ಎರಡು ದಿನಗಳ ವಿಚಾರ ಸಂಕಿರಣ, ಬಯಲಾಟ ಪ್ರದರ್ಶನ ಕಾರ್ಯಕ್ರಮ
ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳು ಬಯಲಾಟದ ತವರೂರು. ಇಲ್ಲಿ ಬಯಲಾಟದ ಹಲವಾರು ಕಲಾವಿದರು, ಕವಿಗಳು ಆಗಿ ಹೋಗಿದ್ದಾರೆ. ಹಾಗೆಯೇ ಬಯಲಾಟದ ನಾಂದಿ ಪದಗಳನ್ನು ಮುಖ್ಯವಾಗಿ ಇಲ್ಲಿನ ಕವಿಗಳು ಬರೆಯುತ್ತಿದ್ದರು ಮತ್ತು ಹಾಡುತ್ತಿದ್ದರು ಎಂದು ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಹಾಗೂ ಸಂಸ್ಕೃತಿ ಚಿಂತಕ ಡಾ. ರಹಮತ್ ತರೀಕೆರೆ ಹೇಳಿದರು.
ಕರ್ನಾಟಕ ಬಯಲಾಟ ಅಕಾಡೆಮಿ ಬಾಗಲಕೋಟೆ, ಹಂಪಿ ಕನ್ನಡ ವಿಶ್ವವಿದ್ಯಾಲಯದ ನಾಟಕ ವಿಭಾಗ ಇವುಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವವಿದ್ಯಾಲಯದ ಭುವನ ವಿಜಯ ಕಟ್ಟಡದಲ್ಲಿ ಸೋಮವಾರ ನಡೆದ ಕರ್ನಾಟಕ ಬಯಲಾಟಗಳ ಸಂಶೋಧನೆ ಹೊಸ ಸಾಧ್ಯತೆಗಳು ಎಂಬುದರ ಕುರಿತ ಎರಡು ದಿನಗಳ ವಿಚಾರ ಸಂಕಿರಣ ಮತ್ತು ಬಯಲಾಟ ಪ್ರದರ್ಶನ ಕಾರ್ಯಕ್ರಮದಲ್ಲಿ ಆಶಯನುಡಿಗಳನ್ನಾಡಿದ ಅವರು, ಬಯಲಾಟ ಎನ್ನುವುದು ಹವ್ಯಾಸಿ ರಂಗಭೂಮಿ ಮತ್ತು ಹಳ್ಳಿಯ ಸಾಂಸ್ಕೃತಿಕ ಕಲೆ ಆಗಿದೆ. ಈ ಕಲೆಯನ್ನು ಈಗಲೂ ಉಳಿಸಿ ಬೆಳೆಸಿಕೊಂಡು ಹೋಗಲಾಗುತ್ತಿದೆ. ಈಗಲೂ ಈ ಕಲೆಗೆ ಹೆಚ್ಚಿನ ಪ್ರಮಾಣದಲ್ಲಿ ಪ್ರೇಕ್ಷಕರು ಇದ್ದಾರೆ. ಜೊತೆಗೆ ಕಲಾವಿದರೂ ಇದ್ದಾರೆ ಎಂದರು.ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷ ಡಾ. ಕೆ.ಆರ್. ದುರ್ಗಾದಾಸ ಮಾತನಾಡಿ, ಬಯಲಾಟ ಪ್ರದರ್ಶನಗಳಲ್ಲಿ ಯಾವುದೇ ರೀತಿಯ ಬಡವ-ಶ್ರೀಮಂತ, ಮೇಲು-ಕೀಳು ಎಂದು ಭಾವಿಸದೆ ಕಲಾವಿದರ ಪ್ರತಿಭೆಯನ್ನು ಗುರುತಿಸುವುದು ಮತ್ತು ಎಲ್ಲರೂ ಒಂದೇ ಎನ್ನುವುದೇ ಮುಖ್ಯ ತತ್ವವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳ ಮುಖಸ್ಥರು, ಪ್ರಾಧ್ಯಾಪಕರು, ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಬಯಲಾಟದ ಕಲಾವಿದರು ಇದ್ದರು. ಸುಮಾ ಕಮ್ಮಾರ, ಅರುಣ್ ಜೋಳದ ಕೂಡ್ಲಿಗಿ, ಸತೀಶಗೌಡ ಬಿ., ನಿರ್ವಹಿಸಿದರು.