ಕಂಪ್ಲಿ: ಇಲ್ಲಿನ ವಿಜಯನಗರದ ಬೆನಕನ ಕಾಲುವೆಗೆ ನಿರ್ಮಾಣಗೊಳ್ಳುತ್ತಿರುವ ಸೇತುವೆ ಕಾಮಗಾರಿ ಸ್ಥಗಿತಗೊಂಡಿರುವುದರಿಂದ ರಸ್ತೆ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ತುರ್ತಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ರೈತ ಸಂಘದ ಪದಾಧಿಕಾರಿಗಳು ಹಾಗೂ ಪಟ್ಟಣದ ನಾಗರಿಕರು ಗುರುವಾರ ಸ್ಥಳಕ್ಕೆ ಭೇಟಿ ನೀಡಿ ಒತ್ತಾಯಿಸಿದರು.2026ರ ಫೆಬ್ರವರಿಯಲ್ಲಿ ವಿಜಯನಗರ (ಬೆನಕನ) ಕಾಲುವೆಗೆ ಹೊಸ ಸೇತುವೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಆರಂಭದಲ್ಲಿ ವೇಗವಾಗಿ ಸಾಗುತ್ತಿದ್ದ ಕಾಮಗಾರಿ, ಸೇತುವೆ ಬಳಿಯ ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನದ ಪರಿಸರಕ್ಕೆ ಅಡ್ಡಿಯಾಗುತ್ತಿದೆ ಎಂಬ ಕಾರಣದಿಂದ ವಿವಾದಕ್ಕೆ ತುತ್ತಾಯಿತು. ದೇವಸ್ಥಾನ ಸಮಿತಿ ಸದಸ್ಯರು, ಸದ್ಭಕ್ತರು ಹಾಗೂ ಸ್ಥಳೀಯರು ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಆಗ್ರಹಿಸಿದ್ದರಿಂದ ನಿರ್ಮಾಣ ಕಾರ್ಯ ಮಧ್ಯದಲ್ಲೇ ನಿಲ್ಲಿಸಲಾಯಿತು.ಸೇತುವೆ ಕಾಮಗಾರಿ ನಡೆಯುತ್ತಿದ್ದ ಸ್ಥಳದ ಪಕ್ಕದಿಂದ ಗಂಗಾವತಿಗೆ ಸಂಪರ್ಕ ಕಲ್ಪಿಸಲು ತಾತ್ಕಾಲಿಕವಾಗಿ ಮಣ್ಣು ಹಾಸಿ ರಸ್ತೆ ನಿರ್ಮಿಸಲಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಮಣ್ಣು ಸಡಿಲಗೊಂಡ ಪರಿಣಾಮ ಭಾರವಾದ ವಾಹನಗಳ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ. ಬುಧವಾರ ಸರಕು ತುಂಬಿದ ಲಾರಿಗಳ ಚಕ್ರಗಳು ಮಣ್ಣಿನಲ್ಲಿ ಹೂತು ಹೋಗಿ, ಟ್ರಾಕ್ಟರ್, ಲಾರಿ, ದ್ವಿಚಕ್ರ ಹಾಗೂ ಇತರ ವಾಹನಗಳ ಸಂಚಾರದಲ್ಲಿ ಸಮಸ್ಯೆ ಉಂಟಾಗಿ ವಾಹನ ಸವಾರರು ಸಾಕಷ್ಟು ತೊಂದರೆ ಅನುಭವಿಸಿದರು.ಸ್ಥಳಕ್ಕೆ ಭೇಟಿ ನೀಡಿದ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಬಿ.ವಿ. ಗೌಡ ಕಾಮಗಾರಿ ಪರಿಶೀಲಿಸಿ ಮಾತನಾಡಿ, ಪ್ರಸ್ತುತ ರೂಪದಲ್ಲಿ ನಡೆಯುತ್ತಿರುವ ಸೇತುವೆ ನಿರ್ಮಾಣದಿಂದ ದೇವಸ್ಥಾನದ ಪರಿಸರಕ್ಕೂ, ಮಾಗಾಣಿ ರಸ್ತೆಯ ಸಂಚಾರಕ್ಕೂ ಅಡಚಣೆ ಉಂಟಾಗುತ್ತಿದೆ. ಸೇತುವೆಯನ್ನು ದೇವಸ್ಥಾನದಿಂದ ಸ್ವಲ್ಪ ದೂರದಲ್ಲಿ ನಿರ್ಮಿಸುವ ಮೂಲಕ ಭಕ್ತರ ಭಾವನೆಗಳಿಗೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಬೇಕು. ಜೊತೆಗೆ ದೇವಸ್ಥಾನದ ಪಕ್ಕದಿಂದ ಸಾಗುವ ಮಾಗಾಣಿ ರಸ್ತೆಯನ್ನು ಸಮರ್ಪಕವಾಗಿ ಅಭಿವೃದ್ಧಿಪಡಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.ಈ ವೇಳೆ ರಾಜಶೇಖರಗೌಡ, ಮಣ್ಣೂರು ನವೀನ್, ಎನ್.ಎಂ. ಪತ್ರಯ್ಯಸ್ವಾಮಿ, ಗೊರ್ತಿ ಶ್ರೀನಿವಾಸ್, ಭಾಸ್ಕರ್, ಯಂಕಾರೆಡ್ಡಿ, ಬಿ. ಈರಪ್ಪ ಸೇರಿದಂತೆ ಹಲವು ಮುಖಂಡರು ಹಾಗೂ ಸ್ಥಳೀಯರು ಹಾಜರಿದ್ದರು.ಇದಕ್ಕೆ ಪ್ರತಿಕ್ರಿಯಿಸಿದ ಪಿಡಬ್ಲ್ಯುಡಿ ಸಹಾಯಕ ಇಂಜಿನಿಯರ್ ಆನಂದ್ ಪೆಮ್ಮಾರ್ ಸ್ಥಳ ಪರಿಶೀಲನೆ ನಡೆಸಿ, ದೇವಸ್ಥಾನದ ಪರಿಸರಕ್ಕೆ ಯಾವುದೇ ಹಾನಿಯಾಗದಂತೆ ಅಗತ್ಯ ತಿದ್ದುಪಡಿ ಕ್ರಮಗಳನ್ನು ಕೈಗೊಂಡು, ಸೇತುವೆ ಕಾಮಗಾರಿಯನ್ನು ಮುಂದಿನ 15ರಿಂದ 20 ದಿನಗಳಲ್ಲಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.