ಬಳ್ಳಾರಿ: ಇಡೀ ರಾಜ್ಯದ ಗಮನ ಸೆಳೆದ ಬಳ್ಳಾರಿಯ ಬ್ಯಾನರ್ ಗಲಾಟೆ ಘರ್ಷಣೆ ಹಿನ್ನೆಲೆಯಲ್ಲಿ ಶನಿವಾರ ನಡೆಯಬೇಕಿದ್ದ ಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮವನ್ನು ಮುಂದೂಡುವ ಮೂಲಕ ರಾಜ್ಯ ಸರ್ಕಾರ ಇಡೀ ಪ್ರಕರಣವನ್ನು ಸೂಕ್ಷ್ಮವಾಗಿ ನಿಭಾಯಿಸಿದೆ.
ಗುರುವಾರ ಸಂಜೆಯಿಂದಲೇ ಶುರುಗೊಂಡ ಬ್ಯಾನರ್ ತೆರವು ಗಲಾಟೆ ರಾತ್ರಿ ವೇಳೆಗೆ ಘರ್ಷಣೆಯಾಗಿ ಮಾರ್ಪಟ್ಟಿತು. ಎರಡು ಗುಂಪಿನ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಜನರು ದೊಣ್ಣೆಗಳನ್ನು ಹಿಡಿದು ಬಂದರಲ್ಲದೆ, ಕಲ್ಲು ತೂರಾಟ, ಖಾರದಪುಡಿ ಎರಚುವಿಕೆ ಮೂಲಕ ಉದ್ವಿಗ್ನತೆ ಸೃಷ್ಟಿಸಿದರು. ಶಾಸಕ ಭರತ್ ರೆಡ್ಡಿ ತಡರಾತ್ರಿವರೆಗೆ ಜನಾರ್ದನ ರೆಡ್ಡಿ ಮನೆ ಎದುರು ಕುಳಿತುಕೊಳ್ಳುವ ಮೂಲಕ ಬಂಧನಕ್ಕೆ ಪಟ್ಟು ಹಿಡಿದಿದ್ದರು. ಈ ಎಲ್ಲ ಬೆಳವಣಿಗೆ ನಗರದ ಜನರನ್ನು ಆತಂಕಕ್ಕೆ ದೂಡಿತ್ತು.
ಈ ನಡುವೆ ಶುಕ್ರವಾರ ಬೆಳಗ್ಗೆ ಸಂಘಟಕರು ಮತ್ತು ಶಾಸಕ ನಾರಾ ಭರತ್ ರೆಡ್ಡಿ ನಿಗದಿಯಂತೆ ಶನಿವಾರ ಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿ ಸಿದ್ಧತೆಗೆ ಮುಂದಾದಾಗ ಮತ್ತೆ ಬಳ್ಳಾರಿಗರಲ್ಲಿ ಆತಂಕ ಮನೆ ಮಾಡಿತ್ತು. ಪುತ್ಥಳಿ ಅನಾವರಣ ವೇಳೆ ಸುಮಾರು 20 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವ ಸಾಧ್ಯತೆ ಇರುವುದರಿಂದ ಮತ್ಯಾವ ಗಲಾಟೆ ಸಂಭವಿಸುವುದೋ ಎಂಬ ಭೀತಿ ಮೂಡಿಸಿತ್ತು.ಏತನ್ಮಧ್ಯೆ, ಖಾಸಗಿ ಗನ್‌ಮ್ಯಾನ್‌ಗಳ ಗುಂಡಿನ ದಾಳಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ ರೆಡ್ಡಿ ಎಂಬ ಯುವಕ ಮೃತಪಟ್ಟಿದ್ದರೂ ಕಾರ್ಯಕ್ರಮ ಮುಂದೂಡುವ ಯಾವ ಯೋಚನೆ ಪಕ್ಷದ ಮುಖಂಡರಲ್ಲಿ ಕಂಡು ಬರಲಿಲ್ಲ. ಗುಂಪು ಘರ್ಷಣೆ ಪ್ರಕರಣ ಕೈ-ಕಮಲ ನಾಯಕರು ಪರಸ್ಪರ ಆರೋಪ-ಪ್ರತ್ಯಾರೋಪಗಳಿಗೆ ಕಾರಣವಾಯಿತಲ್ಲದೆ, ಘಟನೆಗೆ ಹೊಣೆ ಹೊತ್ತುಕೊಳ್ಳುವವರು ಯಾರು ? ಎಂಬ ಪ್ರಶ್ನೆ ಮೂಡಿತು.
ಬಳ್ಳಾರಿಯಲ್ಲಿನ ಪರಿಸ್ಥಿತಿಯ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳಿಂದ ಸಮರ್ಪಕ ಮಾಹಿತಿ ಪಡೆದುಕೊಂಡ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಬಳ್ಳಾರಿಯ ಪುತ್ಥಳಿ ಅನಾವರಣ ಕಾರ್ಯಕ್ರಮ ಮುಂದೂಡುವ ನಿರ್ಧಾರ ಕೈಗೊಂಡಿರುವುದು ಸ್ಥಳೀಯರಲ್ಲಿ ನಿರಮ್ಮಳ ಮೂಡಿಸಿದೆ. ಸದ್ಯ ಬಳ್ಳಾರಿಯಲ್ಲಿ ಬ್ಯಾನರ್ ತೆರವು ಪ್ರಕರಣದ ಗಲಾಟೆ ವಿಚಾರ ಬೂದಿ ಮುಚ್ಚಿದ ಕೆಂಡಂತಿದ್ದು, ಪರಿಸ್ಥಿತಿ ತಿಳಿಗೊಂಡ ಬಳಿಕವೇ ಕಾರ್ಯಕ್ರಮ ನಿಗದಿ ಮಾಡುವುದು ಸೂಕ್ತ ಎಂಬ ಅಭಿಪ್ರಾಯ ಸಾರ್ವಜನಿಕರಲ್ಲಿ ವ್ಯಕ್ತವಾಗಿದೆ.
ಎಲ್ಲೆಡೆ ಪೊಲೀಸ್ ಬಂದೋಬಸ್ತ್ ಏರ್ಪಡಿಸುವ ಜೊತೆಗೆ ಜನಜೀವನ ಸಹಜ ಸ್ಥಿತಿಗೆ ಬರುವಂತೆ ಮಾಡಿದರು. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಬಳ್ಳಾರಿಗೆ ಆಗಮಿಸಿ ಪಕ್ಷದ ನಾಯಕರ ಜೊತೆ ಚರ್ಚಿಸಿದರು. ಹಾಗೂ ಆಸ್ಪತ್ರೆಗೆ ತೆರಳಿ ಗಾಯಾಳುಗಳನ್ನು ವಿಚಾರಿಸಿದರು. ಕಾಂಗ್ರೆಸ್ ಸರ್ಕಾರ, ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದರು.
ಶಾಸಕ ನಾರಾ ಭರತ ರೆಡ್ಡಿ ಅವರ ಚಿಕ್ಕಪ್ಪ ಪ್ರತಾಪ ರೆಡ್ಡಿ ಸಹ ಜನಾರ್ದನ ರೆಡ್ಡಿ, ಶ್ರೀರಾಮುಲು ವಿರುದ್ಧ ವಾಗ್ದಾಳಿ ನಡೆಸಿ ಗನಮ್ಯಾನ್ ಸಂಸ್ಕೃತಿ ತಂದಿದ್ದೇ ಅವರೆಂದು ದೂರಿದರು. ಒಟ್ಟಿನಲ್ಲಿ ರಾಜಕೀಯ ಕೆಸರೆರಚಾಟ ಜೋರಾಗಿ ಮುಂದುವರಿದಿತ್ತು.