ಮಲಕನಹಳ್ಳಿ ಗ್ರಾಮದ ಬಳಿ ಕುರುಚಲು ಗೋಮಾಳಕ್ಕೆ ಜೀವಕಳೆ ತಂದ ನರೇಗಾ!

KannadaprabhaNewsNetwork |  
Published : Jun 25, 2025, 12:33 AM ISTUpdated : Jun 25, 2025, 12:34 AM IST
ಫೋಟೊ ಶೀರ್ಷಿಕೆ: 24ಆರ್‌ಎನ್‌ಆರ್2ರಾಣಿಬೆನ್ನೂರು ತಾಲೂಕಿನ ಮಲಕನಹಳ್ಳಿ ಬಳಿಯ ಗೋಮಾಳ ಜಾಗೆಯನ್ನು ನರೇಗಾ ಯೋಜನೆಯಡಿ ಅಭಿವೃದ್ಧಿಪಡಿಸಿರುವುದು  ಫೋಟೊ ಶೀರ್ಷಿಕೆ: 24ಆರ್‌ಎನ್‌ಆರ್2ಎರಾಣಿಬೆನ್ನೂರು ತಾಲೂಕಿನ ಮಲಕನಹಳ್ಳಿ ಬಳಿಯ ಗೋಮಾಳ ಜಾಗೆಯ ಅಭಿವೃದ್ಧಿಗೆ ಶ್ರಮಿಸಿದ ನರೇಗಾ ಯೋಜನೆ ಕೂಲಿ ಕಾರ್ಮಿಕರು   | Kannada Prabha

ಸಾರಾಂಶ

ಉಪಯೋಗಕ್ಕೆ ಬಾರದ ಜಾಲಿ ಗಿಡ, ಮುಳ್ಳು ಕಂಟಿ ಬೆಳೆದು ದನಕರುಗಳು ಸಹ ಈ ನೆಲದಲ್ಲಿ ನಿಂತು ಮೇಯಲಾರದ ಸ್ಥಿತಿ ಇತ್ತು. ನರೇಗಾ ಯೋಜನೆಯಡಿ ಕೆಲಸ ಮಾಡುವ ಹಳ್ಳಿಗರು ಇಡೀ ಪ್ರದೇಶವನ್ನು ಸ್ವಚ್ಛಗೊಳಿಸಿ, ಬೇರೆ ಗಿಡ ನೆಟ್ಟು ಬೆಳೆಸುವ ಮೂಲಕ ಜೀವಕಳೆ ತಂದಿದ್ದಾರೆ.

ಬಸವರಾಜ ಸರೂರ

ರಾಣಿಬೆನ್ನೂರು: ತಾಲೂಕಿನ ಮಲಕನಹಳ್ಳಿ ಗ್ರಾಮದ ಬಳಿ ಜಾನುವಾರುಗಳ ಸಲುವಾಗಿ ಸರ್ಕಾರ ಕಾಯ್ದಿರಿಸಿರುವ ಕುರುಚಲು ಗೋಮಾಳ ಇದೀಗ ನಳನಳಿಸುತ್ತಿದೆ. ಹಸಿರು ಹೊದ್ದು, ಹುಲ್ಲು ಬೆಳೆದು ಜಾನುವಾರುಗಳು ನೆಮ್ಮದಿಯಿಂದ ಮೇಯುವಂತಾಗಿದೆ.

ಇದಕ್ಕೆಲ್ಲ ಕಾರಣ "ಮಹಾತ್ಮಾ ಗಾಂಧೀಜಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ "ಯ ದುಡಿಯುವ ಕೈಗಳು!

ಉಪಯೋಗಕ್ಕೆ ಬಾರದ ಜಾಲಿ ಗಿಡ, ಮುಳ್ಳು ಕಂಟಿ ಬೆಳೆದು ದನಕರುಗಳು ಸಹ ಈ ನೆಲದಲ್ಲಿ ನಿಂತು ಮೇಯಲಾರದ ಸ್ಥಿತಿ ಇತ್ತು. ನರೇಗಾ ಯೋಜನೆಯಡಿ ಕೆಲಸ ಮಾಡುವ ಹಳ್ಳಿಗರು ಇಡೀ ಪ್ರದೇಶವನ್ನು ಸ್ವಚ್ಛಗೊಳಿಸಿ, ಬೇರೆ ಗಿಡ ನೆಟ್ಟು ಬೆಳೆಸುವ ಮೂಲಕ ಜೀವಕಳೆ ತಂದಿದ್ದಾರೆ. ಹೌದು! ತಾಲೂಕಿನ ಮಲಕನಹಳ್ಳಿ ಹಾಗೂ ಹನುಮನಹಳ್ಳಿ, ಮುಷ್ಟೂರ ಗ್ರಾಮಗಳ ಜಾನುವಾರುಗಳಿಗೆ ಇದೇ ಗೋಮಾಳ ಏಕೈಕ ಆಶ್ರಯ ತಾಣ. ಮಲಕನಹಳ್ಳಿ ಗ್ರಾಮದ ಸರ್ವೆ ನಂ. 7ರ ವ್ಯಾಪ್ತಿಯ ಸುಮಾರು 22 ಎಕರೆ ಗೋಮಾಳದಲ್ಲಿ 2005- 06ರಲ್ಲಿ ಸುಜಲ ಜಲಾನಯನ ಯೋಜನೆಯಡಿ ಸುಮಾರು 2000 ಹುಣಸೆ ಮರಗಳನ್ನು ನೆಡಲಾಗಿತ್ತು. ಆದರೆ ಸೂಕ್ತ ನಿರ್ವಹಣೆಯಿಲ್ಲದ ಕಾರಣ ಆ ಪ್ರದೇಶದಲ್ಲಿ ಜಾಲಿ ಗಿಡ, ಗಿಡ- ಗಂಟೆ ಬೆಳೆದು ದನಕರುಗಳು ಹೋಗದೇ ಮುಳ್ಳಿನ ಪೊದೆಯಾಗಿ ಹುಣಸಿ ಮರಗಳ ಬೆಳವಣಿಗೆಗೆ ಕುಂಠಿತವಾಗಿತ್ತು.

ನರೇಗಾ ಮೂಲಕ ಅಭಿವೃದ್ಧಿ: 2023- 24, 2024- 25, 2025- 26ರಲ್ಲಿ ನರೇಗಾ ಯೋಜನೆಯಡಿ ಸುಮಾರು ₹20 ಲಕ್ಷ ಅನುದಾನದಲ್ಲಿ ಸುಮಾರು ₹13 ಲಕ್ಷ ವೆಚ್ಚದಲ್ಲಿ 350 ಕಾಂಟೂರ್ ಟ್ರಂಚ್‌ (ಕಂದಕ)ಗಳನ್ನು ಕೂಲಿ ಕಾರ್ಮಿಕರಿಂದ ಮಾಡಿಸಲಾಯಿತು. ಇದರಿಂದ ಎರಡು ವರ್ಷದಲ್ಲಿ ಸುರಿದ ಮಳೆ ನೀರು ವ್ಯರ್ಥವಾಗದೇ ಕಂದಕದಲ್ಲಿ ಇಂಗಿದೆ. ಹೀಗಾಗಿ ಇಡೀ ಗೋಮಾಳದ ಪ್ರದೇಶದ ಸಸ್ಯ ವರ್ಗಕ್ಕೆ ಜೀವಕಳೆ ಮೈದುಂಬಿಕೊಂಡು ಹುಣಸೆ ಮರಗಳು ಹಸಿರಿನ ಹೊದಿಕೆಯಿಂದ ನಳನಳಿಸುತ್ತಿವೆ. ಇದಾದ ಮೇಲೆ ಮೊಲ, ನವಿಲುಗಳು, ಜಿಂಕೆ, ಪಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿವೆ. ಇದಕ್ಕೆಲ್ಲಾ ನರೇಗಾ ಬಲ ತಂದು ಕೊಟ್ಟಿದೆ ಎಂದು ನರೇಗಾ ಕೂಲಿ ಕಾರ್ಮಿಕ ಉಮೇಶ ಪಾಟೀಲ ತಿಳಿಸಿದರು. ನರೇಗಾ ಅನುಷ್ಠಾನ: ಮಲಕನಹಳ್ಳಿ, ಮುಷ್ಟೂರ, ಹನುಮನಹಳ್ಳಿ ಜನರ ಬಹುದಿನದ ಕನಸು ಗೋಮಾಳ ಅಭಿವೃದ್ಧಿ ಮಾಡುವ ಉದ್ದೇಶವಾಗಿತ್ತು. ಇದಕ್ಕಾಗಿ ಮುದೇನೂರ ಗ್ರಾಮ ಪಂಚಾಯಿತಿ ಪ್ರತಿನಿಧಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು 2023- 24 ಮತ್ತು 2024- 25ರಲ್ಲಿ ನರೇಗಾ ಕ್ರಿಯಾಯೋಜನೆಯಲ್ಲಿ ಸೇರಿಸಿ ಸುಮಾರು 22 ಎಕರೆ ಗೋಮಾಳದಲ್ಲಿ ಸುಮಾರು 350 ಕಾಂಟೂರ್ ಟ್ರಂಚ್‌ಗಳನ್ನು ನರೇಗಾ ಕೂಲಿ ಕಾರ್ಮಿಕರಿಂದ ನಿರ್ಮಿಸಲಾಗಿದೆ.

ಪ್ರತಿ ಟ್ರಂಚ್‌ನ ಅಳತೆ 6 ಮೀ ಉದ್ದ, 1.5 ಮೀ ಅಗಲ, 0.45 ಆಳ ಮೀ. ಇದೆ. ಇದೇ ರೀತಿಯಾಗಿ ಸುಮಾರು 350 ಟ್ರಂಚ್‌ಗಳನ್ನು ಕೂಲಿ ಕಾರ್ಮಿಕರಿಂದ ಅನುಷ್ಠಾನ ಮಾಡಲಾಗಿದೆ. ಇದರಿಂದ ಮಳೆ ನೀರು ಹರಿದು ಹೋಗದೇ ಭೂಮಿಯಲ್ಲಿ ಇಂಗಿದೆ. ಪ್ರತಿ ಟ್ರಂಚ್ ಒಮ್ಮೆ ಮಳೆಯಾಗಿ ಟ್ರಂಚ್ ತುಂಬಿದರೆ ಸುಮಾರು 12000 ಲೀಟರ್ ನೀರು ಇಂಗುತ್ತದೆ. ಇದರಿಂದ ಗೋಮಾಳದ ಸುತ್ತಮುತ್ತಲಿನ ರೈತರ ಜಮೀನಿನಲ್ಲಿರುವ ಬೋರ್‌ವೆಲ್‌ಗಳ ಅಂತರ್ಜಲ ಮಟ್ಟ ಹೆಚ್ಚಳವಾಗಿವೆ ಎಂದು ಸ್ಥಳಿಯ ರೈತ ಬಸಯ್ಯ ರಾಚಪ್ಪನವರ ತಿಳಿಸಿದರು.

ಯಶಸ್ವಿ ಅನುಷ್ಠಾನ: ನರೇಗಾ ಯೋಜನೆ ಅನುಷ್ಠಾನಗೊಳಿಸುವಾಗ ಮುಳ್ಳು ಕಂಟಿಗಳು ಆವರಿಸಿದ್ದರಿಂದ ಕೂಲಿ ಕಾರ್ಮಿಕರು ಕೆಲಸಕ್ಕೆ ಬರಲು ಮುಂದೆ ಬರುತ್ತಿರಲಿಲ್ಲ ಹಾಗೂ ನೆಲ ಅಗೆಯಲು ಗಟ್ಟಿ ಇರುವುದರಿಂದ ಕಂದಕ ನಿರ್ಮಾಣ ಮಾಡಲು ಹಿಂದೇಟು ಹಾಕುತ್ತಿದ್ದರು. ಈ ಎಲ್ಲ ಸವಾಲುಗಳನ್ನು ಮೆಟ್ಟಿ ನಿಂತು ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ ಎಂದು ಮಲಕನಹಳ್ಳಿ ಗ್ರಾಪಂ ಅಧ್ಯಕ್ಷೆ ರೇಖಾ ಪುಟ್ಟಕ್ಕನವರ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ