ಗೋವಾದಲ್ಲಿ ಅಧ್ಯಯನ ಪ್ರವಾಸಕ್ಕೆ ಹೊರಟ ಬೇಲೂರು ಪುರಸಭಾ ಸದಸ್ಯರು

KannadaprabhaNewsNetwork |  
Published : Aug 15, 2026, 03:00 AM IST
12ಎಚ್ಎಸ್ಎನ್14 : ಬೇಲೂರು  ಪುರಸಭೆ   | Kannada Prabha

ಸಾರಾಂಶ

ಅಧ್ಯಯನ ಪ್ರವಾಸಕ್ಕೆ ಬಿಡುಗಡೆಯಾದ ₹ 10 ಲಕ್ಷದ ಜತೆಗೆ ಸಾರ್ವಜನಿಕರಿಂದ ತೆರಿಗೆ ರೂಪದಲ್ಲಿ ಸಂಗ್ರಹಿಸಲಾದ ಸುಮಾರು ₹ 13 ಲಕ್ಷ ಸೇರಿದಂತೆ ಒಟ್ಟು ₹ 25 ಲಕ್ಷದಷ್ಟು ಹಣವನ್ನು ಪ್ರವಾಸಕ್ಕೆ ಬಳಸಲು ಉದ್ದೇಶಿಸಲಾಗಿದೆ ಎಂದು ಆರೋಪಿಸಲಾಗಿದೆ. ಆ.17, 18 ಮತ್ತು 19ರಂದು ಮೂರು ದಿನಗಳ ಕಾಲ ಗೋವಾ ಪ್ರವಾಸಕ್ಕೆ ಸಿದ್ಧತೆ ನಡೆಸಲಾಗಿದೆ ಎನ್ನಲಾಗಿದೆ. ಅವಧಿಯೇ ಮುಗಿಯುವ ಹಂತದಲ್ಲಿ ಅಧ್ಯಯನ ಪ್ರವಾಸದಿಂದ ಏನು ಪ್ರಯೋಜನ ಎಂಬ ಪ್ರಶ್ನೆಯನ್ನು ಕೆಲ ಸದಸ್ಯರು ಎತ್ತಿದ್ದು, ಕೂಡಲೇ ಪ್ರವಾಸವನ್ನು ಸ್ಥಗಿತಗೊಳಿಸುವಂತೆ ಪುರಸಭಾ ಸದಸ್ಯರಾದ ಜಿ. ಶಾಂತಕುಮಾರ್‌, ಬಿ.ಗಿರೀಶ್, ಭರತ್ ಕುಮಾರ್, ಸಭಾಕೌಸರ್‌, ಪರ್ವಿಸ್ ಹಾಗೂ ಫಯಾಜ್ ಅವರು ಈ ಕುರಿತು ಪುರಸಭೆ ಮುಖ್ಯಾಧಿಕಾರಿಗಳಿಗೆ ಲಿಖಿತ ದೂರು ಸಲ್ಲಿಸಿ, ಪ್ರವಾಸವನ್ನು ತಡೆಹಿಡಿಯುವಂತೆ ಮನವಿ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೇಲೂರು ಪಟ್ಟಣದ ಪುರಸಭಾ ಸದಸ್ಯರ ಅವಧಿ ಮುಕ್ತಾಯಗೊಳ್ಳಲು ಕೇವಲ ಒಂದು ತಿಂಗಳು ಇರುವಾಗ ಅಧ್ಯಯನ ಪ್ರವಾಸದ ನೆಪದಲ್ಲಿ 25 ಲಕ್ಷ ರು. ವೆಚ್ಚದಲ್ಲಿ ಮೂರು ದಿನಗಳ ಗೋವಾ ಅಧ್ಯಯನ ಪ್ರವಾಸ ಕೈಗೊಳ್ಳಲು ಮುಂದಾಗಿರುವುದು ಸಾರ್ವಜನಿಕ ವಲಯದಲ್ಲಿ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕುವಂತೆ ಮಾಡಿದೆ. ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ 2025ರ ಮಾ. 18ರಂದು ಅನುಮೋದನೆಯಾದ ಐಇಸಿ ಮತ್ತು ಸಾಮರ್ಥ್ಯಾಭಿವೃದ್ಧಿ ಘಟಕದಡಿ ರೂಪಿಸಲಾಗುವ ಕ್ರಿಯಾ ಯೋಜನೆ ಕುರಿತು ಸದಸ್ಯರಿಗೆ ತಿಳಿವಳಿಕೆ ಮೂಡಿಸುವ ಉದ್ದೇಶದಿಂದ ಅಧ್ಯಯನ ಪ್ರವಾಸಕ್ಕೆ ₹ 10 ಲಕ್ಷ ಅನುದಾನ ಬಿಡುಗಡೆಯಾಗಿತ್ತು. ಆದರೆ, ಅನುದಾನ ಬಿಡುಗಡೆಯಾಗಿ ಸುಮಾರು 17 ತಿಂಗಳ ಬಳಿಕ, ಸದಸ್ಯರ ಅಧಿಕಾರಾವಧಿ ಮುಗಿಯಲು ಒಂದು ತಿಂಗಳು ಇರುವಾಗ ಪ್ರವಾಸ ಆಯೋಜಿಸಿರುವುದು ಹಲವು ಸದಸ್ಯರು ಹಾಗೂ ಸಾರ್ವಜನಿಕರ ಅಸಹನೆಗೆ ಕಾರಣವಾಗಿದೆ. ಅಧ್ಯಯನ ಪ್ರವಾಸಕ್ಕೆ ಬಿಡುಗಡೆಯಾದ ₹ 10 ಲಕ್ಷದ ಜತೆಗೆ ಸಾರ್ವಜನಿಕರಿಂದ ತೆರಿಗೆ ರೂಪದಲ್ಲಿ ಸಂಗ್ರಹಿಸಲಾದ ಸುಮಾರು ₹ 13 ಲಕ್ಷ ಸೇರಿದಂತೆ ಒಟ್ಟು ₹ 25 ಲಕ್ಷದಷ್ಟು ಹಣವನ್ನು ಪ್ರವಾಸಕ್ಕೆ ಬಳಸಲು ಉದ್ದೇಶಿಸಲಾಗಿದೆ ಎಂದು ಆರೋಪಿಸಲಾಗಿದೆ. ಆ.17, 18 ಮತ್ತು 19ರಂದು ಮೂರು ದಿನಗಳ ಕಾಲ ಗೋವಾ ಪ್ರವಾಸಕ್ಕೆ ಸಿದ್ಧತೆ ನಡೆಸಲಾಗಿದೆ ಎನ್ನಲಾಗಿದೆ. ಅವಧಿಯೇ ಮುಗಿಯುವ ಹಂತದಲ್ಲಿ ಅಧ್ಯಯನ ಪ್ರವಾಸದಿಂದ ಏನು ಪ್ರಯೋಜನ ಎಂಬ ಪ್ರಶ್ನೆಯನ್ನು ಕೆಲ ಸದಸ್ಯರು ಎತ್ತಿದ್ದು, ಕೂಡಲೇ ಪ್ರವಾಸವನ್ನು ಸ್ಥಗಿತಗೊಳಿಸುವಂತೆ ಪುರಸಭಾ ಸದಸ್ಯರಾದ ಜಿ. ಶಾಂತಕುಮಾರ್‌, ಬಿ.ಗಿರೀಶ್, ಭರತ್ ಕುಮಾರ್, ಸಭಾಕೌಸರ್‌, ಪರ್ವಿಸ್ ಹಾಗೂ ಫಯಾಜ್ ಅವರು ಈ ಕುರಿತು ಪುರಸಭೆ ಮುಖ್ಯಾಧಿಕಾರಿಗಳಿಗೆ ಲಿಖಿತ ದೂರು ಸಲ್ಲಿಸಿ, ಪ್ರವಾಸವನ್ನು ತಡೆಹಿಡಿಯುವಂತೆ ಮನವಿ ಮಾಡಿದ್ದಾರೆ.ಈ ಕುರಿತು ಮಾತನಾಡಿದ ಪುರಸಭೆ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಬಿ.ಗಿರೀಶ್ ಮಾತನಾಡಿ , ಸದಸ್ಯರ ಅಧಿಕಾರಾವಧಿ ಮುಗಿಯಲು ಒಂದು ತಿಂಗಳು ಬಾಕಿ ಇರುವಾಗ ತೆರಿಗೆ ಹಣದಲ್ಲಿ ಗೋವಾ ಪ್ರವಾಸ ಕೈಗೊಳ್ಳುವುದು ಎಷ್ಟರ ಮಟ್ಟಿಗೆ ಸರಿ. ಅಧ್ಯಯನ ಪ್ರವಾಸಕ್ಕಾಗಿ 17 ತಿಂಗಳ ಹಿಂದೆಯೇ ₹ 10 ಲಕ್ಷ ಬಿಡುಗಡೆಯಾಗಿದ್ದರೂ ಇಷ್ಟು ತಡವಾಗಿ ಪ್ರವಾಸಕ್ಕೆ ತೆರಳುತ್ತಿರುವುದು ಹಲವು ಅನುಮಾನಕ್ಕೆ ಎಡೆ ಮಾಡಿದೆ ಎನ್ನುತ್ತಾರೆ. ಸಮಾಜ ಸೇವಕ ವೆಂಕಟೇಶ್ ಮಾತನಾಡಿ ಪುರಸಭೆ ಸದಸ್ಯರಲ್ಲಿ ಒಮ್ಮತವಿಲ್ಲದಿದ್ದರೂ ಅಧ್ಯಯನ ಹೆಸರಿನಲ್ಲಿ ಗೋವಾ ಪ್ರವಾಸ ಕೈಗೊಂಡಿದ್ದಾರೆ. ಇವರ ಅವಧಿ ಮುಗಿಯುತ್ತ ಬಂದಿದೆ. 3ವರ್ಷದ ಹಿಂದೆಯೇ ಹೋಗಿ ಅಧ್ಯಯನ ಮಾಡಿಕೊಂಡು ಬಂದು ಮಾದರಿ ಪುರಸಭೆ ಮಾಡಬಹುದಿತ್ತು, ಸದಸ್ಯರು ದೊಡ್ಡ ಮನಸ್ಸು ಮಾಡಿ ಪುರಸಭೆಯ ಸ್ವಚ್ಛತಾ ಸಿಬ್ಬಂದಿಗಳನ್ನು ಕಳಿಸಿ ಅಧ್ಯಯನ ಮಾಡಿಸಿದರೆ ಪುರಸಭೆ ಕಾರ್ಮಿಕರಿಗೂ ಅರಿವು ಮೂಡಿಸಿದಂತಾಗುತ್ತದೆ. ಅಧ್ಯಯನ ಮಾಡಿಕೊಂಡು ಬಂದ ಅನುಭವವನ್ನು ಒಂದು ತಿಂಗಳಲ್ಲಿ ಹೇಗೆ ಕಾರ್ಯರೂಪಕ್ಕೆ ತರುತ್ತೀರಾ ಎಂದು ಪ್ರಶ್ನೆಮಾಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮೀರ್ ಮೊಬೈಲಲ್ಲಿ ಭಾರತ ವಿರೋಧಿ ಮ್ಯಾಪ್‌!
ಗ್ರಾಪಂ ವ್ಯಾಪ್ತಿಗೆ ಒಳಪಡದ ಕೆಲಸ ವಹಿಸದಂತೆ ಸಿಬ್ಬಂದಿ ಮನವಿ