ಬಳ್ಳಾರಿ: ನಗರದ ಖಬರಸ್ಥಾನ ಆಸ್ತಿಯ ಕಬಳಿಕೆಗೆ ಆಸ್ಪದ ಮಾಡಿಕೊಟ್ಟಿರುವ ಪಾಲಿಕೆಯ ಕಂದಾಯ ಇಲಾಖೆ ಉಪ ಆಯುಕ್ತ ನಂದೀಶ್ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಆಡಳಿತರೂಢ, ಪ್ರತಿಪಕ್ಷ ಸದಸ್ಯರು ಪಟ್ಟುಹಿಡಿದ ಪ್ರಸಂಗ ಇಲ್ಲಿನ ಜಿಪಂ ನಜೀರ್ ಸಭಾಂಗಣದಲ್ಲಿ ಸೋಮವಾರ ಜರುಗಿದ ನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ನಡೆಯಿತು.
ಸಭೆಯಲ್ಲಿ ಹಾಜರಿದ್ದ ರಾಜ್ಯಸಭಾ ಸದಸ್ಯ ಸೈಯದ್ ನಾಸಿರ್ ಹುಸೇನ್, ಪಾಲಿಕೆ ಆಯುಕ್ತರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ನಿಮಗೆ ಮಾಹಿತಿ ಇಲ್ಲದೇ ಸರ್ಕಾರದ ಆಸ್ತಿ ಹೇಗೆ ಕಬಳಿಕೆ ಆಗಲು ಸಾಧ್ಯ? ಎಂದು ಪ್ರಶ್ನಿಸಿದರು.
ಘಟನೆ ನಡೆದು 15 ದಿನಗಳಾದರೂ ಪ್ರಕರಣ ದಾಖಲಾಗಿಲ್ಲ. ನಾನೇ ಪೊಲೀಸರ ಜೊತೆ ಮಾತಾಡಿ ಪ್ರಕರಣ ದಾಖಲಿಸಿದೆ. ಇಷ್ಟಾಗಿಯೂ ತಪ್ಪಿತಸ್ಥರನ್ನು ಅಮಾನತು ಮಾಡಿಲ್ಲ. ನಿಮ್ಮ ನಡೆ ಅನುಮಾನಕ್ಕೆಡೆ ಮಾಡಿಕೊಡುತ್ತಿದೆ. ನೀವು ಅಪರ ಜಿಲ್ಲಾಧಿಕಾರಿ ಮಟ್ಟದ ಅಧಿಕಾರಿಯಾಗಿ ಪಾಲಿಕೆ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದಾದರೆ ಹೇಗೆ? ಎಂದು ಪ್ರಶ್ನಿಸಿದರು. ವಕ್ಫ್ ಆಸ್ತಿಯನ್ನೇ ಕಬಳಿಸಿದರೂ ಸುಮ್ಮನಿದ್ದೀರಿ ಎಂದಾದರೆ ಇನ್ನು ಪಾಲಿಕೆ ವ್ಯಾಪ್ತಿಯ ಅದೆಷ್ಟೋ ಸರ್ಕಾರಿ ಆಸ್ತಿ ಮಾಯವಾಗಿದೆಯೋ ನೋಡಬೇಕು ಎಂದರು.ಸರ್ಕಾರಿ ಆಸ್ತಿ ಕಬಳಿಸುವ ಟೀಮ್ ಬಳ್ಳಾರಿಯಲ್ಲಿ ಕೆಲಸ ಮಾಡುತ್ತಿದೆ. ಇದು ನಿಮಗೆ ಗೊತ್ತಿಲ್ಲವೇ? ಕಂದಾಯ ಅಧಿಕಾರಿ ಲಾಗಿನ್‌ನಿಂದಲೇ ಭೂ ಕಬಳಿಕೆಯಾಗಿದೆ ಎಂದು ಗೊತ್ತಿದ್ದೂ ಈವರೆಗೆ ಯಾಕೆ ಸುಮ್ಮನಿದ್ದೀರಿ? ಎಂದು ತರಾಟೆಗೆ ತೆಗೆದುಕೊಂಡರು.
ಖಬರಸ್ಥಾನ ಕಬಳಿಕೆ ಪ್ರಕರಣದಲ್ಲಿ ಅಮಾಯಕ ಸಿಬ್ಬಂದಿ ವಿರುದ್ಧ ಎಫ್ಐಆರ್ ಆದರೆ ಸುಮ್ಮನಿರುವುದಿಲ್ಲ. ಅಧಿಕಾರಿಗಳ ತಲೆದಂಡವಾಗಬೇಕು ಎಂದು ಸಭೆಯಲ್ಲಿದ್ದ ಶಾಸಕ ನಾರಾ ಭರತ್ ರೆಡ್ಡಿ ಎಚ್ಚರಿಸಿದರು.
ಸಭೆಯಲ್ಲಿ ಹಾಜರಿದ್ದ ಪಾಲಿಕೆಯ ಕಂದಾಯ ಇಲಾಖೆ ಉಪ ಆಯುಕ್ತ ನಂದೀಶ್ ಅವರನ್ನು ಸಭೆಯಿಂದ ಹೊರ ಕಳಿಸಿದ ರಾಜ್ಯಸಭಾ ಸದಸ್ಯ ಸೈಯದ್ ನಾಸಿರ್ ಹುಸೇನ್, ಕ್ರಿಮಿನಲ್ ಕೃತ್ಯ ಎಸಗಿದವರನ್ನು ಸಭೆಗೆ ಏಕೆ ಕರೆಸಿದಿರಿ ಎಂದು ಆಯುಕ್ತರನ್ನು ಪ್ರಶ್ನಿಸಿದರು. ಪಾಲಿಕೆ ವ್ಯಾಪ್ತಿಯಲ್ಲಿ ಈ ಹಿಂದೆ ಆಗಿರುವ ಹಾಗೂ ಈಚೆಗೆ ನಡೆದಿರುವ ಭೂ ಕಬಳಿಕೆ ಪ್ರಕರಣ ಸಂಬಂಧಿಸಿ ತನಿಖಾ ಸಮಿತಿ ರಚಿಸಲಾಗುವುದು ಎಂದು ಸಭೆಯಲ್ಲಿ ಹಾಜರಿದ್ದ ಗ್ರಾಮೀಣ ಶಾಸಕ ಬಿ.ನಾಗೇಂದ್ರ ತಿಳಿಸಿದರು.
ನಿನ್ನ ಮೊಬೈಲ್ ಪಾಸ್‌ವರ್ಡ್ ನಿನ್ನ ಹೆಂಡ್ತಿಗೆ ಕೊಡ್ತೀಯಾ?
ಕೂಡಲೇ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿ ಎಂದು ಆಯುಕ್ತರಿಗೆ ಸೂಚನೆ ನೀಡಿದರು.