ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ತಾಲೂಕಿನ ವಿವಿಧ ಭಾಗಗಳಲ್ಲಿ ಭಾನುವಾರ ಸಂಜೆ ಹಾಗೂ ಸೋಮವಾರ ಬೆಳಗಿನ ಜಾವ ಸುರಿದ ಗಾಳಿ ಮಳೆಯ ಪರಿಣಾಮ 44 ವಿದ್ಯುತ್ ಕಂಬಗಳು ಧರಾಶಾಯಿಯಾಗಿದ್ದು, ಒಂದು ವಿದ್ಯುತ್ ಪರಿವರ್ತಕ ಉರುಳಿ ಬಿದ್ದ ಪರಿಣಾಮವಾಗಿ ಮೆಸ್ಕಾಂಗೆ 5 ಲಕ್ಷ ರು.ಗಿಂತ ಅಧಿಕ ನಷ್ಟ ಉಂಟಾಗಿದೆ.ಭಾನುವಾರ ಸಂಜೆಯ ಮಳೆಗೆ ಅಲ್ಲಲ್ಲಿ ಸಾಕಷ್ಟು ಹಾನಿಗಳು ಉಂಟಾಗಿತ್ತು. ಸೋಮವಾರ ಮುಂಜಾನೆ ಸುರಿದ ಮಳೆಗೆ ಮತ್ತೆ ಹಾನಿ ಮುಂದುವರಿಯಿತು. ಉಜಿರೆ ಮೆಸ್ಕಾಂ ಉಪ ವಿಭಾಗದಲ್ಲಿ 14ಎಚ್‌ಟಿ ವಿದ್ಯುತ್ ಕಂಬ 10 ಎಲ್‌ಟಿ ವಿದ್ಯುತ್ ಕಂಬ ಸೇರಿದಂತೆ ಕಲ್ಮಂಜ ಗ್ರಾಮದಲ್ಲಿ 25 ಕೆವಿ ಸಾಮರ್ಥ್ಯದ ವಿದ್ಯುತ್ ಪರಿವರ್ತಕ ನೆಲಕ್ಕುರುಳಿತು. ಬೆಳ್ತಂಗಡಿ ಮೆಸ್ಕಾಂ ಉಪ ವಿಭಾಗದ ವ್ಯಾಪ್ತಿಯಲ್ಲಿ 2 ಎಚ್ ಟಿ ಹಾಗೂ 12 ಎಲ್‌ಟಿ ಕಂಬಗಳು ಧರಾಶಾಯಿಯಾದವು.
ತಾಲೂಕಿನ ಹೆಚ್ಚಿನ ಕಡೆಗಳಲ್ಲಿ ಅಲ್ಲಲ್ಲಿ ವಿದ್ಯುತ್ ಕಂಬ ತಂತಿಗಳಿಗೆ ಹಾನಿ ಸಂಭವಿಸಿದ ಕಾರಣ ತಾಲೂಕಿನ ಗ್ರಾಮೀಣ ಭಾಗಗಳ ಹೆಚ್ಚಿನ ಕಡೆಗಳಲ್ಲಿ ಸೋಮವಾರ ಸಂಜೆ ತನಕವೂ ವಿದ್ಯುತ್ ಪೂರೈಕೆಯಾಗಿಲ್ಲ. ಪ್ರಸ್ತುತ ಅನೇಕ ಕಡೆಗಳಲ್ಲಿ ನೀರಿನ ಸಮಸ್ಯೆ ಇದ್ದು ವಿದ್ಯುತ್ ಕೈ ಕೊಟ್ಟದ್ದರಿಂದ ಜನರು ಪರದಾಡುವಂತಾಯಿತು. ಮೆಸ್ಕಾಂ ಸಿಬ್ಬಂದಿ ಒಂದೆಡೆ ಕೆಲಸ ಪೂರ್ಣಗೊಳಿಸುವಾಗ ಇನ್ನೊಂದು ಕಡೆಯಿಂದ ದೂರುಗಳು ಬರುತ್ತಿದ್ದ ಹಿನ್ನೆಲೆಯಲ್ಲಿ ದಿನವಿಡೀ ಕೆಲಸ ನಿರ್ವಹಿಸಿದರೂ ಎಲ್ಲಾ ಪ್ರದೇಶಗಳಿಗೆ ವಿದ್ಯುತ್ ಪೂರೈಸಲು ಸಾಧ್ಯವಾಗಿಲ್ಲ.ಮನೆಗೆ ಹಾನಿ: ಕಲ್ಮಂಜ ಗ್ರಾಮದ ಸತ್ಯನಪಲಿಕೆ ಎಂಬಲ್ಲಿ ಸರೋಜಾ ಎಂಬವರ ವಾಸದ ಮನೆ ಮೇಲೆ ಮರ ಬಿದ್ದು ಮೇಲ್ಚಾವಣಿಗೆ ಹಾನಿ ಸಂಭವಿಸಿದೆ. ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತೆಕ್ಕಾರು ಗ್ರಾಮದ ಸರಳಿಕಟ್ಟೆ ಮೂಡಡ್ಕ ಎಂಬಲ್ಲಿ ನೂತನ ಮನೆಯೊಂದರ ಮುಂಭಾಗದ ಕಾಂಪೌಂಡ್ ಕುಸಿದು ಬಿದ್ದಿದ್ದು,ವಿದ್ಯುತ್ ಕಂಬವು ಮುರಿದುಬಿದ್ದಿದೆ .
ಭಾನುವಾರ ಸಂಜೆ ಮಳೆ ಸುರಿದ ಬಳಿಕ, ಸೋಮವಾರ ಬೆಳಗಿನ ಜಾವ ಮೂರು ಗಂಟೆಗೆ ಆರಂಭವಾದ ಸಾಮಾನ್ಯ ಮಳೆ ಬೆಳಗಿನ 8.30ರ ತನಕ ಮುಂದುವರಿಯಿತು. ಬಳಿಕ ಮೋಡ ಬಿಸಿಲಿನ ವಾತಾವರಣವಿತ್ತು. ಪ್ರಸ್ತುತ ಸುರಿದ ಮಳೆ ಕೃಷಿಕರಿಗೆ ಮುಂದಿನ 4 ದಿನಗಳ ಮಟ್ಟಿಗೆ ಸಮಾಧಾನ ಕೊಟ್ಟಿದೆ.ದ.ಕ. ಜಿಲ್ಲೆಯ ಬಹುತೇಕ ಕಡೆ ಮಳೆ
ಕನ್ನಡಪ್ರಭ ವಾರ್ತೆ ಮಂಗಳೂರುದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಕಡೆ ಸೋಮವಾರ ಬೆಳಗ್ಗಿನ ಜಾವ ಗುಡುಗು ಸಹಿತ ಉತ್ತಮ ಮಳೆ ಸುರಿದಿದೆ.ಭಾನುವಾರ ರಾತ್ರಿ ಗ್ರಾಮೀಣ ಭಾಗಗಳಲ್ಲಿ ಉತ್ತಮ ಮಳೆಯಾಗಿ ಚಳಿ ಗಾಳಿ ಬೀಸತೊಡಗಿತ್ತು. ಸೋಮವಾರ ಮುಂಜಾನೆ ಜಿಲ್ಲಾದ್ಯಂತ ಮಳೆ ಸುರಿದು ತಣ್ಣನೆಯ ಆಹ್ಲಾದಕರ ವಾತಾವರಣವಿತ್ತು. ಆದರೆ ಬಿಸಿಲೇರುತ್ತಿದ್ದಂತೆ ಮತ್ತೆ ಸೆಕೆ ಆವರಿಸಿತ್ತು.ಮೇ 19ರವರೆಗೆ ಜಿಲ್ಲೆಯಲ್ಲಿ ಮಳೆಯ ಯೆಲ್ಲೋ ಅಲರ್ಟ್ ನೀಡಲಾಗಿದ್ದು, ದ.ಕ.ದ ಹೆಚ್ಚಿನ ಭಾಗಗಳಲ್ಲಿ ಗುಡುಗು ಸಹಿತ ಉತ್ತಮ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಸಮುದ್ರವೂ ಪ್ರಕ್ಷುಬ್ದಗೊಂಡಿದ್ದು, ಅಲೆಗಳ ಅಬ್ಬರ ಕಂಡುಬಂದಿದೆ.
ದ.ಕ ಜಿಲ್ಲೆಯಲ್ಲಿ ಸೋಮವಾರ ಸರಾಸರಿ 33.1 ಡಿಗ್ರಿ ಗರಿಷ್ಠ, 25.2 ಡಿಗ್ರಿ ಸೆ. ಕನಿಷ್ಠ ಉಷ್ಣಾಂಶ ದಾಖಲಾಗಿದೆ...............ತುಂಬೆ ಡ್ಯಾಂ ನೀರು ಮತ್ತಷ್ಟು ಇಳಿಕೆಮಂಗಳೂರು ನಗರಕ್ಕೆ ನೀರು ಪೂರೈಕೆಯಾಗುವ ತುಂಬೆ ಅಣೆಕಟ್ಟಿನ ನೀರಿನ ಮಟ್ಟ ಇನ್ನಷ್ಟು ಇಳಿಕೆಯಾಗಿದ್ದು, ಸೋಮವಾರ 3.68 ಮೀ. ನೀರಿನ ಸಂಗ್ರಹವಿತ್ತು. ಕಳೆದ ವರ್ಷ ಇದೇ ದಿನ 3.73 ಮೀ. ನೀರಿನ ಸಂಗ್ರಹ ದಾಖಲಾಗಿತ್ತು. ಈ ವಾರ ಉತ್ತಮ ಮಳೆಯಾದರೆ ನೀರಿನ ಸಂಗ್ರಹ ಏರಿಕೆಯಾಗುವ ನಿರೀಕ್ಷೆ ಇದೆ.ಈ ನಡುವೆ ಬಿಳಿಯೂರು ಡ್ಯಾಂನಿಂದ ಎಎಂಆರ್ ಡ್ಯಾಂಗೆ ನೀರು ಹರಿಸಲು ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ 2 ಮೀ. ನೀರನ್ನು ಎಎಂಆರ್ ಡ್ಯಾಂಗೆ ಹರಿಸಲಾಗಿದೆ.