ಸುರಪುರ: ಬೆಳೆಗಳಿಗೆ ಸಮರ್ಪಕ ನೀರು ಪೂರೈಕೆಗೆ ಒತ್ತಾಯ

KannadaprabhaNewsNetwork | Published : Oct 15, 2023 12:45 AM

ಸಾರಾಂಶ

ರೈತ ಸಂಘ ಮತ್ತು ರೈತ ಸೇನೆ ವತಿಯಿಂದ ಪ್ರತಿಭಟನೆ, ತಹಸೀಲ್ದಾರ್‌ಗೆ ಮನವಿ
ಸುರಪುರ: ತಾಲೂಕಿನ ಬಿಜಾಸ್ಪುರ, ಮಂಡಗಳ್ಳಿ ಸೇರಿದಂತೆ ವಿವಿಧ ಗ್ರಾಮಗಳ ಬೆಳೆಗೆ ಸಮರ್ಪಕವಾಗಿ ನೀರು ಹರಿಸುವಂತೆ ಒತ್ತಾಯಿಸಿ ಲಕ್ಷ್ಮೀಪುರದ ಹತ್ತಿರ ಕೃಷ್ಣಾ ಭಾಗ್ಯ ಜಲ ನಿಗಮ (ಕೆಬಿಜೆನ್ನೆಲ್) ಕಚೇರಿಯೆದುರು ರಾಜ್ಯ ರೈತ ಸಂಘ ಮತ್ತು ರೈತ ಸೇನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಬಿಜಾಸ್ಪುರ, ಮಂಡಗಟ್ಟಿ, ಲಕ್ಷ್ಮೀಪುರ, ಕಾಟ್ಮಳ್ಳಿ ಸೇರಿದಂತೆ ವಿವಿಧ ಗ್ರಾಮಗಳ ಬೆಳೆಗಳಿಗೆ ಡಿ-7 ಕಾಲುವೆಯಿಂದ ನೀರು ಹರಿಸುತ್ತಾರೆ. ಮುಂಗಾರು ಹಂಗಾಮಿನಲ್ಲಿ ನಡುಭಾಗದಲ್ಲಿ ಇರುವ ಸಾವಿರ ಎಕರೆ ಜಮೀನಿನ ಬೆಳೆಗಳಿಗೆ ಸಮರ್ಪಕವಾಗಿ ನೀರು ದೊರೆಯುತ್ತಿಲ್ಲ. ಇದರಿಂದ ಹತ್ತಿ, ಮೆಣಸು ಒಣಗುತ್ತಿವೆ. ಡಿ-7 ಕಾಲುವೆಗೆ ಹರಿಬಿಟ್ಟ ನೀರು ನಮ್ಮ ಹೊಲಗಳಿಗೆ ತಲುಪುತ್ತಿಲ್ಲ. ಹಾಗಾದರೆ ಎಲ್ಲಿಗೆ ಹೋಗುತ್ತಿದೆ ಎಂದು ಕೆಬಿಜೆನ್ನೆಲ್ ಅಧಿಕಾರಿಗಳನ್ನು ಪ್ರಶ್ನಿಸಿದರು. ಬೆಳೆಗಳಿಗೆ ಮೂರು ತಿಂಗಳು ನೀರು ಅಗತ್ಯವಿದೆ. ಆದರೆ ನೀರು ದೊರೆಯದೆ ವಿವಿಧ ಗ್ರಾಮಗಳ ರೈತರ ಜಮೀನುಗಳಲ್ಲಿರುವ ಬೆಳೆಗಳು ಬಾಡುತ್ತಿವೆ. ನೀರು ಹರಿಸಿ ಬೆಳೆ ಉಳಿಸಬೇಕು ಎಂದು ಒತ್ತಾಯಿಸಿದರು. ಶಹಾಪುರ ತಾಲೂಕಿನ ಸಗರ ಗ್ರಾಮದ ಹತ್ತಿರ ನಾರಾಯಣಪುರ ಜಲಾಶಯ ಕಾಲುವೆ ನೀರಿಗೆ ಪವರ್ ಪ್ಲಾಂಟ್ ನಿರ್ಮಿಸಲಾಗಿದೆ. ಅಧಿಕಾರಿಗಳು ಹೇಳುವ ಪ್ರಕಾರ ನೀರು ಬಳಸಿ ವಿದ್ಯುತ್ ಉತ್ಪಾದಿಸುತ್ತಿಲ್ಲ ಎನ್ನುತ್ತಾರೆ. ಆದರೆ, ವಾಮಮಾರ್ಗದಲ್ಲಿ ವಿದ್ಯುತ್ ಉತ್ಪಾದಿಸುತ್ತಿದ್ದಾರೆ. ಸುರಪುರ ಮತ್ತು ಶಹಾಪುರ ತಾಲೂಕಿನ ದಂಡಾಧಿಕಾರಿಗಳು ಭೇಟಿ ಪರಿಶೀಲಿಸಿ ಕ್ರಮಕೈಗೊಂಡು ರೈತರ ಬೆಳೆಗಳನ್ನು ಉಳಿಸಬೇಕು. ಇಲ್ಲದಿದ್ದರೆ ಶೀಘ್ರದಲ್ಲೇ ರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸುತ್ತೇವೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು. ಬಿಜಾಸ್ಪುರ ಸೇರಿದಂತೆ ವಿವಿಧ ಗ್ರಾಮಗಳಿಗೆ ಡಿ-7 ಕಾಲುವೆಯಿಂದ ನೀರು ಹರಿಸಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ರೈತ ಸೇನೆ ಸದಸ್ಯರು ತಹಸೀಲ್ದಾರ್ ಕೆ. ವಿಜಯಕುಮಾರ ಅವರಿಗೆ ಮನವಿ ಸಲ್ಲಿಸಿದರು. ಬಳಿಕ ಮಾತನಾಡಿದ ತಹಸೀಲ್ದಾರ್ ಕೆ. ವಿಜಯಕುಮಾರ, ಎಲ್ಲಿ ತಪ್ಪಾಗಿದೆ ಎಂಬುದನ್ನು ಪರಿಶೀಲಿಸಲಾಗುತ್ತದೆ. ಕೆಬಿಜೆನ್ನೆಲ್ ಅಧಿಕಾರಿಗಳನ್ನು ಕರೆಸಿ ಮಾತನಾಡುತ್ತೇನೆ. ನೀವು ನೀಡಿರುವ ಮನವಿಯನ್ನು ಮೇಲಕಾರಿಗಳಿಗೆ ಕಳಿಸಿಕೊಡುತ್ತೇನೆ. ನಿಮ್ಮ ಸಮಸ್ಯೆ ಪರಿಹರಿಸಲು ಯತ್ನಿಸಲಾಗುವುದು ಎಂದು ರೈತರಿಗೆ ಭರವಸೆ ನೀಡಿದರು. ರೈತರಾದ ಮಹೇಶ ಮಂಡಗಳ್ಳಿ, ವಿರೂಪಕ್ಷಿ ಶೆಟ್ಟಿ ಹತ್ತಿಗೂಡೂರು, ಸೂಗು ದೇಸಾಯಿ, ಶರಣು ಪೂಜಾರಿ, ಸಿದ್ದು ಪಾಟೀಲ, ಮೂಕಣ್ಣ ಚಿಂತಿ, ನರಸಿಂಹರೆಡ್ಡಿ ಗೌಡ, ಐಯ್ಯಪ್ಪ ದೇಸಾಯಿ, ವೈಜಿನಾಥ ಪಾಟೀಲ, ಹರಿಶ್ಚಂದ್ರ, ನಿಂಗಪ್ಪ ನಾಯಕ, ಕಾಂತು ದೊರಿ ಮಂಡಗಳ್ಳಿ ಸೇರಿದಂತೆ ಇತರರಿದ್ದರು.

Share this article