ಬೆನಕನಹಳ್ಳಿ ಊರವರಿಗೆ ಬಹಿರ್ದೇಸೆಗೂ ಜಾಗವಿಲ್ಲ!

KannadaprabhaNewsNetwork | Published : Sep 2, 2024 2:04 AM

ಸಾರಾಂಶ

ಊರ ಮೇಲ್ಗಡೆ ಇಲ್ಲಿ ಭಾರಿ ನಾಲಾ ಇದೆ. ಮುಲ್ಲಾಮಾರಿ ಹೆಚ್ಚುವರಿ ನೀರು ಈ ನಾಲಾಕ್ಕೆ ಸೇರುತ್ತವೆ. ಇದಲ್ಲದೆ ಗಡಿಕೇಶ್ವರ ಸೇರಿದ್ಹಂಗ ಸುತ್ತಲಿನ ನಾಲ್ಕಾರು ಊರಿನ ಮಳಿ ನೀರು ಇದೇ ನಾಲಾಗುಂಟ ಸೇರಿ ಹರ್ದು ಹೋಗೇಬೇಕು. ಆದ್ರ ಈ ನಾಲಾ ಬೆನಕನಳ್ಳಿ ಊರ ಮಂದಿಗೆ ಕಂಟಕವಾಗಿದೆ.

ಶೇಷಮೂರ್ತಿ ಅವಧಾನಿ

ಕನ್ನಡಪ್ರಭ ವಾರ್ತೆ ಕಲಬುರಗಿ

ಬಹಿರ್ದೆಸೆಗೆ ಹೋಗೋಣಂತ ಮನಿ ಚಿಲ್ಕ ತೆಗ್ದು ಹೊರಗ ಬಂದ್ರ ಮನಿ ಮುಂದೆ ಎಡ್ಡು ಗೇಣ ನೀರು, ಅರೆ ಇದೇನಿದು ಅಂತ ಹಿಂದ ಹಿತ್ತಲ ಬಾಕ್ಲಾ ತೆಗ್ದು ಹಗೋಣಂದ್ರ ಅಲ್ಲಿ ಮೊಳಕಾಲ ಮಟಾ ನೀರು!

ಇಟ್ಯಾಕ ನೀರಂತ ಬ್ಯಾಟರಿ ಹಾಕಿ ನಡಿದ್ರ ಎಲ್ಲಿ ನೋಡ್ತಿ ಅಲ್ಲಿವರೆಗೂ ನೀರೇನೇರು, ಓಣ್ಯಾಗೆಲ್ಲಾ ನೀರೇ ನೀರು, ಕವನಳ್ಳ್ಯಾಗ ಈ ಪರಿ ಮಳಿ ನೀರ ಊರಾಗೆ ಹೊಕ್ಕಿತ್ತು, ತ್ಯಂಬ್ಗಿ ತಗೊಂಡು ಬಲ್ಕಡಿಗೆ ಹೋಗೋರಿಗೂ ಜಾಗ ಇಲ್ದಂಗ ಆಗ್ಯದ..!

ಹುಬ್ಬ ಮಳಿ ಬಿರುಸಿನಿಂದ 2 ದಿನ ಸುರಿದಾದ್ಮೇಲೆ ಬೆನಕನಹಳ್ಳಿ ಊರವರು ಏನೊಂದೂ ತಿಳಿವಲ್ತು ಎಂದು ಗೋಳಾಡುತ್ತಿದ್ದಾರೆ. ಬೆನಕನಳ್ಳಿ ಮಂದಿ ಹುಬ್ಬ ಮಳಿ ಹೊಡೆತಕ್ಕ ಅಕ್ಷರಶಃ ಹೌ ಹಾರಿದ್ದಾರೆ.

ಹೀಂಗತ ಊರಿನ ಅನೇಕರು ಕನ್ನಡಪ್ರಭ ಜೊತೆ ಮಾತನಾಡುತ್ತ ತಮ್ಮ ಗೋಳು ಹೇಳಿಕೊಂಡರು. 100 ಮನೆಗಳ ಈ ಪುಟ್ಟ ಗ್ರಾಮದಲ್ಲಿ ಶನಿವಾರ ಇಡೀ ರಾತ್ರಿ ಬಿರುಸಿನ ಮಳೆ ಸುರಿದಿತ್ತು. ಭಾನುವಾರ ಬೆಳಗ್ಗೆ ಊರವರು ಬಹಿರ್ದೇಸೆಗೂ ಹೋಗದಂತಾಗಿ ಪರದಾಡಿದರು.

ಊರ ಮೇಲ್ಗಡೆ ಇಲ್ಲಿ ಭಾರಿ ನಾಲಾ ಇದೆ. ಮುಲ್ಲಾಮಾರಿ ಹೆಚ್ಚುವರಿ ನೀರು ಈ ನಾಲಾಕ್ಕೆ ಸೇರುತ್ತವೆ. ಇದಲ್ಲದೆ ಗಡಿಕೇಶ್ವರ ಸೇರಿದ್ಹಂಗ ಸುತ್ತಲಿನ ನಾಲ್ಕಾರು ಊರಿನ ಮಳಿ ನೀರು ಇದೇ ನಾಲಾಗುಂಟ ಸೇರಿ ಹರ್ದು ಹೋಗೇಬೇಕು. ಆದ್ರ ಈ ನಾಲಾ ಬೆನಕನಳ್ಳಿ ಊರ ಮಂದಿಗೆ ಕಂಟಕವಾಗಿದೆ.

ಮಳಿ ಜೋರಾಗಿ ಬಂದಾಗೆಲ್ಲಾ ಇಲಲಿನ ಮಂದಿಗಿ ಭರಿ ತೊಂದರೆ ತಪ್ಪಿದ್ದಲ್ಲ. ಛರಗಿ ಹಿಡ್ಕೊಂಡು ಅತ್ತಿತ್ತ ಓಡಾಡೋದೂ ತಪ್ಪಿಲ್ಲ. ಯಾಕಂದ್ರ ಮಳಿ ನೀರೇ ಎಲ್ಲಿ ನೋಡಿದರಲ್ಲಿ ಶೇಖರಗೊಂಡು ಊರವರಿಗೇ ಸವಾಲು ಒಡ್ಡಿರ್ತದೆ.

ಭಾನುವಾರವೂ ಊರಲ್ಲಿ ಇದೇ ಆಗಿದ್ದು, ಮಳಿ ನೀರು ಊರಿನ ಎಲ್ಲಾ ಓಣಿಗೋಳ್ದಾಗ 2 ರಿಂದ 3 ಅಡಿ, ಇನ್ನೂ ಕೆಲವೆಡೆ 5 ಅಡಿವರೆಗೂ ಶೇಖರಗೊಂಡು ಸವಾಲು ಹಾಕಿದ್ದರಿಂದ ಊರವರೆಲ್ಲಾರೂ ಇದೇನ್‌ ಗೋಳು ಬಂತಪ್ಪೋ ಎಂದು ಪರದಾಡಿದರು.

ಊರ ಮೇಲಿರೋ ನಾಲಾ ಹರಿವು ಬೇರೆಡೆ ತಿರಿಗಿಸೋವರೆಗೂ ಬೆನಕನಹಳ್ಳಿ ಗೋಳಿಗೆ ಪರಿಹಾವಲಿಲ್ಲ ಅನ್ನೋದು ಊರವರ ಮಾತು. ಜನನಾಯಕರು ಈ ಬಗ್ಗೆ ಕ್ಯಾರೆ ಎನ್ನುತ್ತಿಲ್ಲ. ಸುಲೇಪೇಟ್‌ ಠಾಣೆ ವ್ಯಾಪ್ಯಿಯ ಕೆರಳ್ಳಿ ಪಂಚಾಯ್ತಿ ವ್ಯಾಪ್ತಿಯ ಈ ಊರಿನ ನಾಲಾ ಬೇರೆಡೆ ತಿರುಗಿಸಲು ಇನ್ನಾದರೂ ಆಡಳಿತದವರು ಮುಂದಾುವರೆ? ಎಂಬುದೇ ಯಕ್ಷ ಪ್ರಶ್ನೆಯಾಗಿದೆ.

ದಸ್ತಾಪೂರ ಜಲಾವೃತ- ಹೆಚ್ಚಿದ ಆತಂಕ

ಕಮಲಾಪುರ ತಾಲೂಕಿನ ದಸ್ತಾಪೂರದಲ್ಲಿ ಮಳೆ ನೀರಿನಿಂದಾಗಿ ಇಡೀ ಊರೇ ಆತಂಕದಲ್ಲಿ ಮುಳುಗಿದೆ. ಊರಲ್ಲಿ ಮಳೆ ನೀರು ಎಲ್ಲೆದರಲ್ಲಿ ಹರಿಯುತ್ತಿದ. ಜನರ ಬದುಕೇ ಮೂರಾಬಟ್ಟೆ ಮಾಡಿದೆ. ಊರವರಿಗೆ ಮುಖ್ಯವಾಗಿ ರಾಜ್ಯ ಹೆದ್ದಾರಿ ಸಂಪರ್ಕವನ್ನೇ ಮಳೆ ನೀರು ಕಡಿತ ಮಾಡಿದೆ. ಊರಿನ ಸೇತುವೆ ಮಳೆ ನೀರಿಗೆ ಮುಳುಗಿದೆ. ಗಂಡೋರಿ ನಾಲಾ, ಬೊಣ್ಣೆತೊರಾ ನೀರು ಇಲ್ಲಿ ಸೇುವೆ ಮೇಲೆ ಹರಯುತ್ತಿದೆ. ಹೀಗಾಗಿ ಊರಲ್ಲಿ ಜನ ಸಂಪರ್ಕ ಕಡಿತವಾಗಿ ಹೌ ಹಾರಿದ್ದಾರೆ.

ಊರೆಲ್ಲಾ ನೀರುಮಯ, ಕಮಲಾಪುರ ದಸ್ತಾಪುರ ಶಾಲೆ ಜಲಾವೃತವಾಗಿವೆ, ದಸ್ತಾಪುರ ಹಳ್ಳ ತುಂಬಿ ಹರಿಯುತ್ತಿದ್ದು ಗ್ರಾಮದ ಮುಖ್ಯರಸ್ತೆ ಸಂಪರ್ಕ ಕಡಿತಗೊಂಡಿದ್ದರಿಂದ ಆತಂಕದಲ್ಲಿ ಗ್ರಾಮದ ಜನರು ಮುಳುಗಿದ್ದಾರೆ. ಜೀವನಾವಶ್ಯಕ ಸಾಮಗ್ರಿ ಖರೀದಿ, ನಿತ್ಯದ ದಿನರಿ ಮುಂದೆಲ್ಲಾ ಹೇಗೆಂಬ ಆತಂಕ ಇವರದ್ದಾಗಿದೆ, ಇನ್ನೂ 2 ದಿನ ಮಳೆ ಇದೆ ಎಂಬುದನ್ನರಿತು ಇವರೆಲ್ಲರೂ ಆತಂಕದಲ್ಲಿದ್ದಾರೆ.

Share this article