ಬೆಮುಲ್‌ಗೆ ₹13.20 ಕೋಟಿ ಲಾಭ

KannadaprabhaNewsNetwork |  
Published : Apr 16, 2025, 12:44 AM IST
ಬೆಮುಲ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು | Kannada Prabha

ಸಾರಾಂಶ

ಬೆಳಗಾವಿ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ತಮ್ಮ ಒಂದು ವರ್ಷದ ಅಧಿಕಾರವಧಿಯಲ್ಲಿ ₹13.20 ಕೋಟಿ ಲಾಭಗಳಿಸುವ ಮೂಲಕ ನಿರೀಕ್ಷೆಗೂ ಮೀರಿದ ಸಾಧನೆ ಮಾಡಿದೆ ಎಂದು ಬೆಮುಲ್‌ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಬೆಳಗಾವಿ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ತಮ್ಮ ಒಂದು ವರ್ಷದ ಅಧಿಕಾರವಧಿಯಲ್ಲಿ ₹13.20 ಕೋಟಿ ಲಾಭಗಳಿಸುವ ಮೂಲಕ ನಿರೀಕ್ಷೆಗೂ ಮೀರಿದ ಸಾಧನೆ ಮಾಡಿದೆ ಎಂದು ಬೆಮುಲ್‌ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಬಾರಿ ಒಕ್ಕೂಟವು ₹68 ಲಕ್ಷ ಲಾಭ ಹೊಂದಿತ್ತು. ಆದರೆ, ಈ ಬಾರಿ ₹13.20 ಕೋಟಿ ಲಾಭಗಳಿಸಿದೆ. ಇದಕ್ಕೆ ಭ್ರಷ್ಟಾಚಾರ ರಹಿತ ಆಡಳಿತ ನೀಡಿರುವುದು, ವಾರ್ಷಿಕ ಸಾಮಾನ್ಯ ಸಭೆಗೆ ಶೂನ್ಯ ನಿಧಿ ಬಳಕೆ ಮಾಡಿರುವುದು, ಆಡಳಿತ ಮಂಡಳಿ ಸದಸ್ಯರು ಟಿಎ, ಡಿಎ ಪಡೆಯದಿರುವುದು ಸೇರಿದಂತೆ ಮತ್ತಿತರ ಸುಧಾರಣಾ ಕ್ರಮಗಳು ಕಾರಣವಾಗಿವೆ ಎಂದರು.ಒಟ್ಟು ₹ 399.50 ಕೋಟಿ ವಹಿವಾಟು ಆಗಿದೆ. ಕಳೆದ ಸಾಲಿನಲ್ಲಿ ₹320.83 ಕೋಟಿ ವಹಿವಾಟು ಆಗಿತ್ತು. ಈ ಮೂಲಕ ಶೇ.24ರಷ್ಟು ಹೆಚ್ಚುವರಿ ಪ್ರಗತಿ ಸಾಧಿಸಲಾಗಿದೆ. ಒಕ್ಕೂಟದ ಇತಿಹಾಸದಲ್ಲೇ ಅತೀ ಹೆಚ್ಚಿನ ವಹಿವಾಟು ಹೊಂದಿ ದಾಖಲೆ ನಿರ್ಮಿಸಿದೆ. ಅಂದಾಜು ₹13.26 ಕೋಟಿ ಲಾಭಾಂಶ ಆಗಿದೆ. ಈ ಮೊತ್ತವನ್ನು ಹಾಲು ಉತ್ಪಾದಕರು, ಸಂಘಗಳು, ಗುತ್ತಿಗೆ ಕಾರ್ಮಿಕರು, ಭದ್ರತಾ ರಕ್ಷಕರ ಶ್ರೇಯೋಭಿವೃದ್ಧಿಗಾಗಿ ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದರು.ವಾರ್ಷಿಕ ಸಾಮಾನ್ಯಸಭೆಗೆ ₹40 ಲಕ್ಷ ವೆಚ್ಚ ಮಾಡಲಾಗುತ್ತಿತ್ತು. ಆಡಳಿತ ಮಂಡಳಿ ಸದಸ್ಯರು ಪಡೆಯದ ಟಿಎ, ಡಿಎ ₹10 ಲಕ್ಷ ಹಣವನ್ನು ರೈತರ ಕಲ್ಯಾಣ ನಿಧಿಗೆ ಪಾವತಿಸಲಾಗಿದೆ ಎಂದ ಅವರು, ಒಕ್ಕೂಟವು ಜಿಲ್ಲೆಯಲ್ಲಿ ಒಟ್ಟು 1002 ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಸ್ಥಾಪಿಸಿದೆ. ಈ ಪೈಕಿ 610 ಹಾಲು ಉತ್ಪಾದಕರ ಸಹಕಾರ ಸಂಘಗಳು ಕಾರ್ಯಾಚರಣೆಯಲ್ಲಿವೆ. ಈ ಪೈಕಿ 160 ಮಹಿಳಾ ಸಂಘಗಳಿವೆ. ಈವರೆಗೆ ಒಟ್ಟು ₹ 622.10 ಲಕ್ಷ ಷೇರು ಬಂಡವಾಳ ಸಂಗ್ರಹಿಸಲಾಗಿದೆ ಎಂದು ಮಾಹಿತಿ ನೀಡಿದರು.ಬೆಳಗಾವಿಯಲ್ಲಿ 1.50 ಲಕ್ಷ ಲೀಟರ್‌ ಸಾಮರ್ಥ್ಯದ ಮುಖ್ಯ ಡೇರಿ, ರಾಮದುರ್ಗ ಮತ್ತು ಅಥಣಿಯಲ್ಲಿ ತಲಾ 30 ಸಾವಿರ ಲೀಟರ್‌ ಸಾಮರ್ಥ್ಯದ ಶೀತಲ ಕೇಂದ್ರಗಳಿವೆ. ರಾಯಬಾಗದಲ್ಲಿ 60 ಸಾವಿರ ಲೀಟರ್‌ ಸಾಮರ್ಥ್ಯದ ಸಂಸ್ಕರಣ ಘಟಕ ಹೊಂದಿದೆ. ಕೇಂದ್ರ ಸರ್ಕಾರದ ಶುದ್ಧ ಹಾಲು ಉತ್ಪಾದನೆ ಮತ್ತು ವಿಶೇಷ ಪ್ಯಾಕೇಜ್‌ ಯೋಜನೆಗಳಡಿ ಒಟ್ಟು 39 ಬಿಎಂಸಿ ಘಟಕಗಳನ್ನು ಸ್ಥಾಪಿಸಿದೆ. ಪ್ಲೆಕ್ಸಿ ಪ್ಯಾಕ್‌ ಘಟಕವು ನಿತ್ಯ 80 ಸಾವಿರ ಲೀಟರ್‌ನಷ್ಟು ಹಾಲು ಪ್ಯಾಕಿಂಗ್‌ ಸಾಮರ್ಥ್ಯವನ್ನು ಹೊಂದಿದೆ ಎಂದರು.2024-25ನೇ ಸಾಲಿನಲ್ಲಿ 43 ಸಂಖ್ಯೆ ನೂತನ ಸಂಘಗಳನ್ನು ಸ್ಥಾಪಿಸಿದೆ. ಜಿಲ್ಲೆಯಲ್ಲಿ 610 ಸಂಘಗಳಿವೆ. ನಿತ್ಯ ಸರಾಸರಿ 2.10 ಲಕ್ಷ ಕೆ.ಜಿ. ಹಾಲು ಶೇಖರಿಸಲಾಗುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 22 ರಷ್ಟು ಪ್ರಗತಿ ಹೊಂದಲಾಗಿದೆ. ಪ್ಲೆಕ್ಸಿ ಘಟಕದಿಂದ 80 ಲಕ್ಷ ಲೀಟರ್‌ ಹಾಲನ್ನು ಸ್ಥಳೀಯ ಮತ್ತು ಆಂಧ್ರಪ್ರದೇಶಕ್ಕೆ ಮಾರಾಟ ಮಾಡಲಾಗಿದೆ. ಕಳೆದ ಸಾಲಿನ ಮಾರಾಟಕ್ಕೆ ಹೋಲಿಸಿದರೆ ಶೇ.196 ರಷ್ಟು ಹೆಚ್ಚುವರಿ ಪ್ರಗತಿ ಸಾಧಿಸಲಾಗಿದೆ. 3,80,516 ಲೀಟರ್ ತುಪ್ಪ ಮಾರಾಟ ಮಾಡಲಾಗಿದೆ. 41,12,820 ಲೀಟರ್‌ ಮೊಸರನ್ನು ಮಾರಾಟ ಮಾಡಲಾಗಿದೆ. 17,37,46 ಕೆ.ಜಿ. ಪನೀರ್‌ ಮಾರಾಟ ಮಾಡಲಾಗಿದೆ. 74,245 ಕೆ.ಜಿ. ಕುಂದಾ ಮಾರಾಟ ಮಾಡಲಾಗಿದೆ. ಹೊಸದಾಗಿ 10 ಕೆಜಿ ಬಕೇಟ್‌ ಮೊಸರು ಮಾರಾಟ ಪ್ರಾರಂಭಿಸಲಾಗಿದೆ. ಬೆಳಗಾವಿ ಜಿಲ್ಲೆ ಮತ್ತು ಗೋವಾದ ಮಾರುಕಟ್ಟೆಗೆ ನಿತ್ಯ 50 ರಿಂದ 100 ಬಕೇಟ್‌ ಮೊಸರು ಪ್ಯಾಕಿಂಗ್‌ ಮಾಡಿ ಮಾರಾಟ ಮಾಡಲಾಗುತ್ತಿದೆ ಎಂದರು.ಒಕ್ಕೂಟವು ಮುಂಬೈ ಮಾರುಕಟ್ಟೆಗೆ ಎಮ್ಮೆ ಹಾಲನ್ನು ಬಿಡುಗಡೆ ಮಾಡಿದ್ದು, ನಿತ್ಯ 5 ಸಾವಿರ ಲೀಟರ್‌ ಹಾಲು ಮಾರಾಟ ಮಾಡಲಾಗುತ್ತಿದೆ. ಕಳೆದ ಫೆಬ್ರುವರಿ ತಿಂಗಳಲ್ಲಿ 130 ಎಂಎಲ್‌ ಪ್ಯಾಕ್‌ನ 2.50 ಲಕ್ಷ ಮಜ್ಜಿಗೆ ಪ್ಯಾಕೇಟ್‌ಗಳನ್ನು ಸವದತ್ತಿ ಶ್ರೀ ಯಲ್ಲಮ್ಮ ದೇವಸ್ಥಾನಕ್ಕೆಪೂರೈಸಲಾಗಿದೆ. ಖರ್ಚು ವೆಚ್ಚಗಳಲ್ಲಿ ವಾರ್ಷಿಕ ₹2.52 ಕೋಟಿ ಉಳಿತಾಯ ಮಾಡಲಾಗಿದೆ ಎಂದರು.ಸಂಕೇಶ್ವರ ಬಳಿಯ ರಾಷ್ಟ್ರೀಯ ಹೆದ್ದಾರಿ 4ರ ಬಳಿ ಮೆಗಾ ಡೇರಿ ಸ್ಥಾಪಿಸಲು ಜಾಗವನ್ನು ಗುರುತಿಸಲಾಗಿದ್ದು, ₹ 350 ಕೋಟಿ ವೆಚ್ಚದಲ್ಲಿ ನೂತನ ತಂತ್ರಜ್ಞಾನವುಳ್ಳ ಹೈಟೆಕ್‌ ಮೆಗಾಡೇರಿಯನ್ನು ನಿರ್ಮಿಸಲಾಗುವುದು ಎಂದರು.ಸುದ್ದಿಗೋಷ್ಠಿಯಲ್ಲಿ ಬೆಮುಲ್‌ ವ್ಯವಸ್ಥಾಪಕ ನಿರ್ದೇಶಕ ಡಾ.ಶ್ರೀಕಾಂತ ವಿ.ಎನ್‌. ನಿರ್ದೇಶಕರಾದ ಬಾಬು ಬಸವಂತಪ್ಪ ಕಟ್ಟಿ, ಮಲ್ಲಪ್ಪ ಪಾಟೀಲ, ಕಲ್ಲಪ್ಪ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''