ಬಿರುಗಾಳಿ ಹೊಡೆತಕ್ಕೆ ತತ್ತರಿಸಿದ ನೆರಿಯ ಗ್ರಾಮ

KannadaprabhaNewsNetwork |  
Published : Jul 29, 2024, 12:49 AM IST
ಶಾಸಕರ ಭೇಟಿ | Kannada Prabha

ಸಾರಾಂಶ

ನೆರಿಯ ಗ್ರಾಮದ ರಸ್ತೆಯುದ್ದಕ್ಕೂ ಎಲ್ಲೆಲ್ಲೂ ಮರಗಳು ಹಾಗೂ ವಿದ್ಯುತ್ ಕಂಬಗಳು ಮುರಿದುಬಿದ್ದು ಹಲವು ಮೂಲಭೂತ ಸೌಕರ್ಯಗಳಿಂದ ಜನರು ವಂಚಿತರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಬಿರುಗಾಳಿಗೆ ನೆರಿಯ ಗ್ರಾಮ ಅಕ್ಷರಶಃ ನಲುಗಿ ಹೋಗಿದೆ.ಬೆಳ್ತಂಗಡಿ ತಾಲೂಕಿನ ಕೊನೆಯ ಭಾಗದಲ್ಲಿರುವ ನೆರಿಯ ಗ್ರಾಮದಲ್ಲಿ ಈ ಹಿಂದೆ ಈ ರೀತಿಯ ಗಾಳಿ ಬೀಸಿರಲಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ. ಮುಂಜಾನೆ 3ರ ಹೊತ್ತಿಗೆ ಆರಂಭವಾದ ಬಿರುಗಾಳಿ ಸುಮಾರು ಒಂದು ತಾಸು ಕಾಲ ಬೀಸಿದ್ದು ಹಲವು ಅವಾಂತರಗಳನ್ನು ಸೃಷ್ಟಿಸಿ ಅಲ್ಲಿನ ಜನ ಜೀವನ ಅಸ್ತವ್ಯಸ್ತಗೊಳಿಸಿದೆ.

ನೆರಿಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಯಲು, ಪರಪ್ಪು, ಕೋಲೋಡಿ, ಕಾಟಾಜೆ, ಮಾವೂರು, ಜನತಾ ಕಾಲನಿ, ಪಾದೆಗುಡ್ಡೆ, ಅಪ್ಪಿಲ, ಗಂಡಿ ಬಾಗಿಲು ಮೊದಲಾದ ಕಡೆಗಳಲ್ಲಿ ಬೀಸಿದ ಬಿರುಗಾಳಿ ಸಾವಿರಾರು ಅಡಕೆ ರಬ್ಬರ್ ಮರಗಳನ್ನು, ನೂರಾರು ತೋಟಗಳನ್ನು ನೆಲಕುರುಳಿಸಿದ್ದು, ಅಲ್ಲಿನ ಕೃಷಿಕರು ತೀವ್ರ ಕಂಗಾಲಾಗಿದ್ದಾರೆ.ಮಳೆಯ ಜತೆ ಬೀಸಿದ ಬಿರುಗಾಳಿಗೆ 50 ಕ್ಕಿಂತ ಅಧಿಕ ಮನೆಗಳಿಗೆ ಹಾನಿ ಉಂಟಾಗಿ ಮರಗಳು ಮನೆ ಮೇಲೆ ಉರುಳಿ ಬಿದ್ದು ಮನೆಗಳಿಗೆ ಹಾನಿ ಉಂಟಾಗಿದೆ. ಹಲವು ಮನೆಯ ಶೀಟುಗಳು ಹಾರಿ ಹೋಗಿದ್ದು, ಕೆಲವು ಮನೆಗಳ ಗೋಡೆಗಳಿಗೂ ಹಾನಿಯಾಗಿದೆ. ಹಾನಿಗೊಳಗಾದ ಮನೆಗಳ ಮಂದಿಯನ್ನು ಅಕ್ಕಪಕ್ಕದ ಮನೆಗೆ ಸ್ಥಳಾಂತರಿಸಲಾಗಿದೆ.

ಎಲ್ಲೆಲ್ಲೂ ಬಿದ್ದ ಮರ, ವಿದ್ಯುತ್ ಕಂಬ: ನೆರಿಯ ಗ್ರಾಮದ ರಸ್ತೆಯುದ್ದಕ್ಕೂ ಎಲ್ಲೆಲ್ಲೂ ಮರಗಳು ಹಾಗೂ ವಿದ್ಯುತ್ ಕಂಬಗಳು ಮುರಿದುಬಿದ್ದು ಹಲವು ಮೂಲಭೂತ ಸೌಕರ್ಯಗಳಿಂದ ಜನರು ವಂಚಿತರಾಗಿದ್ದಾರೆ. 60ಕ್ಕಿಂತ ಅಧಿಕ ವಿದ್ಯುತ್ ಕಂಬ, ಎರಡು ಪರಿವರ್ತಕಗಳು ನೆಲಕ್ಕುರುಳಿದರೆ ನೂರಾರು ಮರಗಳು ವಿದ್ಯುತ್ ಲೈನ್, ರಸ್ತೆ, ಮನೆಗಳ ಮೇಲೆ ಬಿದ್ದಿವೆ. ಮರಗಳ ತೆರವು ವಿದ್ಯುತ್ ಮರುಜೋಡಣೆ ಮೊದಲಾದ ಕೆಲಸಗಳು ಹಲವು ಇಲಾಖೆಗಳ ವತಿಯಿಂದ ಸ್ಥಳೀಯರ ಸಹಕಾರದಲ್ಲಿ ನಡೆಯುತ್ತಿವೆ. ಸಂಪರ್ಕ ಕಳೆದುಕೊಂಡಿದ್ದ ರಸ್ತೆಗಳ ಮರ ತೆರವು ಕಾರ್ಯ ನಡೆಯುತ್ತಿದೆ. ಮೆಸ್ಕಾಂ, ಅರಣ್ಯ ಇಲಾಖೆಗೂ ಗಾಳಿಯಿಂದ ಹೆಚ್ಚಿನ ನಷ್ಟ ಉಂಟಾಗಿದೆ.ಶಾಸಕ ಭೇಟಿ: ಶಾಸಕ ಹರೀಶ್ ಪೂಂಜ ಶನಿವಾರ ನೆರಿಯಕ್ಕೆ ಭೇಟಿ ನೀಡಿ ಅಲ್ಲಿನ ಮನೆ, ತೋಟಗಳ ಪರಿಸ್ಥಿತಿಯ ಬಗ್ಗೆ ಪರಿಶೀಲನೆ ನಡೆಸಿದರು. ವೈಯಕ್ತಿಕವಾಗಿ ಸಹಕಾರ ನೀಡಿದ ಅವರು ಇಲ್ಲಿನ ಘಟನೆ ಬಗ್ಗೆ ಸರ್ಕಾರದ ಗಮನಕ್ಕೆ ತಂದು ನಷ್ಟ ಅನುಭವಿಸಿದವರಿಗೆ ಪರಿಹಾರ ಒದಗಿಸಲು ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಪಂಚಾಯಿತಿ ಅಧ್ಯಕ್ಷೆ, ವಸಂತಿ ಉಪಾಧ್ಯಕ್ಷೆ ಸುಜಾತ, ಸದಸ್ಯರು ಯಶವಂತ ಗೌಡ ಮತ್ತಿತರರು ಉಪಸ್ಥಿತರಿದ್ದರು.

ಏಕಾಏಕಿ ಏರಿದ ನೀರು: ಶುಕ್ರವಾರ ಮಧ್ಯಾಹ್ನದ ಬಳಿಕ ಮಳೆ ಕಡಿಮೆ ಇದ್ದರೂ ರಾತ್ರಿ 11ರ ಹೊತ್ತಿಗೆ ನೇತ್ರಾವತಿ, ಮೃತ್ಯುಂಜಯ ನದಿ ನೆರಿಯ, ಅಣಿಯೂರು ಹೊಳೆಗಳಲ್ಲಿ ಭಾರಿ ಪ್ರಮಾಣದಲ್ಲಿ ನೀರು ಹರಿದು ಸಾಮಾನ್ಯ ಪ್ರವಾಹದ ಸ್ಥಿತಿ ಉಂಟಾಗಿದೆ. ಇದರಿಂದ ನದಿ ತೀರದ ಹಲವು ಜನರು ಆತಂಕಕ್ಕೊಳಗಾಗಿ ತಮ್ಮ ವಾಸ್ತವ್ಯವನ್ನು ಬದಲಾಯಿಸಿದರು. ಶನಿವಾರ ಬೆಳಗ್ಗೆ ನದಿಗಳ ನೀರು ಇಳಿಕೆ ಕಂಡಿದೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ