ಬಳ್ಳಾರಿ: ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಅಖಂಡ ಬಳ್ಳಾರಿ ಜಿಲ್ಲೆ ಸ್ವಲ್ಪ ಸುಧಾರಣೆ ಕಂಡಿದೆ. ಜಿಲ್ಲೆಯ ಫಲಿತಾಂಶ ಶೇ. 78.92 ಆಗಿದ್ದು, ಕಳೆದ ಬಾರಿ ಶೇ. 64.41 ಆಗಿತ್ತು.
ಜಿಗಿದ ಫಲಿತಾಂಶ ಜಿಲ್ಲೆ: ದ್ವಿತೀಯ ಪಿಯು ಫಲಿತಾಂಶದಲ್ಲಿ ಅಖಂಡ ಬಳ್ಳಾರಿ ಜಿಲ್ಲೆ ವರ್ಷದಿಂದ ವರ್ಷಕ್ಕೆ ಹಾವು ಏಣಿಯಾಟದಂತಾಗಿತ್ತು. 2018ರಲ್ಲಿ ಶೇ. 59.06ರಷ್ಟು ಫಲಿತಾಂಶ ಪಡೆದು ರಾಜ್ಯಕ್ಕೆ 10ನೇ ಸ್ಥಾನದಲ್ಲಿದ್ದ ಜಿಲ್ಲೆ, 2019ರಲ್ಲಿ ಶೇ. 64.09 ಫಲಿತಾಂಶ ಪಡೆದು 19ನೇ ಸ್ಥಾನ, 2020ರಲ್ಲಿ ಶೇ. 62.02 ಫಲಿತಾಂಶ ಪಡೆದು 24ನೇ ಸ್ಥಾನ ಪಡೆದಿದೆ. 2021ರಲ್ಲಿ ಕೊರೊನಾ ಸೋಂಕಿನ ಕಾರಣದಿಂದ ಶೇ. 100ರಷ್ಟು ಫಲಿತಾಂಶ ಪಡೆದಿದ್ದು ಹೊರತುಪಡಿಸಿ, 2021-22ನೇ ಸಾಲಿನಲ್ಲಿ ಏಕಾಏಕಿ ಶೇ. 55.48 ಫಲಿತಾಂಶ ಪಡೆದು 31ನೇ ಸ್ಥಾನದಲ್ಲಿತ್ತು. 2022-23ನೇ ಸಾಲಿನಲ್ಲಿ ಶೇ. 69.55ರಷ್ಟು ಫಲಿತಾಂಶ ಪಡೆದು 27ನೇ ಸ್ಥಾನ, 2023-24ರಲ್ಲಿ ಶೇ.74.70ರಷ್ಟು ಫಲಿತಾಂಶ ಪಡೆದು 29 ಸ್ಥಾನ, 2024-25ರಲ್ಲಿ ಶೇ. 64.41ರಷ್ಟು ಸಾಧನೆ ಮಾಡಿ 27ನೇ ಸ್ಥಾನದಲ್ಲಿ ಗುರುತಿಸಿಕೊಂಡಿದ್ದ ಅಖಂಡ ಜಿಲ್ಲೆ ಈ ಬಾರಿ 2025-26ರಲ್ಲಿ ಶೇ. 78.92ರಷ್ಟು ಫಲಿತಾಂಶ ಪಡೆದಿದೆ.
ಬಾಲಕಿಯರೇ ಮೇಲುಗೈ: ಜಿಲ್ಲೆಯ ದ್ವಿತೀಯ ಪಿಯು ಫಲಿತಾಂಶದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿ ಗಮನ ಸೆಳೆದಿದ್ದಾರೆ. ಜಿಲ್ಲೆಯಲ್ಲಿ 5712 ಪರೀಕ್ಷೆಗೆ ಬಾಲಕರು ಕುಳಿತಿದ್ದು, ಇದರಲ್ಲಿ 4401 (ಶೇ. 77.04) ತೇರ್ಗಡೆಯಾಗಿದ್ದಾರೆ. 7400 ಬಾಲಕಿಯರು ಪರೀಕ್ಷೆಗೆ ಹಾಜರಾಗಿದ್ದು, ಇದರಲ್ಲಿ 5998 (ಶೇ. 81.05) ಉತ್ತೀರ್ಣರಾಗುವ ಮೂಲಕ ಫಲಿತಾಂಶದಲ್ಲಿ ಬಾಲಕರಿಗಿಂತ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.ಯಾವ ವಿಭಾಗದಲ್ಲಿ ಎಷ್ಟು ಉತ್ತೀರ್ಣ?: ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ಕಲಾ, ವಾಣಿಜ್ಯ ವಿಭಾಗಕ್ಕಿಂತ ಈ ಬಾರಿ ವಿಜ್ಞಾನ ವಿಭಾಗದಲ್ಲಿಯೇ ಅತಿ ಹೆಚ್ಚು ವಿದ್ಯಾರ್ಥಿಗಳು ತೇರ್ಗಡೆ ಹೊಂದಿರುವುದು ಗಮನಾರ್ಹವಾಗಿದೆ.