ಶಿರಸಿ:
ಕಸ್ತೂರಿ ರಂಗನ್ ವರದಿ ಜಾರಿಯಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಜನಜೀವನಕ್ಕೆ ಮಾರಕವಾಗಿದ್ದು ಕರಡು ಪ್ರತಿ ವಿರೋಧಿಸಿ ಮೂರು ಹಂತದಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು. ಈ ಮೂಲಕ ವರದಿ ಹಿಂಪಡೆಯಲು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಲಾಗುವುದು ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ತೀರ್ಮಾನಿಸಿದೆ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕಸ್ತೂರಿ ರಂಗನ್ ವರದಿ ವಿರೋಧಿಸಿ ಅತೀ ಸೂಕ್ಷ್ಮ ಪರಿಸರ ವಲಯಕ್ಕೆ ಒಳಪಡುವ ೧೪೭ ಗ್ರಾಮ ಪಂಚಾಯಿತಿ ಆಡಳಿತ ವ್ಯವಸ್ಥೆಗೆ ವರದಿ ತಿರಸ್ಕರಿಸಬೇಕೆಂದು ಆಗ್ರಹಿಸಿ, ಗ್ರಾಮ ಪಂಚಾಯಿತಿ ಮತ್ತು ಗ್ರಾಮಸಭೆಗಳಲ್ಲಿ ನಿರ್ಣಯ ತೆಗೆದುಕೊಳ್ಳುವಂತೆ ಜಾಥಾ ಪ್ರಥಮ ಹಂತದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಜಾಥಾದ 2ನೇ ಹಂತದಲ್ಲಿ ಅತೀ ಸೂಕ್ಷ್ಮ ಪರಿಸರ ವಲಯವೆಂದು ಘೋಷಿಸಲ್ಪಟ್ಟ ಪ್ರದೇಶದಲ್ಲಿ ಜಾಗೃತ, ತಿಳಿವಳಿಕೆ ಮತ್ತು ಕುಟುಂಬಗಳಿಂದ ವರದಿ ತಿರಸ್ಕರಿಸಲು ಆಗ್ರಹಿಸಿ ಕೇಂದ್ರ ಸರ್ಕಾರಕ್ಕೆ ಆಕ್ಷೇಪಣೆ ಪತ್ರ ಸಲ್ಲಿಸಲಾಗುವುದೆಂದು ಅವರು ತಿಳಿಸಿದ್ದಾರೆ.ಜಾಥಾದ ಮೂರನೇ ಹಂತವಾಗಿ ಈಗಾಗಲೇ ಅರಣ್ಯ ಭೂಮಿ ರಕ್ಷಿಸಿ, ಸಂರಕ್ಷಿಸಿ ಪೋಷಣೆ ಮಾಡಲು ಸಾಕಷ್ಟು ಕಾನೂನುಗಳಿರುವುದರಿಂದ ಅವೈಜ್ಞಾನಿಕ ವರದಿ ಜಾರಿಗೆ ವಿರೋಧಿಸಿ ಸಂಬಂಧಪಟ್ಟ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಲಾಗುವುದು ಎಂದು ಅವರು ಪ್ರಸ್ತಾಪಿಸಿದರು.
ಜಿಲ್ಲೆಯ ೭೦೪ ಹಳ್ಳಿ ಅತೀ ಸೂಕ್ಷ್ಮ ಪ್ರದೇಶ:ಉತ್ತರ ಕನ್ನಡ ಜಿಲ್ಲೆಯ ೯ ತಾಲೂಕುಗಳಲ್ಲಿ ೭೦೪ ಹಳ್ಳಿಗಳಲ್ಲಿ ೬,೯೯೮ ಚದರ ಕಿಲೋ ಮೀಟರ್ ಅತೀ ಸೂಕ್ಷ್ಮ ಪರಿಸರ ವಲಯವೆಂದು ಕರಡು ಪ್ರತಿಯಲ್ಲಿ ಉಲ್ಲೇಖಿಸಲ್ಪಟ್ಟು, ಜಿಲ್ಲೆಯ ಒಟ್ಟು ಭೌಗೋಳಿಕ ಕ್ಷೇತ್ರದ ಶೇ. ೬೫.೦೯ ಪ್ರದೇಶವು ಸೂಕ್ಷ್ಮ ಪ್ರದೇಶಕ್ಕೆ ಒಳಪಡುವುದೆಂದು ರವೀಂದ್ರ ನಾಯ್ಕ ತಿಳಿಸಿದ್ದಾರೆ.