ಗೆಜೆಟೆಡ್ ಪ್ರೊಬೆಷನರ್ಸ್ ಹುದ್ದೆಗಳ ನೇಮಕಾತಿಗೆ ಜರುಗಿದ ಮುಖ್ಯ ಪರೀಕ್ಷೆಯ ಪ್ರಶ್ನೆಪತ್ರಿಕೆಯ ಸೀಲ್ಡ್ ಆಗಿದ್ದ ಬಂಡಲ್ ಒಳಗಿನ ಕವರ್ ತೆರೆದ ಸ್ಥಿತಿಯಲ್ಲಿದ್ದ ಬಗ್ಗೆ ಅಭ್ಯರ್ಥಿಗಳು ಕೆಪಿಎಸ್‌ಸಿ ಕಾರ್ಯದರ್ಶಿಗೆ ಪತ್ರ ಬರೆದು ದೂರಿದ್ದಾರೆ.
ಬೆಂಗಳೂರು : ಗೆಜೆಟೆಡ್ ಪ್ರೊಬೆಷನರ್ಸ್ ಹುದ್ದೆಗಳ ನೇಮಕಾತಿಗೆ ಸೋಮವಾರ ಜರುಗಿದ ಮುಖ್ಯ ಪರೀಕ್ಷೆಯ ಪ್ರಶ್ನೆಪತ್ರಿಕೆಯ ಸೀಲ್ಡ್ ಆಗಿದ್ದ ಬಂಡಲ್ ಒಳಗಿನ ಕವರ್ ತೆರೆದ ಸ್ಥಿತಿಯಲ್ಲಿದ್ದ ಬಗ್ಗೆ ಅಭ್ಯರ್ಥಿಗಳು ಕೆಪಿಎಸ್‌ಸಿ ಕಾರ್ಯದರ್ಶಿಗೆ ಪತ್ರ ಬರೆದು ದೂರಿದ್ದಾರೆ.
ಆದರೆ, ಪತ್ರಿಕೆ ಪ್ಯಾಕಿಂಗ್ ವೇಳೆ ಥರ್ಮಲ್ ಸೀಲಿಂಗ್‌ನಲ್ಲಿ ವ್ಯತ್ಯಾಸವಾಗಿರಬಹುದು. ಏಕೆಂದರೆ, ಮೂರು ಹಂತದ ಪ್ಯಾಕಿಂಗ್ ಪೈಕಿ ಮೇಲ್ಭಾಗದ ಬಂಡಲ್ ಪ್ಯಾಕಿಂಗ್ ಸರಿಯಾಗಿಯೇ ಇತ್ತು. ಆದರೂ, ಈ ಬಗ್ಗೆ ಸಂಪೂರ್ಣವಾಗಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಕೆಪಿಎಸ್‌ಸಿ ಸ್ಪಷ್ಟಪಡಿಸಿದೆ.
ಗುರುವಾರ ಪ್ರಬಂಧ ಪತ್ರಿಕೆಯ ಪರೀಕ್ಷೆ ನಡೆಯಿತು. ನಗರದ ಮೈಸೂರು ರಸ್ತೆಯ ಪಿಯು ಕಾಂಪೋಸಿಟ್ ಕಾಲೇಜು ಪರೀಕ್ಷಾ ಕೇಂದ್ರದ ಕೊಠಡಿ ಸಂಖ್ಯೆ 4ರಲ್ಲಿ ಬೆಳಗ್ಗೆ ಪ್ರಶ್ನೆ ಪತ್ರಿಕೆಯ ಬಂಡಲ್ ಅನ್ನು ವಿದ್ಯಾರ್ಥಿಗಳ ಸಮ್ಮುಖದಲ್ಲಿ ತೆಗೆಯುವಾಗ ಒಳಭಾಗದ ಕವರ್ ತೆರೆದ ಸ್ಥಿತಿಯಲ್ಲಿರುವುದನ್ನು ಗಮನಿಸಿದ ಅಭ್ಯರ್ಥಿಗಳು ಆಕ್ಷೇಪ ವ್ಯಕ್ತಪಡಿಸಿ ಪರೀಕ್ಷೆ ಬರೆದರು.
ಪರೀಕ್ಷೆ ಮುಗಿದ ಬಳಿಕ ಅಭ್ಯರ್ಥಿಗಳು ಮತ್ತೊಮ್ಮೆ ಪರೀಕ್ಷಾ ಕೇಂದ್ರದ ಮೇಲ್ವಿಚಾರಕರನ್ನು ಪ್ರಶ್ನಿಸಿದ್ದಾರೆ. ಆಗ, ಪ್ರಶ್ನೆಪತ್ರಿಕೆ ಇದೇ ಸ್ಥಿತಿಯಲ್ಲಿ ಬಂದಿದೆ ಎಂದು ಉತ್ತರ ನೀಡಿದ್ದಾರೆ. ಇದರಿಂದ ಸಮಾಧಾನಗೊಳ್ಳದ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದ ಸಿಬ್ಬಂದಿ ಹಾಗೂ ಪೊಲೀಸರೊಂದಿಗೆ ವಾಗ್ವಾದ ನಡೆಸಿದರು. ಅಂತಿಮವಾಗಿ ಕೆಪಿಎಸ್‌ಸಿ ಕಾರ್ಯದರ್ಶಿಗೆ ದೂರು ನೀಡಿದರು.
3 ಸುತ್ತಿನ ಪ್ಯಾಕಿಂಗ್:
ಪ್ರಶ್ನೆಪತ್ರಿಕೆಗಳನ್ನು ಮೂರು ಹಂತಗಳಲ್ಲಿ ಪ್ಯಾಕಿಂಗ್ ಮಾಡಲಾಗುತ್ತದೆ. ಮೊದಲ ಹಂತದ ಪ್ಯಾಕಿಂಗ್ ಸರಿಯಾಗಿದೆ. ಒಳಭಾಗದ ಕವರ್ ಪ್ಯಾಕಿಂಗ್ ತೆರೆದ ಸ್ಥಿತಿಯಲ್ಲಿದೆ ಎಂದು ಅಭ್ಯರ್ಥಿಗಳು ದೂರಿದ್ದಾರೆ. ಪತ್ರಿಕೆಯ ಉತ್ಪಾದನಾ ಘಟಕದಲ್ಲಿ ಥರ್ಮಲ್ ಸೀಲಿಂಗ್ ವೇಳೆ ದೋಷವಾಗಿರಬಹುದು ಎಂದು ಅಂದಾಜಿಸಲಾಗಿದೆ. ಆದರೂ, ಅಭ್ಯರ್ಥಿಗಳ ದೂರಿನ ಅನ್ವಯ ಪರೀಕ್ಷಾ ಕೇಂದ್ರದ ಸಿಸಿ ಕ್ಯಾಮೆರಾಗಳು ಸೇರಿ ನಿರ್ದಿಷ್ಟ ಬಂಡಲ್ ಕುರಿತು ಸಮಗ್ರವಾಗಿ ಪರಿಶೀಲಿಸುತ್ತಿದ್ದೇವೆ. ಬೇರೆ ಯಾವುದೇ ಕೇಂದ್ರದಲ್ಲೂ ದೂರುಗಳು ಬಂದಿಲ್ಲ ಎಂದು ಕೆಪಿಎಸ್‌ಸಿ ಕಾರ್ಯದರ್ಶಿ ರಮಣದೀಪ್ ತಿಳಿಸಿದ್ದಾರೆ.