ಕನ್ನಡಪ್ರಭ ವಾರ್ತೆ ಬೇಲೂರು ಜಿಲ್ಲಾಧಿಕಾರಿಗಳ ಮಧ್ಯಸ್ಥಿಕೆಯಲ್ಲಿ ನಡೆದ ಸಂಧಾನ ಸಭೆ ಚನ್ನಕೇಶವಸ್ವಾಮಿ ದೇಗುಲದ ಆಡಳಿತ ಮಂಡಳಿಯ ಹಾಗೂ ಅಡ್ಡೆಗಾರರ ನಡುವಿನ ಸಮಸ್ಯೆ ಬಗೆಹರಿಸಲು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದ ಸಂಧಾನ ಸಭೆ ಸುಖಾಂತ್ಯ ಕಂಡಿತು. ಸುಮಾರು ಒಂದು ತಿಂಗಳ ಹಿಂದೆ ದೇಗುಲದ ಆಡಳಿತ ಮಂಡಳಿ ಯಾವುದೇ ಕಾರಣ ಹೇಳದೆ ನೋಟಿಸ್ ನೀಡಿದ ಹಿನ್ನೆಲೆಯಲ್ಲಿ ಅಡ್ಡೆಗಾರರಾದ ನಮಗೆ ತುಂಬಾ ನೋವುಂಟಾಗಿದ್ದು ಮುಂದೆ ನಡೆಯುವ ಚನ್ನಕೇಶವ ದೇಗುಲ ಉತ್ಸವದಲ್ಲಿ ಭಾಗವಹಿಸದೆ ಸಾರ್ವಜನಿಕರಂತೆ ಬಂದು ಸೇವೆ ಸಲ್ಲಿಸುತ್ತೇವೆ ಎಂದು ಅಡ್ಡೆಗಾರರು ಪಟ್ಟುಹಿಡಿದಿದ್ದರು. ಇದರ ಬಗ್ಗೆ ಮಾಹಿತಿ ತಿಳಿದ ಜಿಲ್ಲಾಧಿಕಾರಿ ಸತ್ಯಭಾಮ ಹಾಗೂ ಮುಜರಾಯಿ ತಹಸೀಲ್ದಾರ್ ಹಾಗೂ ವ್ಯವಸ್ಥಾಪನಾ ಸಮಿತಿಯ ಸಮ್ಮುಖದಲ್ಲಿ ದಾಸೋಹ ಭವನದ ಸಭೆಯಲ್ಲಿ ಅಡ್ಡೆಗಾರರ ಹಾಗೂ ದೇಗುಲದ ವ್ಯವಸ್ಥಾಪನಾ ಸಮಿತಿಯ ನಡುವೆ ಸಂಧಾನ ಸಭೆ ಕರೆಯಲಾಗಿತ್ತು. ಇಬ್ಬರ ನಡುವೆ ಮಾತಿನ ಚಕಮಕಿ ನಡೆದರೂ ಜಿಲ್ಲಾಧಿಕಾರಿಗಳ ಮಧ್ಯಪ್ರವೇಶದಿಂದ ಸುಖಾಂತ್ಯ ಕಂಡಿತು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಸತ್ಯಭಾಮ, ಭಗವಂತನಿಗೆ ತನ್ನ ಭಕ್ತಿಯನ್ನು ಯಾವುದೇ ಪ್ರತಿಪಲಾಕ್ಷೆ ಇಲ್ಲದೆ ಸೇವೆ ಸಲ್ಲಿಸುವುದು ತಮ್ಮ ಪೂರ್ವಿಕರಿಂದ ಬಂದ ಬಳುವಳಿ. ಈ ನಾಲ್ಕು ಮೂಲೆಗಳ ಅಡ್ಡೆಗಾರರು ಸೇರಿದಂತೆ ದೇಗುಲದ ಪರಂಪರೆ ಹಾಗೂ ಭಕ್ತಿ ಸಮರ್ಪಿಸುವ ಪ್ರತಿಯೊಬ್ಬರೂ ನಮಗೆ ಮುಖ್ಯ. ನಮ್ಮ ಇಲಾಖೆಯಿಂದ ಕೆಲ ಸಣ್ಣಪುಟ್ಟ ತಪ್ಪುಗಳಾಗಿದ್ದು, ಅವುಗಳನ್ನು ಯಾರೂ ಸಹ ಮನಸ್ಸಿನಲ್ಲಿಟ್ಟುಕೊಳ್ಳದೆ ಕ್ಷಮಿಸುವಂತೆ ಮನವಿ ಮಾಡಿದ ಅವರು, ಕ್ಷಮೆ ಎಂಬುವುದು ಭಗವಂತನಿಗೆ ಪ್ರಿಯವಾದ ಮಾತು ಅದನ್ನು ಕೇಳಿ ಪಡೆಯಬಾರದು. ಮನಸ್ಸಿನಿಂದ ಮಾತ್ರ ಬರಬೇಕು ಎಂದು ನಗೆ ಚಟಾಕಿ ಹಾರಿಸಿದ ಅವರು ಮುಂದೆ ಯಾವುದೇ ರೀತಿಯಲ್ಲಿಯೂ ಇಂತಹ ಸನ್ನಿವೇಶ ನಿರ್ಮಾಣವಾಗಬಾರದು. ಅಡ್ಡೆಗಾರರಾದ ನೀವು ಸೇರಿದಂತೆ ದೇಗುಲದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ಭಕ್ತರು ದೇಗುಲದ ಸಂಪ್ರದಾಯ ಪಾಲಿಸುತ್ತಾರೆ. ಅಂತಹವರನ್ನು ಗೌರವಿಸುವುದು ಎಲ್ಲರ ಕರ್ತವ್ಯವಾಗಿದೆ. ಯಾರೇ ಆದರೂ ನನ್ನಿಂದಲೇ ನಾವಿಲ್ಲದೆ ಯಾವುದೂ ನಡೆಯುವುದಿಲ್ಲ ಎಂಬುವುದು ನಿಮ್ಮ ತಪ್ಪು ತಿಳಿವಳಿಕೆ. ನಮ್ಮ ಅಧಿಕಾರಿಗಳು ಸಹ ಆಯುಕ್ತರ ನಿರ್ದೇಶನದಂತೆ ಕೆಲಸ ಮಾಡಿರುತ್ತಾರೆ. ದೇವಾಲಯಕ್ಕೆ ಯಾವುದೇ ರಾಜಕೀಯ ವೈಯಕ್ತಿಕ ವಿಷಯಗಳನ್ನು ತರವುದು ತಪ್ಪು. ನಿಮ್ಮ, ಭಕ್ತಿ ಕರ್ತವ್ಯಕ್ಕೆ ಧಕ್ಕೆಯಾದಾಗ ಮಾತ್ರ ಪ್ರಶ್ನಿಸಿ. ಆದರೆ ಅದನ್ನು ದೊಡ್ಡದು ಮಾಡುತ್ತಾ ಹೋದರೆ ನಾನು ಸಭೆ ನಡೆಸುವುದಿಲ್ಲ ಎಂದು ಹೊರನಡೆಯಲು ಮುಂದಾದಾಗ ನಾವೆಲ್ಲರೂ ಒಂದಾಗಿ ಉತ್ಸವಗಳನ್ನು ಮಾಡಿಕೊಂಡು ಬರುತ್ತೇವೆ ಎಂದು ಜಿಲ್ಲಾಧಿಕಾರಿಗಳಿಗೆ ಅಡ್ಡೆಗಾರರು ಭರವಸೆ ನೀಡಿದ ನಂತರ ಅಡ್ಡೆಗಾರರ ಹಾಗೂ ಸಮಿತಿಯ ನಡುವಿನ ಒಳ ಜಗಳ ಸುಖಾಂತ್ಯ ಕಂಡಿತು. ಈ ಸಂದರ್ಭದಲ್ಲಿ ಮುಜರಾಯಿ ತಹಸೀಲ್ದಾರ್ ಲತಾ, ತಹಸೀಲ್ದಾರ್ ಎಂ ಮಮತಾ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ. ನಾರಾಯಣ್ ಸ್ವಾಮಿ , ಕಾರ್ಯನಿರ್ವಾಹಕ ಅಧಿಕಾರಿ ಯೋಗೇಶ್, ಸಮಿತಿಯ ಸದಸ್ಯರಾದ ವಿಜಯಲಕ್ಷ್ಮೀ, ರವಿಶಂಕರ್, ಪ್ರಧಾನ ಅರ್ಚಕರಾದ ಶ್ರೀನಿವಾಸ್ ಭಟ್, ನರಸಿಂಹಪ್ರಿಯ ಭಟ್ ಸೇರಿದಂತೆ ಅಡ್ಡರಗಾರರು ಇದ್ದರು. ಸಭೆಗೂ ಮುನ್ನ ಜಿಲ್ಲಾಧಿಕಾರಿಗಳು ಚನ್ನಕೇಶವ ಸ್ವಾಮಿ ದರ್ಶನ ಪಡೆದ ಸಂದರ್ಭದಲ್ಲಿ ಅಲ್ಲಿಯ ಸಿಬ್ಬಂದಿಗೆ ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚನೆ ನೀಡಿ, ನಾವು ಭಕ್ತಿಯಿಂದ ದೇಗುಲಕ್ಕೆ ಬರುತ್ತೇವೆ. ಇಂತಹ ಪ್ರಸಿದ್ಧ ದೇವಾಲಯವನ್ನು ಸ್ವಚ್ಛತೆಯಾಗಿ ಇಟ್ಟುಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಇದು ವಿಶ್ವಪಾರಂಪರಿಕ ತಾಣಕ್ಕೆ ಸೇರಿದೆ . ಅದನ್ನು ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ. ಆದ್ದರಿಂದ ಎಲ್ಲರೂ ಸಹ ದೇವಾಲಯವನ್ನು ಸ್ವಚ್ಛತೆಯಾಗಿಟ್ಟುಕೊಳ್ಳುವಂತೆ ತಿಳಿಸಿದರು.