ಗ್ರಾಮಸ್ಥರು, ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರಿಂದ ಆಯೋಜನೆ
ಕನ್ನಡಪ್ರಭ ವಾರ್ತೆ ಬೇಲೂರುತಾಲೂಕಿನ ಪಡುವಳಲು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯೋಪಾದ್ಯಾಯರಾಗಿ ಕೆಲಸ ನಿರ್ವಹಿಸುತ್ತಿದ್ದ ಸೋಮಶೇಖರ್ ಅವರನ್ನು ಗ್ರಾಮಸ್ಥರು, ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಸದಸ್ಯರಿಂದ ಆತ್ಮೀಯವಾಗಿ ಬೀಳ್ಕೊಟ್ಟರು.
ಎಸ್‌ಡಿಎಂಸಿ ಅಧ್ಯಕ್ಷ ಚಂದನ್ ಮಾತನಾಡಿ, ‘ಪಡುವಳಲು ಶಾಲೆಯಲ್ಲಿ ಸುಮಾರು 9 ವರ್ಷದಿಂದ ಕರ್ತವ್ಯ ನಿರ್ವಹಿಸಿ ಹಾಸನದ ಹಾಲುಬಾಗಿಲು ಶಾಲೆಗೆ ವರ್ಗಾವಣೆಗೊಂಡಿದ್ದಾರೆ. ಇವರು ನಮ್ಮ ಶಾಲೆಯಲ್ಲಿ ಉತ್ತಮ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡಿದ್ದಾರೆ. ಮಕ್ಕಳಿಗೆ ಪಾಠದ ಜತೆ ಸಂಸ್ಕಾರವನ್ನು ಸಹ ಕಲಿಸಿ ಕೊಟ್ಟಿದ್ದಾರೆ ಎಂದು ಹೇಳಿದರು.ನಂತರ ಸನ್ಮಾನ ಸ್ವೀಕರಿಸಿ ಮಾತನಾಡಿದ ಮುಖ್ಯ ಶಿಕ್ಷಕರಾದ ಸೋಮಶೇಖರ್, ‘ನಾನು ಈ ಶಾಲೆಗೆ ಬಂದು ಸುಮಾರು 9 ವರ್ಷ ಆಗಿದ್ದು ಈ ಊರು ನನಗೆ ಸ್ವಂತ ಊರಿಗಿಂತ ಹೆಚ್ಚು. ಇಲ್ಲಿಯ ವಾತಾವರಣ ಗ್ರಾಮದ ಜನ ಈ ಶಾಲೆಯನ್ನು ಬಿಟ್ಟು ಹೋಗಲು ಮನಸ್ಸು ಇಲ್ಲ’ ಎಂದು ತಿಳಿಸಿದರು.
‘ಗ್ರಾಮದವರು, ಪೋಷಕರು ಹಾಗೂ ಎಸ್‌ಡಿಎಂಸಿಯವರು ಕೊಟ್ಟ ಪ್ರೀತಿ ವಿಶ್ವಾಸಕ್ಕೆ ನಾನು ಚಿರ ಋಣಿ. ನನ್ನ ಜೀವನದ ಕೊನೆಯವರೆಗೂ ನಾನು ಕೃತಜ್ಞನಾಗಿರುತ್ತೇನೆ. ನಾನು ಸೇವೆ ಸಲ್ಲಿಸಿದ ೩೩ ವರ್ಷದಲ್ಲಿ ಈ ಶಾಲೆಯಲ್ಲಿ ಸಿಕ್ಕಿದ ಅಭೂತಪೂರ್ವ ಕ್ಷಣ ನನ್ನ ಜೀವನದಲ್ಲಿ ಮರೆಯಲಾಗುವುದಿಲ್ಲ. ಇಲ್ಲಿ ಇದ್ದ ಸಮಯದಲ್ಲಿ ಮುಖ್ಯೋಪಾಧ್ಯಾಯರಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಮಕ್ಕಳ ಶಿಕ್ಷಣ ಹಾಗೂ ಕ್ರೀಡೆಗೆ ಹೆಚ್ಚು ಒತ್ತು ಕೊಟ್ಟು ವಿದ್ಯಾರ್ಥಿಗಳನ್ನು ಮುಂದೆ ತರುವ ಪ್ರಯತ್ನ ಮಾಡಿದ್ದು ಶಾಲೆಗೆ ಗ್ರಾಮಸ್ಥರ ಕೊಡುಗೆ ಅಪಾರವಾಗಿದೆ’ ಎಂದರು.ಇದೇ ವೇಳೆ ಶಾಲೆಯ ವಿದ್ಯಾರ್ಥಿಗಳು ಮುಖ್ಯೋಪಾಧ್ಯಾರಿಗೆ ಗುಲಾಬಿ ಹೂ ನೀಡುವ ಮೂಲಕ ಬೀಳ್ಕೊಡುಗೆ ನೀಡಿದರು.
ಗ್ರಾಮ ಪಂಚಾಯತಿ ಮಾಜಿ ಸದಸ್ಯ ಹರೀಶ್, ಶಾಲಾ ಶಿಕ್ಷಕರಾದ ಕುಮಾರ್, ತೀರ್ಥಮಣಿ, ಅತಿಥಿ ಶಿಕ್ಷಕರಾದ ಹೇಮ, ಲತಾ, ಎಸ್‌ಡಿಎಂಸಿ ಸದಸ್ಯರಾದ ದೇವಕುಮಾರ್, ತಾರೇಶ್, ಸತೀಶ್, ರಮೇಶ್, ವಿನುತಾ, ಶುಭಾ, ಆಶಾ ಹಾಗೂ ಗ್ರಾಮಸ್ಥರು ಹಾಜರಿದ್ದರು.ಬೇಲೂರು ತಾಲೂಕಿನ ಪಡುವಳಲು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಿಗೆ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.