ಮಕ್ಕಳಿಗೆ ಗುಲಾಬಿ ಹೂವು ನೀಡಿ ಸ್ವಾಗತ ನೀಡಿದ ಬೇಲೂರು ಶಾಸಕ ಎಚ್. ಕೆ ಸುರೇಶ್

KannadaprabhaNewsNetwork |  
Published : Jun 01, 2025, 01:42 AM IST
31ಎಚ್ಎಸ್ಎನ್17 : ಹಳೇಬೀಡಿನ ಕೆ.ಪಿ.ಎಸ್ ಶಾಲಾ ಆವರಣದಲ್ಲಿ ಮಕ್ಕಳ ದಾಖಲಾತಿ ಹಾಗೂ ಗುಲಾಬಿಹೂವು ಮೂಲಕ ಸ್ವಾಗತದ ಕಾರ್ಯಕ್ರಮವನ್ನ ಉದ್ಘಾಟಿಸಿ ಬೇಲೂರು ಕ್ಷೇತ್ರ ಶಾಸಕ ಹೆಚ್.ಕೆ. ಸುರೇಶ್, ಬಿ.ಇ.ಒ.ರಾಜೇಗೌಡ, ಸೋಮಶೇಖರ್, ಮುಳ್ಳಯ್ಯ,  ಕಲಾವತಿ. | Kannada Prabha

ಸಾರಾಂಶ

ಹಳೆಬೀಡು ಕೆಪಿಎಸ್ ಶಾಲೆಯಲ್ಲಿ ಅತಿ ಹೆಚ್ಚಿನ ವಿದ್ಯಾರ್ಥಿಗಳು ಓದುತ್ತಿರುವುದು ಸಂತೋಷದ ವಿಚಾರ. ಇಡೀ ಹಾಸನ ಜಿಲ್ಲೆಯಲ್ಲಿ ದೊಡ್ಡ ಆವರಣ ಹೊಂದಿರುವುದು ಹಳೆಬೀಡಿನ ಸರ್ಕಾರಿ ಶಾಲೆಯಾಗಿದೆ.

ಕನ್ನಡಪ್ರಭ ವಾರ್ತೆ ಹಳೇಬೀಡು

2025- 26ನೇ ಸಾಲಿನ ದಾಖಲಾತಿ ಪ್ರಾರಂಭದ ಉತ್ಸುಕತೆಯನ್ನು ಕೊನೆಯವರೆಗೂ ಶಿಕ್ಷಕರು ಉಳಿಸಿಕೊಂಡು ಹೋಗಬೇಕು. ಶಾಲೆಯ ಅಭಿವೃದ್ಧಿ ಮತ್ತು ದಾಖಲಾತಿ ಬಗ್ಗೆ ಹೆಚ್ಚು ಗಮನ ನೀಡಬೇಕೆಂದು ಬೇಲೂರು ಕ್ಷೇತ್ರ ಶಾಸಕ ಎಚ್.ಕೆ. ಸುರೇಶ್ ತಿಳಿಸಿದರು.

ಹಳೆಬೀಡಿನ ಕೆ.ಪಿ.ಎಸ್ ಶಾಲಾ ಆವರಣದಲ್ಲಿ ಮಕ್ಕಳ ದಾಖಲಾತಿ ಹಾಗೂ ಪ್ರಸಕ್ತ ಸಾಲಿನ ವಿದ್ಯಾರ್ಥಿಗಳಿಗೆ ಗುಲಾಬಿ ಹೂ ನೀಡುವ ಮೂಲಕ ಸ್ವಾಗತದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಅತ್ಯಂತ ಪವಿತ್ರವಾದ ಹುದ್ದೆ ಎಂದರೆ ಶಿಕ್ಷಕರ ಹುದ್ದೆ. ಶಿಕ್ಷಕರನ್ನು ಪ್ರತಿಯೊಬ್ಬರೂ ಗೌರವದಿಂದ ಕಾಣುತ್ತಾರೆ. ಹಳೆಬೀಡು ಕೆಪಿಎಸ್ ಶಾಲೆಯಲ್ಲಿ ಅತಿ ಹೆಚ್ಚಿನ ವಿದ್ಯಾರ್ಥಿಗಳು ಓದುತ್ತಿರುವುದು ಸಂತೋಷದ ವಿಚಾರ. ಇಡೀ ಹಾಸನ ಜಿಲ್ಲೆಯಲ್ಲಿ ದೊಡ್ಡ ಆವರಣ ಹೊಂದಿರುವುದು ಹಳೆಬೀಡಿನ ಸರ್ಕಾರಿ ಶಾಲೆಯಾಗಿದೆ. ನನ್ನ ಅವಧಿಯಲ್ಲಿ ನೂತನವಾಗಿ ಶಾಲೆಯಲ್ಲಿ ಎರಡು ಕೊಠಡಿಗಳ ನಿರ್ಮಾಣ ಕೆಲಸ ಪ್ರಾರಂಭವಾಗಿದೆ. ಶೀಘ್ರದಲ್ಲಿ ಕೆಲಸ ಮುಗಿಸಿ ಮಕ್ಕಳಿಗೆ ನೂತನ ಕೊಠಡಿ ದೊರೆಯುತ್ತದೆ. ಜೊತೆಗೆ ಇಲ್ಲಿನ ಶಾಲಾ ಅಭಿವೃದ್ಧಿ ಸಮಿತಿ ಬೇಡಿಕೆ, ಶಾಲೆಯ ಸುತ್ತ ಕಾಂಪೌಂಡ್, ಉತ್ತಮ ರಸ್ತೆ ನಿರ್ಮಿಸಬೇಕೆಂಬುದಾಗಿದ್ದು, ಅದು ಕೂಡ ಶೀಘ್ರದಲ್ಲಿ ಪ್ರಾರಂಭವಾಗಲಿದೆ. ಇಂದಿನ ಸರ್ಕಾರದಲ್ಲಿ ಶೇ.೧೦೦ರಷ್ಟು ಅನುದಾನದಲ್ಲಿ ನಮಗೆ ಶೇ.೧೦ರಷ್ಟು ಅನುದಾನ ಸಿಗುವುದೇ ಕಷ್ಟಕರವಾಗಿದೆ. ಅದರಲ್ಲೂ ಸಹ ಆ ಕೆಲಸವನ್ನು ಶ್ರದ್ಧೆಯಿಂದ ಮಾಡುವುದು ನಮ್ಮ ಕರ್ತವ್ಯ. ಬಸ್ತಿಹಳ್ಳಿಯ ಶಾಲೆಯ ವಿಚಾರದ ಬಗ್ಗೆ ಗ್ರಾಮದ ಜನತೆ ಸಭೆ ಸೇರಿ ತಿಳಿಸಿದರೆ ಮುಂದಿನ ದಿನಗಳಲ್ಲಿ ಹಳೆಬೀಡು- ಬಸ್ತಿಹಳ್ಳಿ ಎಂಬ ನಾಮಫಲಕದೊಂದಿಗೆ ಕೆ.ಪಿ.ಎಸ್ ಶಾಲೆಯ ಜೊತೆಯಲ್ಲಿ ಸೇರಿಸಿ, ಪ್ರತ್ಯೇಕ ಕನ್ನಡ ಮಾಧ್ಯಮ ಮಾಡಲಾಗುವುದು (ನಿಮ್ಮ ಸಹಕಾರ ಮೇರೆಗೆ). ಇದರ ಬಗ್ಗೆ ಕಾಲೇಜು ಅಭಿವೃದ್ಧಿ ಅಧ್ಯಕ್ಷ ಸೋಮಣ್ಣ ಗ್ರಾಮಸ್ಥರನ್ನು ಸೇರಿಸಿ ಮಾತುಕತೆ ನಡೆಸಬೇಕೆಂದು ತಿಳಿಸಿದರು.

ಬೇಲೂರು ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಗೌಡ ಮಾತನಾಡಿ, ಹಳೆಬೀಡಿನ ಕೆಪಿಎಸ್ ಶಾಲೆ ತಾಲೂಕಿಗೆ ಹೆಚ್ಚು ವಿದ್ಯಾರ್ಥಿಗಳು ಓದುವ ದೊಡ್ಡ ಶಾಲೆಯಾಗಿದೆ. ಈ ಶಾಲೆಯ ಸುತ್ತ ಕಾಂಪೌಂಡ್‌ ನಿರ್ಮಾಣದ ಭರವಸೆಯನ್ನು ಶಾಸಕರು ನೀಡಿದ್ದಾರೆ. ಇದರಿಂದ ಶಾಲೆಯ ಮಕ್ಕಳಿಗೆ ಅನುಕೂಲವಾಗುತ್ತದೆ. ಈ ಶಾಲೆಯು ಸಿಸಿ ಕ್ಯಾಮೆರಾ, ನೂತನ ಕೊಠಡಿ ಹೊಂದಿದೆ. ಈ ಬಾರಿ ೨೫- ೨೬ ನೇ ಸಾಲಿನಲ್ಲಿ ಎಲ್. ಕೆ .ಜಿ ಮತ್ತು ಯು.ಕೆ.ಜಿಗೆ ೮೦ ಮಕ್ಕಳು ನೂತನವಾಗಿ ದಾಖಲಾತಿಯಾಗಿದ್ದಾರೆ. ಈ ಶಾಲೆ ತಾಲೂಕಿಗೆ ಸಣ್ಣ ವಿಶ್ವವಿದ್ಯಾಲಯಯಾಗಿದೆ ಎಂದು ತಿಳಿಸಿದರು.

ಗ್ರಾಮ ಪಂಚಾಯತ್ ಅಧ್ಯಕ್ಷ ಮಧು, ಶಾಲಾ ಅಭಿವೃದ್ಧಿ ಅಧ್ಯಕ್ಷ ಸೋಮಶೇಖರ್, ಬಿಜೆಪಿ ಮುಖಂಡ ಪರಮೇಶ್, ಈಶ್ವರ್, ರಂಜಿತ್, ಪ್ರಸನ್ನ ಹಾಗೂ ಉಪಪ್ರಾಂಶುಪಾಲ ಮುಳ್ಳಯ್ಯ, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಕಲಾವತಿ, ಸಹ ಶಿಕ್ಷಕರು ಹಾಜರಿದ್ದರು ಇವರೊಂದಿಗೆ ಮಕ್ಕಳು, ಪೋಷಕರು ಹಾಜರಾಗಿದ್ದರು.

PREV

Recommended Stories

ಹಿಂದೂ ಮಹಾಗಣಪತಿ ಮೂರ್ತಿಯ ವಿಸರ್ಜನೆ
ಪ್ಲಾನಿಂಗ್‌ ಆ್ಯಂಡ್ ಆರ್ಕಿಟೆಕ್ಚರ್‌ ಸ್ಕೂಲ್‌ ಆರಂಭಕ್ಕೆ ಸಿದ್ಧತೆ: ಡಿಕೆಶಿ