ಬೆಂ.ದಕ್ಷಿಣ ಜಿಲ್ಲೆಯ 5ನೇ ಮುಖ್ಯಮಂತ್ರಿ ಕಿರೀಟ

KannadaprabhaNewsNetwork |  
Published : May 29, 2026, 01:15 AM IST
28ಕೆಆರ್  ಎಂಎನ್  3.ಜೆಪಿಜಿಡಿ.ಕೆ.ಶಿವಕುಮಾರ್   | Kannada Prabha

ಸಾರಾಂಶ

ರಾಮನಗರ: ಕರುನಾಡಿಗೆ ನಾಲ್ವರು ಮುಖ್ಯಮಂತ್ರಿಗಳನ್ನು ಕೊಡುಗೆಯಾಗಿ ನೀಡಿರುವ ಬೆಂಗಳೂರು ದಕ್ಷಿಣ ಜಿಲ್ಲೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮೂಲಕ ಐದನೇ ಬಾರಿಗೆ ಸಿಎಂ ಗಾದಿ ಒಲಿಯುತ್ತಿದೆಯೇ ಎಂಬ ಕುತೂಹಲ ಮೂಡಿದೆ

ರಾಮನಗರ: ಕರುನಾಡಿಗೆ ನಾಲ್ವರು ಮುಖ್ಯಮಂತ್ರಿಗಳನ್ನು ಕೊಡುಗೆಯಾಗಿ ನೀಡಿರುವ ಬೆಂಗಳೂರು ದಕ್ಷಿಣ ಜಿಲ್ಲೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮೂಲಕ ಐದನೇ ಬಾರಿಗೆ ಸಿಎಂ ಗಾದಿ ಒಲಿಯುತ್ತಿದೆಯೇ ಎಂಬ ಕುತೂಹಲ ಮೂಡಿದೆ.

ರಾಜ್ಯದಲ್ಲಿ ಹಲವು ತಿಂಗಳಿಂದ ನಡೆಯುತ್ತಿದ್ದ ನಾಯಕತ್ವ ಬದಲಾವಣೆ ಚರ್ಚೆಗೆ ಕೊನೆಗೂ ಇತಿಶ್ರೀ ಹಾಡಲಾಗಿದೆ. ಸಚಿವರೊಂದಿಗೆ ಬ್ರೇಕ್ ಪಾಸ್ಟ್ ಮೀಟಿಂಗ್ ಮುಗಿದ ಬಳಿಕ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ಮುಂದಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಂಬ ಸಂದೇಶ ನೀಡಿದ್ದಾರೆ.

ಡಿಕೆಶಿ ಡೈನಾಮಿಕ್ ಲೀಡರ್ :

8ನೇ ಬಾರಿ ವಿಧಾನಸಭೆ ಪ್ರವೇಶಿಸಿರುವ ಡಿ.ಕೆ.ಶಿವಕುಮಾರ್ ಸೋಲಿಲ್ಲದ ಸರದಾರ. ಕಾಂಗ್ರೆಸ್ ಪಕ್ಷದಲ್ಲಿ ಡೈನಾಮಿಕ್ ಲೀಡರ್ ಎಂದೇ ಬಿಂಬಿತಗೊಂಡವರು. ರಾಜ್ಯದಲ್ಲಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರಲು ಹೆಚ್ಚಾಗಿ ಶ್ರಮಿಸಿದವರಲ್ಲಿ ಒಬ್ಬರಾಗಿದ್ದ ಡಿಕೆಶಿ ಮುಖ್ಯಮಂತ್ರಿ ಹುದ್ದೆಗಾಗಿ ಹಕ್ಕು ಪ್ರತಿಪಾದನೆ ಮಾಡುತ್ತಲೇ ಬಂದಿದ್ದರು.

ಈಗ ಕಾಂಗ್ರೆಸ್ ಹೈಕಮಾಂಡ್ ಡಿ.ಕೆ.ಶಿವಕುಮಾರ್ ಅವರಿಗೆ ಅವಕಾಶ ನೀಡುವ ಮೂಲಕ ಬೆಂಗಳೂರು ದಕ್ಷಿಣ ( ರಾಮನಗರ) ಜಿಲ್ಲೆಯಿಂದ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಗಾದಿ ಅಲಂಕರಿಸಿದವರಲ್ಲಿ ಎರಡನೇ ನಾಯಕ ಎಂಬ ಪ್ರಶಂಸೆಗೆ ಪಾತ್ರರಾಗಲಿದ್ದಾರೆ. ಈ ಹಿಂದೆ ಕಾಂಗ್ರೆಸ್ ಸರ್ಕಾರದಲ್ಲಿ ಕೆಂಗಲ್ ಹನುಮಂತಯ್ಯ ಮುಖ್ಯಮಂತ್ರಿಯಾಗಿದ್ದರು. ಆನಂತರ ಜನತಾ ಪಕ್ಷ ಸರ್ಕಾರದಲ್ಲಿ ರಾಮಕೃಷ್ಣ ಹೆಗಡೆ, ಜನತಾದಳ ಸರ್ಕಾರದಲ್ಲಿ ಎಚ್.ಡಿ.ದೇವೇಗೌಡ ಹಾಗೂ ಜೆಡಿಎಸ್-ಬಿಜೆಪಿ, ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರಗಳಲ್ಲಿ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಗಳಾಗಿ ಆಡಳಿತ ನಡೆಸಿದ್ದರು.

ಕನಕಪುರಕ್ಕೆ 2ನೇ ಬಾರಿ ಸಿಎಂ ಹುದ್ದೆ ಒಲಿದಂತೆ:

ವಿಧಾನಸೌಧದ ನಿರ್ಮಾತೃ ಮಾಜಿ ಸಿಎಂ ಕೆಂಗಲ್ ಹನುಮಂತಯ್ಯ ಮೂಲತಃ ರಾಮನಗರದವರು. 1952 ಮತ್ತು 1957ರ ಚುನಾವಣೆಗಳಲ್ಲಿ ರಾಮನಗರ ಕ್ಷೇತ್ರದಿಂದ ಕೆಂಗಲ್ ಆಯ್ಕೆಯಾಗಿದ್ದರು. 1952ರ ಮೊದಲ ವಿಧಾನಸಭೆಯಲ್ಲಿ ಮೈಸೂರು ರಾಜ್ಯದ ಪ್ರಭಾವಿ ನಾಯಕರಾಗಿದ್ದ ಕೆಂಗಲ್ ಅವರಿಗೆ ಮುಖ್ಯಮಂತ್ರಿ ಪದವಿ ಒಲಿದು 4 ವರ್ಷ 5 ತಿಂಗಳು ಆಡಳಿತ ನಡೆಸಿದ್ದರು.

1983ರಲ್ಲಿ ರಾಜ್ಯದಲ್ಲಿ ಮೊಟ್ಟದ ಮೊದಲ ಬಾರಿಗೆ ರಾಮಕೃಷ್ಣ ಹೆಗಡೆ ನೇತೃತ್ವದಲ್ಲಿ ಕಾಂಗ್ರೆಸ್ಸೇತರ ಸರ್ಕಾರ ಅಧಿಕಾರಕ್ಕೆ ಬಂದಿತು. ಬಿಜೆಪಿ ಬೆಂಬಲದೊಂದಿಗೆ ಅಧಿಕಾರಕ್ಕೆ ಬಂದ ಜನತಾಪಕ್ಷದ ಸರ್ಕಾರದಲ್ಲಿ ರಾಮಕೃಷ್ಣ ಹೆಗಡೆ ಅವರಿಗೆ ಮುಖ್ಯಮಂತ್ರಿ ಹುದ್ದೆ ಒಲಿದಿತ್ತು. ಆದರೆ, ಹೆಗಡೆಯವರು ಉಭಯ ಸದನಗಳ ಸದಸ್ಯರಾಗಿರಲಿಲ್ಲ.

ಆರು ತಿಂಗಳೊಳಗೆ ವಿಧಾನಸಭೆ ಅಥವಾ ವಿಧಾನ ಪರಿಷತ್ ಸದಸ್ಯರಾಗಬೇಕಿತ್ತು. ಅವರಿಗಾಗಿ ಕನಕಪುರದಿಂದ ಚುನಾಯಿತರಾಗಿದ್ದ ಪಿ.ಜಿ.ಆರ್.ಸಿಂಧ್ಯಾ ಸ್ಥಾನ ತೆರವು ಮಾಡಿಕೊಟ್ಟರು. ಕನಕಪುರದಲ್ಲಿ ನಡೆದ ಮರು ಚುನಾವಣೆಯಲ್ಲಿ ಬನ್ನಿಮಕೋಡ್ಲು ಲಿಂಗೇಗೌಡ ಎದುರು ರಾಮಕೃಷ್ಣ ಹೆಗಡೆ ಗೆಲುವು ಸಾಧಿಸಿ ಸದನ ಸದಸ್ಯರಾದರು.

7ನೇ ವಿಧಾನಸಭೆಯಲ್ಲಿ ಹೆಗಡೆ ಅವರು 10ನೇ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದರು. ಈಗ ಶಿವಕುಮಾರ್ ಅವಕಾಶ ದೊರೆತೆರೆ 16ನೇ ವಿಧಾನಸಭೆಯಲ್ಲಿ 24ನೇ ಮುಖ್ಯಮಂತ್ರಿ ಆದಂತಾಗುತ್ತದೆ. ಇಷ್ಟೇ ಅಲ್ಲದೆ, ಕನಕಪುರ ಕ್ಷೇತ್ರಕ್ಕೆ 2ನೇ ಬಾರಿ ಸಿಎಂ ಹುದ್ದೆ ಲಭಿಸಿದಂತಾಗುತ್ತದೆ.

ಗೌಡರ ಕುಟುಂಬಕ್ಕೆ 3 ಬಾರಿ ಅವಕಾಶ:

1994ರ ಚುನಾವಣೆಯಲ್ಲಿ ರಾಜ್ಯದಲ್ಲಿ ಜನತಾ ದಳ ಪರ ಅಲೆ ಇತ್ತು. ಆಗ ಪಕ್ಷದ ಚುಕ್ಕಾಣಿ ಹಿಡಿದಿದ್ದ ದೇವೇಗೌಡ ಅವರೇ ಮುಂದಿನ ಸಿಎಂ ಎನ್ನುವ ಕೂಗು ಎದ್ದಿತ್ತು. ಆ ವೇಳೆ ರಾಮನಗರದಿಂದ ಸ್ಪರ್ಧಿಸುವಂತೆ ಸ್ಥಳೀಯ ಮುಖಂಡರು ದುಂಬಾಲು ಬಿದ್ದಿದ್ದರು. ಸ್ವಕ್ಷೇತ್ರ ಹೊಳೆನರಸೀಪುರ ಮತ್ತು ರಾಮನಗರ ಪೈಕಿ ಯಾವ ಕ್ಷೇತ್ರದಿಂದ ಸ್ಪರ್ಧಿಬೇಕೆಂಬ ಗೊಂದಲದಲ್ಲಿದ್ದರು.

ಆ ಚುನಾವಣೆಯಲ್ಲಿ ರಾಮನಗರದಿಂದಲೇ ಗೆದ್ದ ದೇವೇಗೌಡರು ಮುಖ್ಯಮಂತ್ರಿ ಹುದ್ದೆಗೇರಿ 17 ತಿಂಗಳು ಆಡಳಿತ ನಡೆಸಿದರು. ಇಷ್ಟು ಮಾತ್ರವಲ್ಲದೆ, ರಾಮನಗರ ಪ್ರತಿನಿಯಾಗಿದ್ದಾಗಲೇ ಪ್ರಧಾನಮಂತ್ರಿ ಹುದ್ದೆಯೂ ಒಲಿಯಿತು. ಪ್ರಧಾನಿಯಾದ ನಾಲ್ಕು ತಿಂಗಳ ನಂತರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

2004ರಲ್ಲಿ ರಾಮನಗರ ಕ್ಷೇತ್ರದಿಂದ ವಿಧಾನಸಭೆಗೆ ಮೊದಲ ಬಾರಿ ಪ್ರವೇಶಿಸಿದ ಕುಮಾರಸ್ವಾಮಿ ಜೆಡಿಎಸ್ - ಬಿಜೆಪಿ ಮೈತ್ರಿ ಸರ್ಕಾರದಲ್ಲಿ 20 ತಿಂಗಳು ಮುಖ್ಯಮಂತ್ರಿಯಾದರು. ಆನಂತರ 2018ರಲ್ಲಿ ಜೆಡಿಎಸ್ - ಕಾಂಗ್ರೆಸ್ ದೋಸ್ತಿ ಸರ್ಕಾರದಲ್ಲಿ 2ನೇ ಬಾರಿ ಕೇವಲ 14 ತಿಂಗಳು ಸಿಎಂ ಹುದ್ದೆ ನಿಭಾಯಿಸಿದ್ದರು.

ಈಗ 2026ರಲ್ಲಿ ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಆಗುವ ಯೋಗ ಪ್ರಾಪ್ತಿಯಾಗುತ್ತಿದೆ.

ಬಾಕ್ಸ್ ................

ಕಾಂಗ್ರೆಸ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಿ ಯಾವಾಗ ಪ್ರತಿಜ್ಞಾವಿಧಿ ಸ್ವೀಕಾರ ಮಾಡಲಿದ್ದಾರೆ ಎಂದು ಡಿಕೆ ಅಭಿಮಾನಿಗಳು ಕಾತುರರಾಗಿದ್ದಾರೆ.

ಈಗ 64 ವರ್ಷ ವಯಸ್ಸಿನ ಡಿ.ಕೆ.ಶಿವಕುಮಾರ್ (ಸಾತನೂರು ಕ್ಷೇತ್ರದಿಂದ 3 ಮತ್ತು ಕನಕಪುರ ಕ್ಷೇತ್ರ 5) 8ನೇ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ವರಿಷ್ಠರ ಆಶ್ವಾಸನೆ ಹಾಗೂ ಪಕ್ಷದ ಹಿರಿಯ ನಾಯಕ ಎಂಬ ಕಾರಣಕ್ಕೆ ಸಿಎಂ ಹುದ್ದೆ ಸಿಗುವ ನಿರೀಕ್ಷೆಯಲ್ಲಿ ಡಿಕೆಶಿ ಕೂಡ ಇದ್ದಾರೆ.

ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿಯೇ 2023ರ ವಿಧಾನಸಭಾ ಚುನಾವಣೆ ಎದುರಿಸಿದ್ದ ಕಾಂಗ್ರೆಸ್ 136 ಸ್ಥಾನಗಳಲ್ಲಿ ಜಯಗಳಿಸಿ ಬಹುಮತ ಪಡೆದಿತ್ತು. ಕಾಂಗ್ರೆಸ್‌ನಲ್ಲಿ ಕೆಪಿಸಿಸಿ ಅಧ್ಯಕ್ಷರಾದವರೇ ಮುಖ್ಯಮಂತ್ರಿ ಆಗುವುದು ಸಂಪ್ರದಾಯ. ಹೀಗಾಗಿ ಡಿ.ಕೆ.ಶಿವಕುಮಾರ್ ಸಿಎಂ ಹುದ್ದೆಗೆ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ, ಪಕ್ಷದ ವರಿಷ್ಠರು ಅಧಿಕಾರ ಹಂಚಿಕೆ ಸೂತ್ರ ಅನುಸರಿಸಿ ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಮತ್ತು ಡಿ.ಕೆ.ಶಿವಕುಮಾರ್ ಅ‍ವರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡಿತ್ತು. ಒಪ್ಪಂದದಂತೆ ಸಿದ್ದರಾಮಯ್ಯ ರಾಜೀನಾಮೆ ಸಲ್ಲಿಸಿದ್ದು, ಡಿ.ಕೆ.ಶಿವಕುಮಾರ್ ಅವರಿಗೆ ಸಿಎಂ ಅದೃಷ್ಟ ಒಲಿದಿದೆ.

28ಕೆಆರ್ ಎಂಎನ್ 3.ಜೆಪಿಜಿ

ಡಿ.ಕೆ.ಶಿವಕುಮಾರ್

(ಕೆಳಗಿನವರ ಮಗ್‌ಶಾಟ್‌ಗಳನ್ನು ಬಳಸಿ ಸರ್‌)

1.ಕೆಂಗಲ್‌ ಹನುಮಂತಯ್ಯಮ

2.ರಾಮಕೃಷ್ಣಹೆಗಡೆ

3.ಎಚ್‌.ಡಿ.ದೇವೇಗೌಡ

4.ಎಚ್‌.ಡಿ.ಕುಮಾರಸ್ವಾಮಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಂಪುಟ ರಚನೆಗೆ ಕಸರತ್ತು-20 ರಿಂದ 25 ಸಚಿವರಿಗೆ ಕೊಕ್
ಇಂದು ಹೊಸ ಸಿಎಂ ಆಯ್ಕೆ