ಬಳ್ಳಾರಿ: ಬರುವ ಡಿಸೆಂಬರ್‌ನಲ್ಲಿ ಬಳ್ಳಾರಿ ಉತ್ಸವ ನಡೆಯುವುದು ಖಚಿತ. ಯಾವುದೇ ಕಾರಣಕ್ಕೂ ಸಮಯ ಬದಲಾಗದು ಎಂದು ಸಂಸದ ಈ.ತುಕಾರಾಂ ಭರವಸೆ ನೀಡಿದರು.
ಹಂಪಿ ಉತ್ಸವದಲ್ಲಿ ಬಳ್ಳಾರಿ ಜಿಲ್ಲೆಯ ಕಲಾವಿದರಿಗೆ ಅವಕಾಶ ಸಿಕ್ಕಿಲ್ಲ. ವಿಜಯನಗರ ಜಿಲ್ಲೆ ಪ್ರತ್ಯೇಕವಾದ ಬಳಿಕ ಈ ಭಾಗದ ಕಲಾವಿದರಿಗೆ ಅನ್ಯಾಯವಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ. ಕಲಾವಿದರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಬಳ್ಳಾರಿ ಉತ್ಸವ ಅದ್ಧೂರಿ ಹಾಗೂ ಅರ್ಥಪೂರ್ಣವಾಗಿ ಮಾಡೋಣ. ಜಿಲ್ಲೆಯ ಯಾವುದೇ ಉತ್ಸವಗಳು ಡಿಸೆಂಬರ್ ಒಳಗೆ ಮುಗಿಸಬೇಕು. ಮಾರ್ಚ್ ನಲ್ಲಿ ಪರೀಕ್ಷೆಗಳು ಇರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ. ರಾಜ್ಯಕ್ಕೆ ಮಾದರಿಯಾಗುವಂತೆ ಬಳ್ಳಾರಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲಾಗುವುದು ಎಂದು ತಿಳಿಸಿದರು.
ಕೇಂದ್ರದ ಅನುದಾನ ಸಮರ್ಪಕ ಬಳಕೆ:ಬಳ್ಳಾರಿ ಜಿಲ್ಲೆಯ ಸಂಸದನಾಗಿ ರೈಲ್ವೆ, ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಕೇಂದ್ರದ ಯೋಜನೆಗಳನ್ನು ಈ ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ತೋರಣಗಲ್ ರೈಲ್ವೆ ನಿಲ್ದಾಣವನ್ನು ಮಾದರಿ ನಿಲ್ದಾಣವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಗಾದಿಗನೂರು ರೈಲ್ವೆ ನಿಲ್ದಾಣವನ್ನು ಸಹ ಅಭಿವೃದ್ಧಿಗೊಳಿಸಲಾಗುವುದು. ಏಳುಬೆಂಚೆ, ದರೋಜಿ ಬಳಿ ಫ್ಲೈಓವರ್ ಮಾಡಲಾಗುವುದು. ಬಳ್ಳಾರಿಯಲ್ಲಿ ಮೋತಿ ಸೇತುವೆ ನಿರ್ಮಾಣಕ್ಕೆ ಅನುಮೋದನೆ ಸಿಕ್ಕಿದೆ. ₹160 ಕೋಟಿ ವೆಚ್ಚದಲ್ಲಿ ಇಎಸ್‌ಐ ಆಸ್ಪತ್ರೆ ನಿರ್ಮಾಣವಾಗಲಿದೆ. ವೇಣಿವೀರಾಪುರದಿಂದ ಬಳ್ಳಾರಿಯ ಸುಧಾಕ್ರಾಸ್ ವರೆಗೆ ಚತುಷ್ಪಥ ರಸ್ತೆ ನಿರ್ಮಿಸಲಾಗುವುದು ಎಂದು ಸಂಸದ ತುಕಾರಾಂ ತಿಳಿಸಿದರು.
ಹಿರಿಯ ಲೆಕ್ಕ ಪರಿಶೋಧಕ ಸಿರಿಗೇರಿ ಪನ್ನರಾಜ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ್, ಕರವೇ ಜಿಲ್ಲಾಧ್ಯಕ್ಷ ಜಿ.ರಾಜಶೇಖರ ಕುರಿಹಟ್ಟಿ, ಕಾಂಗ್ರೆಸ್ ಮುಖಂಡ ವೆಂಕಟೇಶ್ ಹೆಗಡೆ, ಅಲುವೇಲು ಶ್ರೀನಿವಾಸ್, ಜಿಲ್ಲಾ ಕಲಾವಿದರ ಸಂಘದ ಪ್ರಮುಖರಾದ ಸುಬ್ಬಣ್ಣ, ವೀರೇಶ್ ದಳವಾಯಿ, ಮಂಜುನಾಥ ಗೋವಿಂದವಾಡ, ಅಂಬರೇಷ, ರಮಣಪ್ಪ ಭಜಂತ್ರಿ ಉಪಸ್ಥಿತರಿದ್ದರು. ಸಿರುಗುಪ್ಪದ ಹಿರಿಯ ಕಲಾವಿದ ಸಾಧು ರಾಯಪ್ಪ ಅವರಿಗೆ 2026ನೇ ಸಾಲಿನ ನಾಡೋಜ ಸುಭದ್ರಮ್ಮ ಮನ್ಸೂರು ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.