ಕನ್ನಡಪ್ರಭ ವಾರ್ತೆ ಶಿಡ್ಲಘಟ್ಟ
ನಗರದ ತಾಲೂಕು ಕಚೇರಿ ಮುಂಭಾಗದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಶಾಲಾ ಶಿಕ್ಷಣ ಇಲಾಖೆ, ಪ್ರವಾಸೋದ್ಯಮ ಇಲಾಖೆಯ ಸಹಕಾರದಲ್ಲಿ ಹಮ್ಮಿಕೊಳ್ಳಲಾದ ಕರ್ನಾಟಕ ದರ್ಶನ ನಾಲ್ಕು ದಿನಗಳ ಶೈಕ್ಷಣಿಕ ಪ್ರವಾಸಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಇಂದಿನ ಮಕ್ಕಳಿಗೆ ನಮ್ಮ ನಾಡಿನ ಸಂಸ್ಕೃತಿಯನ್ನು ಪರಿಚಯಿಸಿ ಕೊಡಬೇಕಾದ ಅಗತ್ಯತೆ ಇದೆ. ಪ್ರಪಂಚದ ಎಲ್ಲಾ ಭಾಗದಿಂದಲೂ ಇಲ್ಲಿನ ಶಿಲ್ಪ ಕಲೆಗಳನ್ನು ನೋಡಲು ಬರುವಾಗ ನಮ್ಮ ನಾಡಿನವರೇ ಆದ ನಮಗೆ ಇಲ್ಲಿನ ಕಲೆ, ಸಾಹಿತ್ಯದ ಬಗ್ಗೆ ತಿಳಿದಿಲ್ಲ. ನಾವು ನಮ್ಮ ಕಲೆ ಮತ್ತು ಸಾಹಿತ್ಯದ ಬಗ್ಗೆ ಅಭಿಮಾನವನ್ನು ಹೆಚ್ಚಿಸಿಕೊಳ್ಳಬೇಕಿದೆ. ಇತಿಹಾಸ, ಪೌರನೀತಿ, ವಿಜ್ಞಾನ ಮತ್ತಿತರ ವಿಷಯಗಳನ್ನು ಕೇವಲ ತರಗತಿ ಕೋಣೆಯಲ್ಲಿ ಬೋಧಿಸುವುದಕ್ಕಿಂತ ಪ್ರವಾಸಗಳ ಮೂಲಕ, ಸ್ಥಳ ವೀಕ್ಷಣೆ ಮೂಲಕ ಕಲಿಯುವುದರಿಂದ ಮಕ್ಕಳಲ್ಲಿ ಶಾಶ್ವತ ಕಲಿಕೆಯಾಗುತ್ತದೆ. ದೇಶಾಭಿಮಾನ , ನಾಡು ಮತ್ತು ಭಾಷಾಭಿಮಾನ ಮತ್ತಿತರ ಮೌಲ್ಯಗಳನ್ನು ಪ್ರವಾಸಗಳಿಂದ ರೂಢಿಸಿಕೊಳ್ಳಬಹುದಾಗಿದೆ ಎಂದರು.ತಾಲೂಕಿನ ವಿವಿಧ ಶಾಲೆಗಳ ಸುಮಾರು 120ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರವಾಸ ಕೈಗೊಂಡಿದ್ದು, ಬಡ , ಗ್ರಾಮೀಣ ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಮತ್ತು ಕಲಿಕೆಯಲ್ಲಿ ಉತ್ತಮ ಪ್ರಗತಿ ತೋರಿದ ವಿದ್ಯಾರ್ಥಿಗಳಿಗೆ ಈ ಪ್ರವಾಸದಿಂದ ಅನುಕೂಲವಾಗಲಿದೆ ಎಂದರು.
ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ, ಪ್ರವಾಸದ ಮಾರ್ಗದರ್ಶಿ ಶಿಕ್ಷಕ ಎಚ್.ಎಸ್ ರುದ್ರೇಶಮೂರ್ತಿ ಮಾತನಾಡಿ, ಶಾಲೆಯ ನಾಲ್ಕು ಗೋಡೆಗಳ ನಡುವೆ ಇರುವ ಕಲಿಕೆಗಿಂತ ಹೊರಗಿನ ಪ್ರಪಂಚದ ಅನುಭವವು ಹೊಸ ಚೈತನ್ಯ ನೀಡುತ್ತದೆ. ವಿವಿಧ ಪ್ರದೇಶಗಳ ಆಹಾರ, ಉಡುಗೆ- ತೊಡುಗೆ ಮತ್ತು ಸಂಪ್ರದಾಯಗಳನ್ನು ಹತ್ತಿರದಿಂದ ತಿಳಿಯಲು ಇದು ಉತ್ತಮ ಅವಕಾಶ. ಪ್ರವಾಸವು ಮಕ್ಕಳಲ್ಲಿ ಆತ್ಮವಿಶ್ವಾಸ, ಶಿಸ್ತು ಮತ್ತು ನಾಯಕತ್ವದ ಗುಣಗಳನ್ನು ಬೆಳೆಸುತ್ತದೆ. ದಿನನಿತ್ಯದ ಶೈಕ್ಷಣಿಕ ಒತ್ತಡದಿಂದ ಹೊರಬರಲು ಮತ್ತು ಮನಸ್ಸಿಗೆ ಆಹ್ಲಾದ ನೀಡಲು ಪ್ರವಾಸಗಳು ಅಗತ್ಯ ಎಂದರು.