ಸಮಾಜದ ಅಭಿವೃದ್ಧಿಯಲ್ಲಿ ಯುವ ಜನತೆ ಪಾತ್ರ ಪ್ರಮುಖ

KannadaprabhaNewsNetwork | Published : Oct 15, 2023 12:45 AM

ಸಾರಾಂಶ

ಸಮಾಜದ ಅಭಿವೃದ್ಧಿಯಲ್ಲಿ ಯುವ ಜನರ ಪಾತ್ರ ಪ್ರಮುಖವಾಗಿದ್ದು, ಈ ದಿಸೆಯಲ್ಲಿ ಕಾಲೇಜು ಹಂತದಲ್ಲಿ ಯುವಕರು ಸಮಾಜ ಸೇವಾ ಕಾರ್ಯ ಮಾಡಲು ಮುಂದಾಗಬೇಕು ಎಂದು ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಹೇಳಿದರು.

ಕನ್ನಡಪ್ರಭ ವಾರ್ತೆ ಹಾವೇರಿ

ಸಮಾಜದ ಅಭಿವೃದ್ಧಿಯಲ್ಲಿ ಯುವ ಜನರ ಪಾತ್ರ ಪ್ರಮುಖವಾಗಿದ್ದು, ಈ ದಿಸೆಯಲ್ಲಿ ಕಾಲೇಜು ಹಂತದಲ್ಲಿ ಯುವಕರು ಸಮಾಜ ಸೇವಾ ಕಾರ್ಯ ಮಾಡಲು ಮುಂದಾಗಬೇಕು ಎಂದು ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಹೇಳಿದರು.

ತಾಲೂಕಿನ ಯಲಗಚ್ಚ ಗ್ರಾಮದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಹಮ್ಮಿಕೊಂಡ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ದೇಶದ ಭವಿಷ್ಯ ಯುವಕರ ಕೈಯಲ್ಲಿದ್ದು, ತಮ್ಮನ್ನು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಯುವ ನಾಯಕತ್ವದ ಗುಣಗಳು, ಸೇವಾ ಮನೋಭಾವ ಬೆಳಸಿಕೊಳ್ಳಬೇಕೆಂದು ಕರೆ ನೀಡಿದರು.

ಕೆಸಿಸಿ ಬ್ಯಾಂಕಿನ ನಿರ್ದೇಶಕ ಕೊಟ್ರೇಶಪ್ಪ ಬಸೇಗಣ್ಣಿ ಮಾತನಾಡಿ, ಭಾರತವು ಗ್ರಾಮೀಣ ಪ್ರದೇಶಗಳನ್ನು ಹೆಚ್ಚು ಹೊಂದಿದ್ದು, ಗ್ರಾಮಾಭಿವೃದ್ಧಿಯಾದರೆ ಗಾಂಧಿಜೀಯವರ ಕನಸು ನನಸಾಗಿ ರಾಮರಾಜ್ಯ ಕಟ್ಟಬಹುದಾಗಿದೆ. ಈ ದೃಷ್ಟಿಯಲ್ಲಿ ಯುವಕರು ಗ್ರಾಮೀಣ ಪ್ರದೇಶಗಳ ಸ್ಚಚ್ಛತೆಗೆ ಆದ್ಯತೆ ನೀಡಬೇಕೆಂದು ಹೇಳಿದರು.

ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕ ಉಮೇಶಪ್ಪ ಮಾತನಾಡಿ, ರಾಜ್ಯದಲ್ಲಿ ಎನ್‌ಎಸ್‌ಎಸ್ ಸ್ವಯಂ ಸೇವಕರು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಶ್ರಮದಾನದ ಜೊತೆಗೆ ಆರೋಗ್ಯ ಅರಿವು, ಸರ್ಕಾರದ ಹಲವು ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಎನ್‌ಎಸ್‌ಎಸ್ ಸ್ವಯಂ ಸೇವಕರ ಸಂಖ್ಯೆ ಹೆಚ್ಚಿಸುವುದರಿಂದ ಹೆಚ್ಚಿನ ಸೇವಾ ಕಾರ್ಯಕ್ರಮ ಹಮ್ಮಿಕೊಳ್ಳಲು ಸಹಕಾರಿಯಾಗಲಿದೆ. ಶಿಕ್ಷಣ ಕ್ರಾಂತಿಯಲ್ಲಿ ಎನ್‌ಎಸ್‌ಎಸ್ ಮಹತ್ವದ ಪಾತ್ರ ವಹಿಸಲಿದೆ. ಎಲ್ಲಾ ಕಾಲೇಜುಗಳು ಇದರಲ್ಲಿ ಪಾಲ್ಗೊಳ್ಳಬೇಕು. ಬೋಧಕರು ಹಾಗೂ ವಿದ್ಯಾರ್ಥಿಗಳು ಕೇವಲ ಅಂಕವಷ್ಟೇ ಮುಖ್ಯ ಎಂದು ಸೀಮಿತವಾಗಿ ಯೋಚಿಸದೆ ಸಾಮಾಜಿಕ ಸೇವೆಯಲ್ಲೂ ತೊಡಗಿಕೊಳ್ಳಬೇಕು ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಂ. ಹಿರೇಮಠ, ಯಲಗಚ್ಚ ಗ್ರಾಪಂ ಅಧ್ಯಕ್ಷ ಆನಂದ ಕುಂಬಾರಿ, ಉಪಾಧ್ಯಕ್ಷ ಶೋಭಾ ಕಳಸಪ್ಪನವರ, ವಿ.ಜಿ. ಪಾಟೀಲ, ಶ್ರೀನಿಧಿ ದೇಶಪಾಂಡೆ, ಶಿವಾನಂದ ಕಡಕೋಳ, ಶಿವಾನಂದ ದೇಸಳ್ಳಿ, ಮುಖ್ಯೋಪಾಧ್ಯಯ ಎಂ.ಕೆ. ನದಾಫ, ಜಿ.ಪಿ. ಪೂಜಾರ, ಡಾ. ಅರುಣಕುಮಾರ ಪಿ.ಜೆ., ಉಪನ್ಯಾಸಕಿ ಲಲಿತಾ ನರಗುಂದ ವಂದಿಸಿದರು.

Share this article