ಕನ್ನಡಪ್ರಭ ವಾರ್ತೆ ಬೇಲೂರು
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ಶಾಸಕರ ಅನುದಾನದಲ್ಲಿ ತಾಲೂಕಿನ ಕ್ರೀಡಾಪಟುಗಳ ಅನುಕೂಲಕ್ಕಾಗಿ ನಿರ್ಮಾಣ ಹಂತದಲ್ಲಿರುವ ಕ್ರೀಡಾಂಗಣದ ಕಾಮಗಾರಿ ಸಾಕಷ್ಟು ವರ್ಷಗಳಿಂದಲೂ ಕುಂಟುತ್ತಾ ಸಾಗುತ್ತಿದೆ. ಕೋಟ್ಯಂತರ ರು. ವೆಚ್ಚದಲ್ಲಿ ಕ್ರೀಡಾಂಗಣದ ಕಾಮಗಾರಿ ಮಾಡಿಸಲು ಸರ್ಕಾರ ಮುಂದಾಗಿದೆ. ಆದರೆ, ಇಲ್ಲಿ ಕೆಲವರಷ್ಟೇ ಕುಳಿತುಕೊಳ್ಳಲು ಕಾಂಕ್ರೀಟ್‌ನಿಂದ ನಿರ್ಮಿಸಿದ್ದ ಆಸನ ಹಾಗೂ ತಳಭಾಗದಲ್ಲಿ ಕಿರಿದಾದ ಕೊಠಡಿಗಳನ್ನು ನಿರ್ಮಿಸಲಾಗಿದೆ. ಅದನ್ನು ಬಿಟ್ಟರೆ ಇತ್ತೀಚಿನ ದಿನಗಳಲ್ಲಿ ಆಸನದ ಮೇಲ್ಭಾಗಕ್ಕೆ ಛಾವಣಿ ಹಾಕಲು ಪಿಲ್ಲರ್‌ಗಳನ್ನು ನಿಲ್ಲಿಸಿ ತಿಂಗಳುಗಳೇ ಕಳೆದರೂ ಇನ್ನೂ ಕ್ರಮ ಕೈಗೊಂಡಿಲ್ಲ.
ಇಷ್ಟೇ ಅಲ್ಲದೆ ಜೋರಾಗಿ ಮಳೆ ಬಂದರೆ ಮಳೆ ನೀರೆಲ್ಲ ಹೊರಹೋಗದೆ ಟ್ರ್ಯಾಕ್ ಮೇಲೆಯೇ ನೀರು ನಿಲ್ಲುವುದರಿಂದ ಹಾಗೂ ಟ್ರ್ಯಾಕ್ ಮೇಲೆಯೇ ಗಿಡಗಂಟಿಗಳು ಬೆಳೆದು ಅವ್ಯವಸ್ಥೆಯ ಆಗರವಾಗಿದೆ. ಇದರಿಂದ ಕ್ರೀಡಾಂಗಣಕ್ಕೆ ಬರುವ ಕ್ರೀಡಾಪಟುಗಳಿಗೆ, ವಾಯುವಿಹಾರಿಗಳಿಗೆ ಸಾಕಷ್ಟು ಅನನುಕೂಲವಾಗುತ್ತಿದೆ. ಇಷ್ಟೆಲ್ಲ ಬೆಳವಣಿಗೆಗಳು ನಡೆದರೂ ನಿರ್ಮಿತಿ ಕೇಂದ್ರದವರಾಗಲಿ, ಗುತ್ತಿಗೆದಾರನಾಗಲಿ ಅಥವಾ ಎಂಜಿನಿಯರ್ ಸಂಬಂಧಿಸಿದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಧಿಕಾರಿಗಳಾಗಲಿ, ಸಿಬ್ಬಂದಿಯಾಗಲಿ ಕ್ರೀಡಾಂಗಣಕ್ಕೆ ಆಗಮಿಸಿ ಪರಿಶೀಲಿಸಿಲ್ಲ.ವೇದಿಕೆಯ ತಡೆಗೋಡೆ ಬಿದ್ದಿರುವುದನ್ನು ವೀಕ್ಷಿಸಿ ತೆರವುಗೊಳಿಸಿ ಹೊಸದಾಗಿ ತಡೆಗೋಡೆ ನಿರ್ಮಿಸುವುದಾಗಲಿ, ಟ್ರ್ಯಾಕ್‌ನಲ್ಲಿ ನಿಂತಿರುವ ನೀರನ್ನು ತೆರವು ಮಾಡದೆ ಮತ್ತು ಬೆಳೆದಿರುವ ಗಿಡಗಂಟೆಗಳನ್ನು ತೆರವುಗೊಳಿಸದೆ ಕಣ್ಣುಮುಚ್ಚಿ ಕುಳಿತಿದೆ. ಅಲ್ಲದೆ ಕ್ರೀಡಾಂಗಣದ ಕಾಮಗಾರಿ ನಿರ್ವಹಣೆ ಮಾಡಿಸುತ್ತಿರುವ ನಿರ್ಮಿತಿ ಕೇಂದ್ರದವರ ನಿರ್ಲಕ್ಷ್ಯವೇ ಇದಕ್ಕೆಲ್ಲ ಪ್ರಮುಖ ಕಾರಣವಾಗಿದ್ದು, ಕ್ರೀಡಾಪಟುಗಳು ಮತ್ತು ಸಾರ್ವಜನಿಕರು ಪ್ರತಿಭಟನೆಗಿಳಿಯುವ ಮುನ್ನವೇ ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನಹರಿಸಿ ಕಾಮಗಾರಿಗೆ ಮುಂದಾಗಬೇಕಿದೆ.
ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲು ಮತ್ತು ಅವರಿಗೆ ನಿತ್ಯ ಕ್ರೀಡಾ ಚಟುವಟಿಕೆಗಳನ್ನು ಅಭ್ಯಾಸ ನಡೆಸಲು ಕ್ರೀಡಾಂಗಣ ನಿರ್ಮಿಸಲಾಗಿದೆ. ಆದರೆ, ಕಾಲಕ್ರಮೇಣ ಕಾಮಗಾರಿ ನನೆಗುದಿಗೆ ಬಿದ್ದಿರುವುದರಿಂದ ಕ್ರೀಡಾಂಗಣ ಹದಗೆಟ್ಟಿದೆ. ಗುತ್ತಿಗೆದಾರ ಮನಸ್ಸಿಗೆ ಬಂದಂತೆ ಕಳಪೆ ಕಾಮಗಾರಿ ಮಾಡಿಸಿದ್ದಾರೆ. ಮಳೆಗಾಲದಲ್ಲಿ ಮಳೆ ಸುರಿದಾಗ ಟ್ರ್ಯಾಕ್‌ನಲ್ಲಿ ನೀರು ನಿಲ್ಲುತ್ತಿದೆ. ಇದರಿಂದ ಕ್ರೀಡಾಪಟುಗಳಿಗೆ ಕ್ರೀಡೆ ಆಡಲು ಸಾಧ್ಯವಿಲ್ಲ. ಜತೆಗೆ ಇತ್ತೀಚೆಗಷ್ಟೇ ನಿರ್ಮಿಸಿದ್ದ ವೇದಿಕೆ ತಡೆಗೋಡೆ ಸಂಪೂರ್ಣವಾಗಿ ಕುಸಿದಿರುವುದರಿಂದ ಅದನ್ನು ತೆರವುಗೊಳಿಸಿ ಹೊಸದಾಗಿ ನಿರ್ಮಿಸಲು ಶಾಸಕರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಬೇಕಿದೆ.
ಸ್ಥಳಕ್ಕೆ ತಹಸೀಲ್ದಾರ್ ಎಂ ಮಮತಾ ಭೇಟಿ ನೀಡಿ ಪರಿಶೀಲಿಸಿ ಕಳಪೆ ಕಾಮಗಾರಿಯ ಬಗ್ಗೆ ಶಾಸಕರಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಹಾಗೂ ಸಂಭಂದಿಸಿದ ಮೇಲಧಿಕಾರಿಗಳಿಗೆ ಈ ಬಗ್ಗೆ ದೂರು ನೀಡುವುದಲ್ಲದೆ ಎಂಜಿನಿಯರ್ ವಿರುದ್ಧ ಕ್ರಮಕೈಗೊಳ್ಳುವಂತೆ ಸೂಚಿಸಲಾಗುವುದು ಎಂದರು.