ಮಳೆಗಾಲದ ಮೊದಲು ಸೇತುವೆ ಕಾಮಗಾರಿ ಪೂರ್ಣವಾಗದಿದ್ದರೆ ಸಂಚಾರಕ್ಕೆ ಸಂಚಕಾರ

KannadaprabhaNewsNetwork |  
Published : May 04, 2026, 02:45 AM IST
ಸೇತುವೆ ನಿರ್ಮಾಣ | Kannada Prabha

ಸಾರಾಂಶ

ದಿಡುಪೆ-ಪೈಚಾರು ರಾಜ್ಯ ಹೆದ್ದಾರಿಯ ಮುಂಡಾಜೆ- ಕಲ್ಮಂಜ-ಧರ್ಮಸ್ಥಳ ರಸ್ತೆಯ ಪಿಲತ್ತಡ್ಕ, ಒಂಜರೆಬೈಲು ಹಾಗೂ ಕೊತ್ತಳಿಗೆ ಎಂಬ ಮೂರು ಸ್ಥಳಗಳಲ್ಲಿ ಕಿರು ಸೇತುವೆಗಳು 3.75 ಕೋಟಿ ರು.ಗಳ ಅನುದಾನದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ನಿರ್ಮಾಣಗೊಳ್ಳುತ್ತಿವೆ

ಬೆಳ್ತಂಗಡಿ: ಮಳೆಗಾಲ ಆರಂಭವಾಗಲು ಇನ್ನು ಕೆಲವೇ ದಿನಗಳಿದ್ದು ತಾಲೂಕಿನ ಕೆಲವು ಕಡೆ ಮುಖ್ಯರಸ್ತೆಗಳಿಗೆ ನಿರ್ಮಾಣವಾಗುತ್ತಿರುವ ಕಿರು ಸೇತುವೆಗಳ ಕೆಲಸ ಪೂರ್ಣಗೊಳ್ಳಬೇಕಿದೆ.

ದಿಡುಪೆ-ಪೈಚಾರು ರಾಜ್ಯ ಹೆದ್ದಾರಿಯ ಮುಂಡಾಜೆ- ಕಲ್ಮಂಜ-ಧರ್ಮಸ್ಥಳ ರಸ್ತೆಯ ಪಿಲತ್ತಡ್ಕ, ಒಂಜರೆಬೈಲು ಹಾಗೂ ಕೊತ್ತಳಿಗೆ ಎಂಬ ಮೂರು ಸ್ಥಳಗಳಲ್ಲಿ ಕಿರು ಸೇತುವೆಗಳು 3.75 ಕೋಟಿ ರು.ಗಳ ಅನುದಾನದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ನಿರ್ಮಾಣಗೊಳ್ಳುತ್ತಿವೆಫೆಬ್ರವರಿಯಲ್ಲಿ ಇದರ ಕಾಮಗಾರಿ ಆರಂಭವಾಗಿದ್ದು ಇದೀಗ ಕಾಮಗಾರಿ ಪ್ರಗತಿಯಲ್ಲಿದೆ. ಮುಂದಿನ ಒಂದು ತಿಂಗಳೊಳಗೆ ಈ ಕಿರು ಸೇತುವೆಗಳ ಕಾಮಗಾರಿ ಪೂರ್ಣಗೊಳ್ಳದಿದ್ದರೆ ಮಳೆಗಾಲದಲ್ಲಿ ಹೆಚ್ಚಿನ ಸಮಸ್ಯೆ ಉಂಟಾಗಲಿದೆ

ಮುಂಡಾಜೆ-ಕಲ್ಮಂಜ- ಧರ್ಮಸ್ಥಳ ರಸ್ತೆ ಧರ್ಮಸ್ಥಳ, ಕೊಕ್ಕಡ ನಿಡ್ಲೆ, ಮುಂಡಾಜೆ, ಚಾರ್ಮಾಡಿ ಮೊದಲಾದ ಭಾಗಗಳಿಗೆ ತೀರಾ ಸಮೀಪದ ಸಂಪರ್ಕವಾಗಿದೆ. ಸುಮಾರು 6 ಕಿ.ಮೀ‌ ವ್ಯಾಪ್ತಿಯನ್ನು ಕಡಿಮೆಗೊಳಿಸುವ ಈ ರಸ್ತೆಯಲ್ಲಿ ಪ್ರತಿದಿನ ನೂರಾರು ಪ್ರವಾಸಿ ವಾಹನಗಳಲ್ಲದೇ ಸ್ಥಳೀಯವಾಗಿ ಹೆಚ್ಚಿನ ವಾಹನಗಳ ಓಡಾಟವಿದೆ. ಈ ರಸ್ತೆಯ ಆರು ಕಡೆ ಅಪಾಯಕಾರಿ, ಅಗಲ ಕಿರಿದಾದ, ಶಿಥಿಲಾವಸ್ಥೆ ತಲುಪಿರುವ ಕಿರು ಸೇತುವೆಗಳಿದ್ದು ಈಗ ಮೂರು ಕಡೆ ಹೊಸ ಸೇತುವೆಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ.

ಅಂಬಡಬೆಟ್ಟು ಸೇತುವೆ: ಉಜಿರೆಯಿಂದ ನಿಡಿಗಲ್ ಮೂಲಕ ನಡ, ಇಂದಬೆಟ್ಟು, ಕೊಲ್ಲಿ, ಗುರಿಪ್ಪಳ್ಳ, ಪಡ್ಪು ಮೊದಲಾದ ಪ್ರದೇಶಗಳ ಸಾವಿರಾರು ಕುಟುಂಬಗಳಿಗೆ ಸಂಪರ್ಕ ಕಲ್ಪಿಸುವ ಅಂಬಡಬೆಟ್ಟು ಕಿರು ಸೇತುವೆ 2.50 ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದು 15 ದಿನಗಳ ಹಿಂದಷ್ಟೇ ಕಾಮಗಾರಿ ಆರಂಭವಾಗಿದೆ.ಈ ಕಿರು ಸೇತುವೆ ಕಾಮಗಾರಿ ಮಳೆಗಾಲದೊಳಗೆ ಪೂರ್ಣಗೊಳ್ಳದಿದ್ದರೆ ಹಲವಾರು ಅಡಚಣೆಗಳು ಉಂಟಾಗಲಿವೆ.

ಹಳ್ಳದ ನೀರು ಸರಿಯಾಗಿ ಹರಿಯದೆ ಕೃತಕನರೆ ಸೃಷ್ಟಿಯಾಗುವ ಜತೆ ರಸ್ತೆ ಸಂಪರ್ಕವು ಕಡಿತಗೊಳ್ಳಬಹುದು. ಅಲ್ಲದೆ ಸೇತುವೆ ರಚನೆಗಾಗಿ ಅಗೆದು ಹಾಕಲಾಗಿರುವ ರಸ್ತೆಯು, ಕುಸಿದು ಬೀಳಬಹುದು, ಸಂಪರ್ಕ ಕಡಿತಗೊಂಡರೆ ಇಲ್ಲಿನ ಹಲವಾರು ಪ್ರದೇಶಗಳ ಜನರು ಹಲವು ಕಿ.ಮೀ. ದೂರದ ಸುತ್ತು ಬಳಸು ರಸ್ತೆಗೆ ಮೊರೆ ಹೋಗಬೇಕಾದ ಅನಿವಾರ್ಯತೆ ಉಂಟಾಗುತ್ತದೆ.

ನಾಲ್ಕು ಕಿರು ಸೇತುವೆಗಳು ನಿರ್ಮಾಣವಾಗುತ್ತಿರುವ ಪ್ರದೇಶದಲ್ಲಿ ಸಮೀಪದಲ್ಲಿ ಬದಲಿ ರಸ್ತೆ ನಿರ್ಮಿಸಿ ಕೊಡಲಾಗಿದೆ ಜೋರಾದ ಮಳೆ ಬಂದರೆ ಜಾರುವ ಈ ರಸ್ತೆ ಅಪಾಯಕಾರಿ. ಅಲ್ಲದೆ ಹೆಚ್ಚಿನ ಮಳೆ ಉಂಟಾದಲ್ಲಿ ಕುಸಿತಗೊಳ್ಳುವ ಸಾಧ್ಯತೆಯೂ ಇದೆ.

ಬಹು ವರ್ಷದ ಬೇಡಿಕೆ: ಮುಂಡಾಜೆ- ಧರ್ಮಸ್ಥಳ ರಸ್ತೆಯ ಮೂರು ಹಾಗೂ ಅಂಬಡಬೆಟ್ಟು ಎಂಬಲ್ಲಿ ನಿರ್ಮಾಣವಾಗುತ್ತಿರುವ ಕಿರು ಸೇತುವೆಗಳಿಗೆ ಸ್ಥಳೀಯರು ಹಲವಾರು ವರ್ಷಗಳಿಂದ ಬೇಡಿಕೆ ಸಲ್ಲಿಸುತ್ತಾ ಬಂದಿದ್ದರು. ಇದೀಗ ಸೇತುವೆ ನಿರ್ಮಾಣ ಕಾಮಗಾರಿ ಆರಂಭವಾಗಿದೆ. 2024ರ ಮಳೆಗಾಲದಲ್ಲಿ ಈ ಎರಡು ರಸ್ತೆಗಳಲ್ಲಿ ಜನ ವಾಹನ ಸಂಚಾರಕ್ಕೆ ಜಿಲ್ಲಾಧಿಕಾರಿ ನಿಷೇಧವನ್ನು ಹೇರಿದ್ದರು. ಮುಂಡಾಜೆ- ಧರ್ಮಸ್ಥಳ ರಸ್ತೆಯಲ್ಲಿ ಡಿಸಿಯವರ ಆದೇಶ ದಾಖಲೆಗಳಿಗೆ ಮಾತ್ರ ಸೀಮಿತವಾಗಿದ್ದರೆ, ಉಜಿರೆ-ಇಂದಬೆಟ್ಟು ರಸ್ತೆಯಲ್ಲಿ ಘನವಾಹನ ಸಂಚಾರವಿರಲಿಲ್ಲ.ಕೋಟ್1

ಕಲ್ಮಂಜದ ಮೂರು ಕಡೆ ಹಾಗೂ ಅಂಬಡಬೆಟ್ಟಿನಲ್ಲಿ ನಿರ್ಮಾಣವಾಗುತ್ತಿರುವ ಕಿರು ಸೇತುವೆಗಳ ಕಾಮಗಾರಿ ತ್ವರಿತ ಗತಿಯಲ್ಲಿ ನಡೆಯುತ್ತಿದೆ, ಹಾಗೂ ಇದು ಮಳೆಗಾಲ ಆರಂಭದೊಳಗೆ ಪೂರ್ಣಗೊಳ್ಳಲಿದೆ .

ಬಕ್ಕಪ್ಪ ಎಇಇ, ಪಿಡಬ್ಲ್ಯೂಡಿ, ಬೆಳ್ತಂಗಡಿ

ಕೋಟ್ 2

ಕಲ್ಮಂಜ ರಸ್ತೆಗೆ ಆರು ಕಿರು ಸೇತುವೆಗಳ ಅಗತ್ಯವಿದ್ದು ಈಗ ಮೂರು ಕಡೆಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ.ಇದು ಮಳೆಗಾಲದೊಳಗೆ ಪೂರ್ಣಗೊಳ್ಳುವುದು ಅಗತ್ಯವಾಗಿದೆ. ಕಾಮಗಾರಿ ಪೂರ್ಣಗೊಳ್ಳದಿದ್ದರೆ ಸಂಚಾರ ಸಮಸ್ಯೆ ಉಂಟಾಗಲಿದೆ.

ಸತೀಶ್ ಭಟ್ ಸ್ಥಳೀಯ, ಕಲ್ಮಂಜ

ಕೋಟ್ 3

ಅಂಬಡಬೆಟ್ಟು ಎಂಬಲ್ಲಿ ಕಿರು ಸೇತುವೆ ಅತ್ಯಗತ್ಯವಾಗಿತ್ತು.ಈ ಕಿರು ಸೇತುವೆ ನಿರ್ಮಾಣದಿಂದ ಬಹು ವರ್ಷದ ಬೇಡಿಕೆ ಈಡೇರಿದೆ. ಮಳೆಗಾಲದೊಳಗೆ ಕೆಲಸ ಪೂರ್ಣಗೊಳ್ಳುವ ಭರವಸೆ ಸಿಕ್ಕಿದೆ.

ರಾಧಾಕೃಷ್ಣ ವಾಹನ ಸವಾರ ಇಂದಬೆಟ್ಟು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉದ್ಯಮ- ತಂತ್ರಜ್ಞಾನ ಬೆಳವಣಿಗೆಯ ಕೇಂದ್ರವಾಗಿ ಮಂಗಳೂರು
ಅಭಿಮಾನೋತ್ಸವ ಕಾರ್ಯಕ್ರಮದ ಪೋಸ್ಟ‌ರ್ ಬಿಡುಗಡೆ