ಮಲೆಕುಡಿಯ ಸಮುದಾಯದ ಪರವಾಗಿ ಮಾತನಾಡಲು ನನಗೆ ಯಾರ ಅನುಮತಿಯೂ ಬೇಕಾಗಿಲ್ಲ. ಧ್ವನಿ ಇಲ್ಲದವರ ಧ್ವನಿಯಾಗಲು ಜಿಪಿಎ ಕೂಡ ಅಗತ್ಯವಿಲ್ಲ’ ಎಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಬೆಳ್ತಂಗಡಿ ಸಂಚಾಲಕ ಶೇಖರ್ ಲಾಯಿಲ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಬೆಳ್ತಂಗಡಿ: ‘ಮಲೆಕುಡಿಯ ಸಮುದಾಯದ ಪರವಾಗಿ ಮಾತನಾಡಲು ನನಗೆ ಯಾರ ಅನುಮತಿಯೂ ಬೇಕಾಗಿಲ್ಲ. ಧ್ವನಿ ಇಲ್ಲದವರ ಧ್ವನಿಯಾಗಲು ಜಿಪಿಎ ಕೂಡ ಅಗತ್ಯವಿಲ್ಲ’ ಎಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಬೆಳ್ತಂಗಡಿ ಸಂಚಾಲಕ ಶೇಖರ್ ಲಾಯಿಲ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ತಮ್ಮ ಹೋರಾಟ ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ಮುಂದೆಯೂ ಹಾಗೆಯೇ ಮುಂದುವರಿಯಲಿದೆ. ಶೋಷಿತ ಹಾಗೂ ಧ್ವನಿ ಇಲ್ಲದ ಜನರ ಪರವಾಗಿ ಮಾತನಾಡುವುದು ತಮ್ಮ ಸಾಮಾಜಿಕ ಬದ್ಧತೆ ಎಂದು ಅವರು ಹೇಳಿದರು.ಮಲೆಕುಡಿಯರ ಪರ ಹೋರಾಟ ಉಲ್ಲೇಖ: ವಿಠ್ಠಲ ಮಲೆಕುಡಿಯ ಪ್ರಕರಣದಲ್ಲಿ ಪ್ರತಿಭಟನೆ ನಡೆಸಿದ್ದು, ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕುತ್ಲೂರು ಗ್ರಾಮಕ್ಕೆ ಅಂದಿನ ಪಾಲಕ್ಕಾಡ್ ಲೋಕಸಭಾ ಸದಸ್ಯ ಎಂ.ಬಿ. ರಾಜೇಶ್ ಅವರನ್ನು ಕರೆದುಕೊಂಡು ಹೋಗಿ ಅಲ್ಲಿನ ಸಮಸ್ಯೆಗಳನ್ನು ಲೋಕಸಭೆಯಲ್ಲಿ ಪ್ರಸ್ತಾಪಿಸುವಂತೆ ಮಾಡಿರುವುದಾಗಿ ತಿಳಿಸಿದರು.ನೆರಿಯ ಗ್ರಾಮದ ಸುಂದರ ಮಲೆಕುಡಿಯ ಕಾಟಾಜೆ ಅವರ ಮೇಲೆ ಕಳೆ ಕೊಚ್ಚುವ ಯಂತ್ರದಿಂದ ದಾಳಿ ನಡೆದ ಸಂದರ್ಭದಲ್ಲಿ ಅವರ ಕುಟುಂಬದ ಪರವಾಗಿ ನಿರಂತರವಾಗಿ ನಿಂತಿದ್ದಾಗಿ ಹೇಳಿದರು. ನಿಡ್ಲೆ ಗ್ರಾಮದ ಮಲೆಕುಡಿಯ ಸಮುದಾಯಕ್ಕೆ ನೀರಾವರಿ ಸೌಲಭ್ಯ ಒದಗಿಸುವ ಯೋಜನೆಯಲ್ಲಿ ಮಧ್ಯವರ್ತಿಗಳಿಂದ ದುರುಪಯೋಗವಾಗಿದೆ ಎಂಬ ಆರೋಪದ ಪ್ರಕರಣದಲ್ಲಿಯೂ ಅಧಿಕಾರಿಗಳು ಹಾಗೂ ಮಧ್ಯವರ್ತಿಗಳ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದಾಗಿ ಅವರು ತಿಳಿಸಿದರು.
ಶಾಸಕರು ಪ್ರಶ್ನೆಗಳಿಗೆ ಉತ್ತರಿಸಬೇಕು: ನಾವೂರು ಮತ್ತು ಕುತ್ಲೂರು ಗ್ರಾಮಗಳ ವಿದ್ಯುತ್ ಸಂಪರ್ಕಕ್ಕೆ ಅನುಮತಿ ಸಂಬಂಧಿಸಿ ತಮ್ಮ ಸಂಘಟನೆ ನಡೆಸಿದ ಪತ್ರಿಕಾಗೋಷ್ಠಿಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ನೇರವಾಗಿ ಉತ್ತರಿಸದೆ, ತಮ್ಮ ಹಿಂಬಾಲಕರ ಮೂಲಕ ಹೋರಾಟಗಾರರ ತೇಜೋವಧೆಗೆ ಪ್ರಯತ್ನಿಸುತ್ತಿದ್ದಾರೆ ಎಂದು ಶೇಖರ್ ಲಾಯಿಲ ಆರೋಪಿಸಿದರು.‘ಇಂತಹ ಪ್ರಯತ್ನಗಳಿಂದ ಸತ್ಯವನ್ನು ಮರೆಮಾಚಲು ಸಾಧ್ಯವಿಲ್ಲ. ನಮ್ಮ ಪ್ರಶ್ನೆಗಳಿಗೆ ಶಾಸಕರು ಉತ್ತರಿಸಬೇಕು’ ಎಂದು ಅವರು ಹೇಳಿದರು.2019ರಿಂದ 2023ರವರೆಗೆ ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದ್ದ ಸಂದರ್ಭದಲ್ಲಿ ನಾವೂರು ಹಾಗೂ ಕುತ್ಲೂರು ಗ್ರಾಮಗಳ ವಿದ್ಯುತ್ ಸಂಪರ್ಕಕ್ಕೆ ಶಾಸಕರು ಒಂದೇ ಒಂದು ಅರ್ಜಿ ಸಲ್ಲಿಸಿದ್ದಾರೆಯೇ ಎಂಬುದನ್ನು ಬಹಿರಂಗಪಡಿಸಬೇಕು ಎಂದು ಅವರು ಪ್ರಶ್ನಿಸಿದರು.ಪ್ರಸ್ತುತ ರಾಜ್ಯ ಸರ್ಕಾರದ ಮುತುವರ್ಜಿಯಿಂದ ವಿದ್ಯುತ್ ಸಂಪರ್ಕಕ್ಕಾಗಿ ಸಲ್ಲಿಸಲಾದ ಅರ್ಜಿಗಳ ಪೈಕಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ನಾವೂರು ಮತ್ತು ಕುತ್ಲೂರು ಗ್ರಾಮಗಳಿಗೆ ವನ್ಯಜೀವಿ ಮಂಡಳಿಯ ಅನುಮತಿ ದೊರಕಲು ತಮ್ಮ ಸಂಘಟನೆ ಹಾಗೂ ರಕ್ಷಿತ್ ಶಿವರಾಂ ಅವರ ಸತತ ಪ್ರಯತ್ನ ಕಾರಣವಾಗಿದೆ ಎಂದು ಶೇಖರ್ ಲಾಯಿಲ ಹೇಳಿದರು. ಈ ಅನುಮತಿಯನ್ನು ತಮ್ಮ ಸಾಧನೆಯೆಂದು ಬಿಂಬಿಸುವುದು ಸರಿಯಲ್ಲ ಎಂದರು.
ಮಲೆಕುಡಿಯರ ಅಭಿವೃದ್ಧಿಯ ಹಕ್ಕು ಯಾರೊಬ್ಬರ ಸ್ವತ್ತಲ್ಲ: ಹರೀಶ್ ಪೂಂಜಾ ಶಾಸಕರಾದ ಬಳಿಕ ಮಲೆಕುಡಿಯ ಸಮುದಾಯದ ಅಭಿವೃದ್ಧಿಗೆ ಬೇರೆ ಯಾವ ಶಾಸಕರೂ ಮಾಡದಷ್ಟು ಕೆಲಸ ಮಾಡಿದ್ದಾರೆ ಎಂಬ ಹೇಳಿಕೆ ವಾಸ್ತವಕ್ಕೆ ವಿರುದ್ಧವಾಗಿದೆ ಎಂದು ಶೇಖರ್ ಲಾಯಿಲ ಹೇಳಿದರು. ಕೋಲೋಡಿ ಮಲೆಕುಡಿಯ ಕಾಲೋನಿಯಲ್ಲಿ ದಿ. ವಸಂತ ಬಂಗೇರ ಅವರ ಅವಧಿಯಲ್ಲಿ ₹16.50 ಕೋಟಿ ಅನುದಾನದಲ್ಲಿ ರಸ್ತೆ ಕಾಂಕ್ರೀಟಿಕರಣ, ಸೇತುವೆ ಹಾಗೂ ಮೋರಿಗಳ ನಿರ್ಮಾಣ ಸೇರಿದಂತೆ ಅಭಿವೃದ್ಧಿ ಕಾಮಗಾರಿಗಳು ನಡೆದಿದ್ದು, 400ಕ್ಕೂ ಹೆಚ್ಚು ವಿದ್ಯುತ್ ಕಂಬಗಳ ಮೂಲಕ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿತ್ತು ಎಂದು ಅವರು ಹೇಳಿದರು.
ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಮಲೆಕುಡಿಯ ಸಮುದಾಯಕ್ಕೆ ಅಗತ್ಯವಿಲ್ಲ ಎಂದು ಶಾಸಕರ ಹಿಂಬಾಲಕರು ಹೇಳಲು ಯಾವುದೇ ನೈತಿಕ ಹಕ್ಕಿಲ್ಲ ಎಂದು ಶೇಖರ್ ಲಾಯಿಲ ಹೇಳಿದರು.ಪತ್ರಿಕಾ ಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಜಯಾನಂದ ಪಿಲಿಕಲ, ನವೀನ್ ಪುಲಿತ್ತಡಿ ನಾವೂರು, ಲೋಕೇಶ್ ಕುದ್ಕೊಳಿ ನಡ, ಅವಿನಾಶ್ ನಾವೂರು, ಹರೀಶ್ ಎಳನೀರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.