ಘಟನೆ ಖಂಡಿಸಿ ಬಸ್ ರಸ್ತೆಗಿಳಿಸದೇ ಪ್ರತಿಭಟಿಸಿದ ಚಾಲಕರು
ಕನ್ನಡಪ್ರಭ ವಾರ್ತೆ ಬೇಲೂರುಕೆಎಸ್ ಆರ್ ಟಿ ಸಿ ಡಿಪೋ ವ್ಯವಸ್ಥಾಪಕರ ಕಿರುಕುಳದಿಂದ ಬೇಸತ್ತು ವಿಷ ಸೇವಿಸಿ ಆತ್ಮಹತ್ಯೆಗೆ ಬಸ್ ಚಾಲಕ ಯತ್ನಿಸಿದ್ದು, ಇಲ್ಲಿನ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕಳಿಸಿಕೊಟ್ಟ ಘಟನೆ ಸೋಮವಾರ ನಡೆದಿದೆ.
ಬೇಲೂರು ಪ್ರಾದೇಶಿಕ ಕೆಎಸ್ ಆರ್ ಟಿ ಸಿ ಡಿಪೋದಲ್ಲಿ ಬಸ್ ಚಾಲಕ ಹಾಗೂ ನಿರ್ವಾಹಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕೋಟಿಗನಹಳ್ಳಿ ಗ್ರಾಮದ ಹರೀಶ್ ಸೋಮವಾರ ಮುಂಜಾನೆ ಕೆಲಸಕ್ಕೆ ಆಗಮಿಸಿದ ವೇಳೆ ಡಿಪೋ ವ್ಯವಸ್ಥಾಪಕಿ ಶಹಜೀಯಾಭಾನು ಹಲವಾರು ದಿನಗಳಿಂದ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಡಿಪೋದಲ್ಲಿರುವ ವಿಶ್ರಾಂತಿ ಕೊಠಡಿಯಲ್ಲಿ ವಿಷ ಸೇವಿಸಿದ್ದರು. ಕೊಠಡಿಯಲ್ಲಿ ಒದ್ದಾಡುತ್ತಿದ್ದ ಇವರನ್ನು ಚಾಲಕರು ಹಾಗು ಸಿಬ್ಬಂದಿ ಕೂಡಲೇ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ಕೊಡಿಸಿ, ನಂತರ ಹೆಚ್ಚಿನ ಚಿಕಿತ್ಸೆಗೆ ಹಾಸನ ಜಿಲ್ಲಾಸ್ಪತ್ರೆಗೆ ರವಾನಿಸಲಾಯಿತು.ಡಿಪೋ ವ್ಯವಸ್ಥಾಪಕಿಯ ವರ್ತನೆ ವಿರುದ್ಧ ಬಸ್ ಗಳನ್ನು ಹೊರ ತೆಗೆಯದೆ ಚಾಲಕರು ಪ್ರತಿಭಟನೆ ನಡೆಸಿದರು.
ಶಹಜೀಯಾ ಭಾನು ಬೇಲೂರು ಡಿಪೋಗೆ ವ್ಯವಸ್ಥಾಪಕರಾಗಿ ಬಂದ ನಂತರ ಚಾಲಕ, ನಿರ್ವಾಹಕರ ಜೊತೆ ಸರಿಯಾಗಿ ಸ್ಪಂದಿಸದೆ ಉಡಾಫೆಯಿಂದ ವರ್ತಿಸುತ್ತಿದ್ದರು. ತಮ್ಮ ಎದುರು ನಿಂತು ಮಾತಾಡುವವರನ್ನು ಕೆಲಸದಿಂದ ವಜಾ ಮಾಡುತ್ತಿದ್ದರು. ಅಲ್ಲದೆ ತಮಗೆ ಇಷ್ಟ ಬಂದ ರೂಟ್ ಗೆ ಕಳಿಸಿಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರು. ಇದರಿಂದಾಗಿ ನಮ್ಮ ಜೊತೆಗಾರ ವಿಷ ಕುಡಿಯುವ ಪರಿಸ್ಥಿತಿ ಬಂದಿದ್ದು ಕೂಡಲೆ ಶಹಜೀಯಾ ಭಾನು ಅವರನ್ನು ಇಲ್ಲಿಂದ ಬೇರೆಡೆಗೆ ಸ್ಥಳಾಂತರಿಸುವರೆಗೂ ನಾವು ಕೆಲಸ ಮಾಡುವುದಿಲ್ಲ ಎಂದು ಚಾಲಕರು ಪಟ್ಟು ಹಿಡಿದರು.
ಶಾಸಕ ಎಚ್. ಕೆ. ಸುರೇಶ್ ಚಾಲಕ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ವಿಷಯ ತಿಳಿದು, ತಕ್ಷಣ ಆಸ್ಪತ್ರೆಗೆ ಆಗಮಿಸಿ ಪ್ರಥಮ ಚಿಕಿತ್ಸೆ ನೀಡಿ ಜಿಲ್ಲಾಸ್ಪತ್ರೆಗೆ ಕಳಿಸಿದ ನಂತರ ಮಾತನಾಡಿ, ಇಲ್ಲಿನ ಬೇಲೂರು ಡಿಪೋ ವ್ಯವಸ್ಥಾಪಕಿ ಹಾಗೂ ಡಿಪೋ ವಿಭಾಗೀಯ ನಿಯಂತ್ರಣಾಧಿಕಾರಿ ಜಗದೀಶ್ ಅವರ ಕಿರುಕುಳದಿಂದ ಚಾಲಕ ಹಾಗು ನಿರ್ವಾಹಕರು ಕೆಲಸ ಮಾಡದ ಸ್ಥಿತಿ ನಿರ್ಮಾಣವಾಗಿದೆ. ಪ್ರತಿನಿತ್ಯ ಕೆಲಸಗಾರರಿಗೆ ತೊಂದರೆ ನೀಡುತ್ತಿದ್ದು, ನಾನೂ ಸಹ ಇವರ ವಿರುದ್ಧ ಕ್ರಮ ಕೈಗೊಂಡು ಅಮಾನತು ಕೂಡ ಮಾಡಿಸಿದ್ದೆ. ಆದರೂ ಇವರ ದೌರ್ಜನ್ಯ ನಿಂತಿಲ್ಲ. ಇಂದು ಇವರ ದೌರ್ಜನ್ಯಕ್ಕೆ ಒಬ್ಬ ಚಾಲಕ ವಿಷ ಕುಡಿಯುವ ಪರಿಸ್ಥಿತಿ ನಿರ್ಮಾಣವಾಗಿದ್ದು ಇದಕ್ಕೆ ಇಬ್ಬರು ಅಧಿಕಾರಿಗಳೇ ನೇರ ಹೊಣೆ ಹೊರಬೇಕು ಎಂದರು.ಚಾಲಕ ಹರೀಶ್ ಅವರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಪ್ರಾರ್ಥಿಸೋಣ. ಎಲ್ಲ ರೀತಿಯ ಸಹಕಾರ ಅವರ ಕುಟುಂಬಕ್ಕೆ ನೀಡುವುದಾಗಿ ಭರವಸೆ ನೀಡಿದ ಶಾಸಕರು, ಕೂಡಲೇ ಇಬ್ಬರು ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಂಡು ಅಮಾನತು ಗೊಳಿಸುವಂತೆ ಮಾನ್ಯ ಸಾರಿಗೆ ಸಚಿವರಿಗೆ ದೂರವಾಣಿ ಮೂಲಕ ಮನವಿ ಮಾಡಿದರು.