ಜೆರಾಕ್ಸ್ ಪ್ರಶ್ನೆಪತ್ರಿಕೆಗಳನ್ನು ನೀಡಿ ಪರೀಕ್ಷೆ ಬರೆಸಿದ ಪರೀಕ್ಷಾ ಕೇಂದ್ರಗಳು
ವಿದ್ಯಾರ್ಥಿಗಳು ಕಂಗಾಲು; ತಡವಾಗಿ ಶುರುಗೊಂಡ ಪರೀಕ್ಷೆ ಕನ್ನಡಪ್ರಭ ವಾರ್ತೆ ಬಳ್ಳಾರಿ
ಬಿಎಸ್ಸಿ ದ್ವಿತೀಯ ಸೆಮ್‌ನ ಕನ್ನಡ ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ವಾಣಿಜ್ಯ ವಿಷಯದ ಪ್ರಶ್ನೆಗಳು ಮುದ್ರಣಗೊಂಡು ಗೊಂದಲಕ್ಕೀಡಾದ ಪ್ರಸಂಗ ನಗರದಲ್ಲಿ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಮಂಗಳವಾರ ನಡೆದಿದೆ.ಕೂಡಲೇ ಎಚ್ಚೆತ್ತ ಪರೀಕ್ಷಾರ್ಥಿಗಳು ಸಂಬಂಧಿಸಿದ ಪರೀಕ್ಷಾ ಕೇಂದ್ರದ ಮುಖ್ಯಸ್ಥರ ಗಮನಕ್ಕೆ ತರುತ್ತಿದ್ದಂತೆಯೇ ವಿಶ್ವವಿದ್ಯಾಲಯದಿಂದ ಮತ್ತೊಂದು ನಿಗದಿತ ಪರೀಕ್ಷೆಯ ಪ್ರಶ್ನೆಪತ್ರಿಕೆ ತರಿಸಿಕೊಂಡು ಪರೀಕ್ಷೆ ನಡೆಸಲಾಗಿದೆ.
ಜಿಲ್ಲೆಯ ವಿಎಸ್‌ಕೆವಿವಿ ವ್ಯಾಪ್ತಿಯ ಪದವಿ ಕಾಲೇಜುಗಳಲ್ಲಿ ಕಳೆದ ಮೂರು ದಿನಗಳಿಂದ ೨, ೪, ೬ಸೆಮಿಸ್ಟರ್‌ಗಳ ಬಿಸಿಎ, ಬಿಕಾಂ, ಬಿಬಿಎ, ಬಿಎ, ಬಿಕಾಂ, ಬಿಸ್ಸಿ ಸೇರಿದಂತೆ ಪದವಿಯ ಕೋರ್ಸ್‌ಗಳ ಪರೀಕ್ಷೆ ಆರಂಭವಾಗಿವೆ. ಮಂಗಳವಾರ ಬಿಎಸ್ಸಿಯ ಬೇಸಿಕ್ ಕನ್ನಡ ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿಗಳಿಗೆ ವಾಣಿಜ್ಯ ವಿಷಯದ ಪ್ರಶ್ನೆ ಪತ್ರಿಕೆ ಬಂದಿದ್ದು ವಿದ್ಯಾರ್ಥಿಗಳು ಕೆಲಕಾಲ ಆತಂಕಗೊಂಡಿದ್ದಾರೆ. ಪ್ರಶ್ನೆಪತ್ರಿಕೆ ಗೊಂದಲದಿಂದಾಗಿ ಬೆಳಿಗ್ಗೆ 9 ಗಂಟೆಗೆ ಶುರುಗೊಳ್ಳಬೇಕಿದ್ದ ಪರೀಕ್ಷೆ 45 ನಿಮಿಷಗಳ ಕಾಲ ತಡವಾಗಿ ಶುರುವಾಗಿದೆ.
ಈ ಕುರಿತು ಕನ್ನಡಪ್ರಭಕ್ಕೆ ಪ್ರತಿಕ್ರಿಯಿಸಿದ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಪ್ರೊ. ಎನ್.ಎಂ.ಸಾಲಿ, ಪ್ರಶ್ನೆಪತ್ರಿಕೆ ಬದಲಾವಣೆಯಾಗಿಲ್ಲ. ವಿವಿಯಿಂದ ಪರೀಕ್ಷಾ ಕೇಂದ್ರಗಳಿಗೆ ಕಳಿಸುವಾಗ ಬೇರೆಯದ್ದೇ ಪ್ರಶ್ನೆಪತ್ರಿಕೆ ಕಳಿಸಲಾಗಿದ್ದು, ಕೂಡಲೇ ಅದನ್ನು ಸರಿಪಡಿಸಲಾಗಿದೆ. ಪ್ಯಾಕ್ ಮಾಡುವಾಗ ಬಿಎಸ್ಸಿ ಬದಲಾಗಿ, ಬಿಕಾಂ ಪ್ರಶ್ನೆಪತ್ರಿಕೆ ಕಳಿಸಲಾಗಿದೆ. ನಮ್ಮ ಗಮನಕ್ಕೆ ಬರುತ್ತಿದ್ದಂತೆಯೇ ಬಿಎಸ್ಸಿ ಪ್ರಶ್ನೆ ಪತ್ರಿಕೆಯನ್ನು ಇ-ಮೇಲ್ ಮೂಲಕ ಕಳಿಸಿದೆವು. ಪ್ರಶ್ನೆಪತ್ರಿಕೆ ಜೆರಾಕ್ಸ್ ಮಾಡಿಸಿ, ಪರೀಕ್ಷೆ ಬರೆಸಲಾಗಿದೆ ಎಂದು ತಿಳಿಸಿದರು.