ಸಂಘಟನೆಗಳು ಸಭೆ ಸಮಾರಂಭ ಮತ್ತು ಸನ್ಮಾನಗಳಿಗೆ ಮಾತ್ರ ಸೀಮಿತವಾಗದೇ ಸಮಾಜದ ಜಟೀಲ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಬೇಕು ಎಂದು ನಾಗನೂರು ರುದ್ರಾಕ್ಷಿ ಮಠದ ಪೀಠಾಧಿಕಾರಿ ಡಾ.ಅಲ್ಲಮಪ್ರಭು ಸ್ವಾಮೀಜಿ ನುಡಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಸಂಘಟನೆಗಳು ಸಭೆ ಸಮಾರಂಭ ಮತ್ತು ಸನ್ಮಾನಗಳಿಗೆ ಮಾತ್ರ ಸೀಮಿತವಾಗದೇ ಸಮಾಜದ ಜಟೀಲ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಬೇಕು ಎಂದು ನಾಗನೂರು ರುದ್ರಾಕ್ಷಿ ಮಠದ ಪೀಠಾಧಿಕಾರಿ ಡಾ.ಅಲ್ಲಮಪ್ರಭು ಸ್ವಾಮೀಜಿ ನುಡಿದರು.

ನಗರದ ಆರ್‌.ಎನ್‌.ಶೆಟ್ಟಿ ಪಾಲಿಟೆಕ್ನಿಕ್‌ನಲ್ಲಿ ಗುರುವಾರ ಕರ್ನಾಟಕ ಜರ್ನಲಿಸ್ಟ್ ಯೂನಿಯನ್‌ನ ಸಭೆಯಲ್ಲಿ ಟ್ರಸ್ಟ್‌ನ ಗೌರವಾಧ್ಯ ಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ಸಂಘಟನೆಗಳಲ್ಲಿ ಸಮಾಜದ ಸಮಸ್ಯೆಗಳ ಕುರಿತು ಚಿಂತನೆ ನಡೆಯಬೇಕು, ನಕಾರಾತ್ಮಕ ವಿಚಾರಗಳನ್ನು ಬದಿಗಿಟ್ಟು ಸಕಾರಾತ್ಮಕವಾಗಿ ಸ್ಪಂದನೆಯಾಗಬೇಕು ಎಂದು ತಿಳಿಸಿದರು.ಹಿರಿಯ ಪತ್ರಕರ್ತ ಸುರೇಶ್ ಶಾನುಭೋಗ ಸಭೆ ಉದ್ಘಾಟಿಸಿ ಮಾತನಾಡಿ, ಡೋಲಾಯಮಾನ ಸ್ಥಿತಿಯಲ್ಲಿ ಪತ್ರಿಕಾರಂಗ ಇರುವಂತಹ ಈ ಘಟ್ಟದಲ್ಲಿ ಇನ್ನಷ್ಟು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕಿದೆ ಎಂದರು. ಹಿರಿಯ ಪತ್ರಕರ್ತ ಎಲ್.ಎಸ್.ಶಾಸ್ತ್ರಿ ಮಾತನಾಡಿ, ದಶಕಗಳ ಕಾಲದಿಂದ ನಡೆದು ಬಂದ ಸಂಘದ ಅತ್ಯುತ್ತಮ ಕಾರ್ಯವನ್ನು ಶ್ಲಾಘಿಸಿದರು. ಕನ್ನಡಪ್ರಭ ಬೆಳಗಾವಿ ಆವೃತ್ತಿಯ ಸ್ಥಾನಿಕ ಸಂಪಾದಕ ಬ್ರಹ್ಮಾನಂದ ಹಡಗಲಿ ಮಾತನಾಡಿ, ಗ್ರಾಮೀಣ ಭಾಗದ ಪತ್ರಕರ್ತರಿಗಾಗಿ ಟ್ರಸ್ಟ್ ಮಾಡುತ್ತಿರುವ ಕಾರ್ಯ ಶ್ಲಾಘನೀಯ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಒಳ್ಳೆಯ ಕಾರ್ಯಗಳನ್ನು ಮಾಡುವ ಮೂಲಕ ಸಂಘ ಬೆಳೆಯಲಿ ಎಂದು ಶುಭ ಹಾರೈಸಿದರು.ಇಂಡಿಯನ್ ಎಕ್ಸ್‌ಪ್ರೆಸ್‌ ಅಸೋಸಿಯೇಟ್‌ ಎಡಿಟರ್ ನೌಶಾದ ಬಿಜಾಪೂರೆ ಮಾತನಾಡಿ, ಗ್ರಾಮೀಣ ಪತ್ರಕರ್ತರಿಗಾಗಿ ಟ್ರಸ್ಟ್ ಇನ್ನು ಹೆಚ್ಚಿನ ಕಾರ್ಯ ನಿರ್ವಹಿಸಲಿ ಎಂದು ಸಲಹೆ ನೀಡಿದರು.ಟ್ರಸ್ಟ್ ಕಾನೂನು ಸಲಹೆಗಾರ ಬಸವರಾಜ ರೊಟ್ಟಿ ಮಾತನಾಡಿ, ಸ್ವಂತದ ಬೇಡಿಕೆಗಳಿಗಾಗಿ ಹುಟ್ಟಿದ ಸಂಘಟನೆ ಇದಲ್ಲ, ಕಷ್ಟದಲ್ಲಿರುವ ಪತ್ರಕರ್ತರಿಗಾಗಿ ಹುಟ್ಟಿಕೊಂಡ ಸಂಘಟನೆಯ ಕಾರ್ಯ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಟ್ರಸ್ಟ್ ಅಧ್ಯಕ್ಷ ಮುರುಗೇಶ ಶಿವಪೂಜಿ ಅಧ್ಯಕ್ಷತೆಯಲ್ಲಿ ಸಭೆ ನಡೆದು ಟ್ರಸ್ಟ್‌ಗೆ 10ನೇ ಟ್ರಸ್ಟಿಯಾಗಿ ಗದಗದ ಶಂಕರ್ ಕುದುರಿಮೋತಿ ಅವರನ್ನು ನೇಮಕ ಮಾಡಿಕೊಳ್ಳಲಾಯಿತು.ಟ್ರಸ್ಟ್‌ಗೆ ನೂತನ ಕಾರ್ಯದರ್ಶಿಯಾಗಿ ಮಂಗಳೂರಿನ ಸುದೇಶ್ ಕುಮಾರ್ ಮತ್ತು ಉಪಾಧ್ಯಕ್ಷರನ್ನಾಗಿ ಅಂಕೋಲಾದ ಮಂಜುನಾಥ ನಾಯಕ್ ಆಯ್ಕೆ ಮಾಡಲಾಯಿತು.ಟ್ರಸ್ಟಿ ಡಾ.ರಾಜೇಂದ್ರ ಪವಾರ್ ಸ್ವಾಗತಿಸಿದರು. ಸಂಪಾದಕರ ಸಂಘದ ಉಪಾಧ್ಯಕ್ಷ ಹೀರೋಜಿ ಮಾವರ್ಕರ್, ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್ ಮುಚ್ಚಳಂಬಿ, ಲೋಕದರ್ಶನದ ಸಹಾಯಕ ಸಂಪಾದಕಿ ಜಯಲಕ್ಷ್ಮೀ ದೇಸಾಯಿ, ಸಂಘದ ರಾಜ್ಯ ಕಾರ್ಯದರ್ಶಿ ಆರ್.ಶರಣಪ್ಪ ಗುಮಗೇರಾ, ಟ್ರಸ್ಟಿಗಳಾದ ಎ.ಬಿ.ಧಾರವಾಡಕರ್, ವಸಂತ ಹೊಸಮನಿ, ಬಸವರಾಜ ಪುಟ್ಟಿ, ಕಲ್ಬುರ್ಗಿಯ ಆನಂದ ಮಣ್ಣೂರ್ ಉಪಸ್ಥಿತರಿದ್ದರು.ಸಾಮಾಜಿಕ ಜಾಲತಾಣಗಳ ವೇಗದ ಬೆಳವಣಿಗೆಗಳು ಲಕ್ಷಾಂತರ ಹಿಂಬಾಲಕರನ್ನು ಗಳಿಸಿಕೊಂಡು ಮುನ್ನುಗ್ಗುತ್ತಿರುವುದನ್ನು ಮಾಧ್ಯಮ ಕ್ಷೇತ್ರ ಗಂಭೀರವಾಗಿ ಪರಿಗಣಿಸುವಂತ ವಾತಾವರಣ ನಿರ್ಮಾಣವಾಗಿದೆ. ಮುದ್ರಣ ಮಾಧ್ಯಮ ಕೂಡ ಅದೇ ನಿಟ್ಟಿನಲ್ಲಿ ಕಾರ್ಯ ಮಾಡಬೇಕಿದೆ.

-ಡಾ.ಅಲ್ಲಮಪ್ರಭು ಸ್ವಾಮೀಜಿ, ನಾಗನೂರು ರುದ್ರಾಕ್ಷಿ ಮಠ.