಕೋಟಿ ವೆಚ್ಚದಲ್ಲಿ ವಿಮಾನ ನಿಲ್ದಾಣದ ಮೂಲಭೂತ ಸೌಕರ್ಯಗಳ ಕಾಮಗಾರಿಯನ್ನು ಶೀಘ್ರ ಆರಂಭಗೊಳ್ಳಲಿದ್ದು, ನಾನು ಸೇರಿದಂತೆ ಜಿಲ್ಲೆಯ ಶಾಸಕರು ಹಾಗೂ ಸಂಸದರು ನಿಲ್ದಾಣ ನಿರ್ಮಾಣದ ಬದ್ಧತೆ ಹೊಂದಿದ್ದೇವೆ. ಈ ಸಂಬಂಧ ಕೇಂದ್ರದ ನಾಗರಿಕ ವಿಮಾನಯಾನ ರಾಜ್ಯ ಸಚಿವ ರಾಂ ಮೋಹನ್ ನಾಯ್ಡು ಹಾಗೂ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.ಬಳ್ಳಾರಿಯಲ್ಲಿ ಒಣಮೆಣಸಿನಕಾಯಿ ಮಾರುಕಟ್ಟೆ ನಿರ್ಮಾಣ ಕಾಮಗಾರಿಗೆ ಪ್ರಾಥಮಿಕ ಹಂತದಲ್ಲಿ ₹11 ಕೋಟಿ ಮಂಜೂರಾತಿಗೆ ಕ್ರಮ ಕೈಗೊಳ್ಳಲಾಗಿದೆ. ಮಾರುಕಟ್ಟೆಯ ನಿರ್ಮಾಣದಿಂದ ಬೆಳೆಗಾರರಿಗೆ, ವ್ಯಾಪಾರಸ್ಥರಿಗೆ ಅನುಕೂಲ ಆಗಲಿದೆ. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆಯ ಪದಾಧಿಕಾರಿಗಳು ಬಳ್ಳಾರಿ ಅಭಿವೃದ್ಧಿ ನೆಲೆಯಲ್ಲಿ ಯಾವುದೇ ಯೋಜನೆಯ ಪ್ರಸ್ತಾಪ ತಂದರೂ ಅದನ್ನು ಈಡೇರಿಸುವ ಪ್ರಯತ್ನ ಮಾಡಲಾಗುವುದು ಎಂದು ರೆಡ್ಡಿ ಭರವಸೆ ನೀಡಿದರು.
ಮೇಯರ್ ಮುಲ್ಲಂಗಿ ನಂದೀಶ್, ಸಂಸದ ಡಾ. ಸಯ್ಯದ್ ನಾಸಿರ್ ಹುಸೇನ್, ಈ. ತುಕಾರಾಂ, ಲಿಡ್ಕರ್ ನಿಗಮದ ಅಧ್ಯಕ್ಷ ಮುಂಡ್ರಿಗಿ ನಾಗರಾಜ, ಚೇಂಬರ್ ಆಫ್ ಕಾಮರ್ಸ್ ನ ಅಧ್ಯಕ್ಷ ಯಶವಂತ ರಾಜ್ ನಾಗಿರೆಡ್ಡಿ, ಅವ್ವಾರು ಮಂಜುನಾಥ, ಕೆ.ಸಿ. ಸುರೇಶಬಾಬು, ಮಹಾರುದ್ರಗೌಡ, ಕಾಂಗ್ರೆಸ್ ಮುಖಂಡ ಸುಬ್ಬರಾಯುಡು, ಹಗರಿ ಗೋವಿಂದಪ್ಪ, ಪಿ.ಪಾಲಣ್ಣ ಮತ್ತಿತರರು ಹಾಜರಿದ್ದರು.₹1200 ಕೋಟಿ ವೆಚ್ಚದಲ್ಲಿ ಶಾಶ್ವತ ಕುಡಿವ ನೀರು ಯೋಜನೆ
ಬಳ್ಳಾರಿ ನಗರದಲ್ಲಿ ₹1200 ಕೋಟಿ ವೆಚ್ಚದಲ್ಲಿ ಶಾಶ್ವತ ಕುಡಿಯುವ ನೀರಿನ ಕಾಮಗಾರಿ ಆರಂಭವಾಗಿದ್ದು ಪ್ರಾಥಮಿಕ ಹಂತದಲ್ಲಿ ₹260 ಕೋಟಿ ಟೆಂಡರ್ ಆಗಿದೆ. ಸರ್ವೆ ಕಾರ್ಯ, ಪೈಪಲೈನ್ - ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಕಾಮಗಾರಿ ಪ್ರಾಯೋಗಿಕವಾಗಿ ಆರಂಭವಾಗಿದೆ ಎಂದು ಶಾಸಕ ನಾರಾ ಭರತ್ ರೆಡ್ಡಿ ತಿಳಿಸಿದರು.ಇಲ್ಲಿನ 17ನೇ ವಾರ್ಡಿನ ಹನುಮಾನ್ ನಗರದಲ್ಲಿ ಏರ್ಪಡಿಸಿದ್ದ ವಿವಿಧ ಪಕ್ಷಗಳ ಕಾರ್ಯಕರ್ತರ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಗರದ ರಸ್ತೆ ಹಾಗೂ ವೃತ್ತಗಳ ಅಭಿವೃದ್ಧಿ, ನಗರ ಸುಂದರೀಕರಣ, ಮಂದಿರ-ಮಸೀದಿ-ದರ್ಗಾ-ಚರ್ಚ್ ಗಳ ಅಭಿವೃದ್ಧಿಗೂ ಅನುದಾನ ನೀಡಿರುವೆ. ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರ ಭರವಸೆಗೆ ತಕ್ಕಂತೆ ನಗರದಲ್ಲಿ ಪ್ರಗತಿದಾಯಿಕ ಕಾರ್ಯಗಳು ನಡೆಯುತ್ತಿವೆ ಎಂದು ತಿಳಿಸಿದರು.ಡಿಸಿಸಿ ಜಿಲ್ಲಾಧ್ಯಕ್ಷ ಅಲ್ಲಂ ಪ್ರಶಾಂತ್, ಕಾಂಗ್ರೆಸ್ ಮುಖಂಡರಾದ ಹೊನ್ನಪ್ಪ, ಹಗರಿ ಗೋವಿಂದ, ಮಾಜಿ ಮೇಯರ್ ರಾಜೇಶ್ವರಿ, ಎಪಿಎಂಸಿ ಅಧ್ಯಕ್ಷ ಕಟ್ಟೆಮನೆ ನಾಗೇಂದ್ರ, ರಾಮಾಂಜನೇಯ, ಜಬ್ಬಾರ್, ಶಿವರಾಜ್, ರಾಕಿ, ಬ್ಲಾಕ್ ಅಧ್ಯಕ್ಷ ಅಭಿಲಾಶ್, ಥಿಯೇಟರ್ ಶಿವು, ರಘು, ನಾಗರಾಜ, ಬಾಲರಾಜು ಮತ್ತಿತರರಿದ್ದರು.
ರಸ್ತೆ ಅಗಲೀಕರಣ, ಮಾರುಕಟ್ಟೆ ನಿರ್ಮಾಣ ಕಾಮಗಾರಿ ಆರಂಭನಗರದ ಗಡಿಗಿ ಚನ್ನಪ್ಪ ವೃತ್ತದಿಂದ ಈಡಿಗ ಹಾಸ್ಟೇಲ್‌ವರೆಗಿನ ರಸ್ತೆಯ ಅಗಲೀಕರಣ ಮತ್ತು ಅಭಿವೃದ್ಧಿ ಕಾಮಗಾರಿ ಆರಂಭಗೊಂಡಿದ್ದು, ಶಾಸಕ ನಾರಾ ಭರತ್ ರೆಡ್ಡಿ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಗಾಂಧಿ ಭವನದ ಎದುರಿಗೆ ಉದ್ಧೇಶಿತ ಹೂ-ಹಣ್ಣು ಬೀದಿ ಬದಿ ವ್ಯಾಪಾರಿಗಳ ಮಾರುಕಟ್ಟೆ ನಿರ್ಮಾಣ ಕಾಮಗಾರಿಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಶಾಸಕ ಭರತ್ ರೆಡ್ಡಿ, ಕಾಮಗಾರಿ ವಿಳಂಬ ಆಗದಂತೆ ಕೆಲಸ ಮಾಡಬೇಕೆಂದು ಸೂಚಿಸಿದರು.ಮಾಜಿ ಮೇಯರ್ ಎಂ.ರಾಜೇಶ್ವರಿ, ಸದಸ್ಯರಾದ ಪ್ರಭಂಜನಕುಮಾರ್, ಪಿ.ಗಾದೆಪ್ಪ, ಕಾಂಗ್ರೆಸ್ ಮುಖಂಡರಾದ ಸುಬ್ಬರಾಯುಡು, ನಾಗಲಕೆರೆ ಗೋವಿಂದ, ಸೋಮಪ್ಪ, ಮಡಿವಾಳಪ್ಪ, ಲೋಕೋಪಯೋಗಿ ಇಲಾಖೆಯ ಇಇ ಹೇಮರಾಜ್, ಎಇಇ ಬಸರೆಡ್ಡಿ, ಮಹಾನಗರ ಪಾಲಿಕೆಯ ಆಯುಕ್ತ ಮಂಜುನಾಥ ಇತರರಿದ್ದರು.