ಗಣಿಜಿಲ್ಲೆ ಬಳ್ಳಾರಿಯಲ್ಲಿ ಬೆಣಕಿನ ಹಬ್ಬದ ಸಂಭ್ರಮ; ವಸ್ತುಗಳ ಖರೀದಿ ಜೋರು

KannadaprabhaNewsNetwork |  
Published : Oct 20, 2025, 01:03 AM IST
ಬಳ್ಳಾರಿಯ ಶ್ರೀಕನಕ ದುರ್ಗಮ್ಮ ದೇವಸ್ಥಾನ ಬಳಿ ಭಾನುವಾರ ಸಂಜೆ ಮಹಿಳೆಯರು ಮಣ್ಣಿನ ದೀಪಗಳ ಖರೀದಿಯಲ್ಲಿ ತೊಡಗಿದ್ದರು.  | Kannada Prabha

ಸಾರಾಂಶ

ಗಣಿಜಿಲ್ಲೆ ಬಳ್ಳಾರಿಯಲ್ಲಿ ದೀಪಾವಳಿ ಸಂಭ್ರಮ ಕಳೆಕಟ್ಟಿದ್ದು, ವಿವಿಧ ವಸ್ತುಗಳ ಖರೀದಿಯ ಭರಾಟೆ ಕಂಡು ಬಂದಿದೆ.

ಬಳ್ಳಾರಿ: ಗಣಿಜಿಲ್ಲೆ ಬಳ್ಳಾರಿಯಲ್ಲಿ ದೀಪಾವಳಿ ಸಂಭ್ರಮ ಕಳೆಕಟ್ಟಿದ್ದು, ವಿವಿಧ ವಸ್ತುಗಳ ಖರೀದಿಯ ಭರಾಟೆ ಕಂಡು ಬಂದಿದೆ.

ಲಕ್ಷ್ಮಿಪೂಜೆಗೆ ಬೇಕಾದ ಸಾಮಾಗ್ರಿಗಳು, ಹೂವು- ಹಣ್ಣುಗಳು, ಅಲಂಕಾರಿಕ ವಸ್ತುಗಳು, ಮನೆ ಶೃಂಗಾರ ಸಾಮಗ್ರಿಗಳು ಜೊತೆಗೆ ದೀಪಾವಳಿಗೆ ಬೇಕಾದ ತರಹೇವಾರಿ ಮಣ್ಣಿನ ಹಣತೆಗಳು, ಆಕಾಶಬುಟ್ಟಿಗಳು, ಪಟಾಕಿಗಳನ್ನು ಜನರು ಮುಗಿಬಿದ್ದು ಖರೀದಿಸುತ್ತಿದ್ದಾರೆ. ಹೀಗಾಗಿ ದಸರಾ ಬಳಿಕ ಇಲ್ಲಿನ ವಾಣಿಜ್ಯ ಜಾಗಗಳು ಜನರಿಂದ ತುಂಬಿ ತುಳುಕುತ್ತಿವೆ.

ಚಿನ್ನದ ಬೆಲೆ 10 ಗ್ರಾಂ.ಗೆ ಒಂದು ಲಕ್ಷ ದಾಟಿದರೂ ಖರೀದಿಯಲ್ಲಿ ಜನರು ಹಿಂದೆ ಬಿದ್ದಿಲ್ಲ. ದಿನದಿನಕ್ಕೆ ಚಿನ್ನದ ಬೆಲೆ ಏರಿಕೆಯಾಗುತ್ತಿರುವುದರಿಂದ ಚಿನ್ನಪ್ರಿಯರು ಖರೀದಿಗೆ ಹಿಂದೇಟಾಕಿಲ್ಲ. ದೀಪಾವಳಿ ಹಬ್ಬಕ್ಕೆ ಮಹಿಳೆಯರು ಚಿನ್ನ ಖರೀದಿಸುವುದು ಈ ಹಿಂದಿನಿಂದಲೂ ವಾಡಿಕೆ. ಹೀಗಾಗಿ ನಗರದ ಚಿನ್ನಾಭರಣ ಮಳಿಗೆಗಳು ಮಹಿಳೆಯರಿಂದ ತುಂಬಿಕೊಂಡಿದ್ದವು.ಹಬ್ಬದ ಹಿನ್ನೆಲೆಯಲ್ಲಿ ಬೆಳಿಗ್ಗೆ 10 ಗಂಟೆ ಬಳಿಕ ಶುರುಗೊಳ್ಳುತ್ತಿದ್ದ ಚಿನ್ನಾಭರಣ, ಬಟ್ಟೆ ಅಂಗಡಿಗಳು ಕಳೆದ ವಾರದಿಂದ ಬೆಳಿಗ್ಗೆ 9 ಗಂಟೆಯಿಂದಲೇ ವ್ಯಾಪಾರ ವಹಿವಾಟಿನಲ್ಲಿ ನಿರತವಾಗಿವೆ. ದೀಪಾವಳಿಗೆಂದು ವಿವಿಧ ಬ್ರಾಂಡ್‌ಗಳ ಬಟ್ಟೆ ಅಂಗಡಿಗಳು ವಿಶೇಷ ಆಫರ್‌ಗಳು ಹಾಗೂ ಕೊಡುಗೆಗಳನ್ನು ನೀಡಿದ್ದು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದರು. ಸಾಂಪ್ರದಾಯಿಕ ಶೈಲಿಯ ದಿರಿಸುಗಳು, ಆಹಾರೋತ್ಪನ್ನ ಮಳಿಗೆಗಳು ಮತ್ತು ಗೃಹೋಪಯೋಗಿ ವಸ್ತುಗಳ ಖರೀದಿಯಲ್ಲಿ ಜನರು ಹೆಚ್ಚು ಆಸಕ್ತಿಯಿಂದ ತೊಡಗಿದ್ದರು. ಪ್ರಮುಖ ಹಬ್ಬದ ದಿನಗಳಲ್ಲಿ ಸಾಮಾನ್ಯವಾಗಿ ಹೂವು, ಹಣ್ಣುಗಳ ಬೆಲೆ ಏರಿಕೆ ಕಂಡು ಬಂತು. ಆದರೆ, ಖರೀದಿಗೆ ಜನರು ಹಿಂದೇಟು ಹಾಕದೆ, ತಮಗಿಷ್ಟದ ವಸ್ತುಗಳನ್ನು ಖರೀದಿಸಿದರು. ನಗರದ ರೇಡಿಯೋ ಪಾರ್ಕ್‌ನ ಐಟಿಐ ಕಾಲೇಜು ಮೈದಾನದಲ್ಲಿ ಪಟಾಕಿಗಳ ಮಾರಾಟಕ್ಕೆ ಜಿಲ್ಲಾಡಳಿತ ವ್ಯವಸ್ಥೆ ಮಾಡಿದ್ದು, ಮಕ್ಕಳು ಹಾಗೂ ಮಹಿಳೆಯರು ಪಟಾಕಿ ಖರೀದಿಯಲ್ಲಿ ತಲ್ಲೀನರಾಗಿದ್ದರು. ಹಸಿರು ಪಟಾಕಿಗಳ ಜತೆಗೆ ಭಾರೀ ಶಬ್ಧ ಮಾಡುವ, ಮಾಲಿನ್ಯ ಉಂಟು ಮಾಡುವ ಪಟಾಕಿಗಳ ಮಾರಾಟವೂ ಇತ್ತು. ಆದರೆ, ಇದಕ್ಕೆ ಜಿಲ್ಲಾಡಳಿತವಾಗಲೀ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಾಗಲೀ ಯಾವುದೇ ಕ್ರಮ ಕೈಗೊಂಡಂತೆ ಕಂಡು ಬರಲಿಲ್ಲ.

ದೀಪಾವಳಿಗೆ ನಾನಾ ವಸ್ತುಗಳ ಖರೀದಿಗೆಂದು ನಗರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಜನರು ಬಳ್ಳಾರಿಗೆ ಬರುವುದರಿಂದ ಇಲ್ಲಿನ ಬೆಂಗಳೂರು ರಸ್ತೆ, ಬ್ರಾಹ್ಮಣಬೀದಿ, ಗ್ಲಾಸ್ ಬಜಾರ್, ಕಾಳಮ್ಮ ಬೀದಿ, ಶ್ರೀಕನಕ ದುರ್ಗಮ್ಮ ದೇವಸ್ಥಾನ ವೃತ್ತ, ಗ್ರಹಂ ರಸ್ತೆ, ಇನ್‌ಫ್ಯಾಂಟ್ರಿ ರಸ್ತೆ, ಎಲೆ ಬಜಾರ್, ಟ್ಯಾಂಕ್‌ಬಂಡ್ ರಸ್ತೆಗಳು ಜನ ಜಂಗುಳಿ ಕಂಡು ಬಂತು. ವ್ಯಾಪಾರ ವಹಿವಾಟಿಗೆ ಬೆಂಗಳೂರು ರಸ್ತೆಗೆ ಹೆಚ್ಚಿನ ಜನರು ಬರುವುದರಿಂದ ಟ್ರಾಫಿಕ್ ಜಾಮ್ ಆಗಿತ್ತು.

ದ್ವಿಚಕ್ರ ವಾಹನ ಸವಾರರು ಬೆಂಗಳೂರು ರಸ್ತೆ ಹಾಗೂ ಕಾಳಮ್ಮ ರಸ್ತೆಯಲ್ಲಿ ಓಡಾಡಲು ಸಾಧ್ಯವಾಗದೆ ಒದ್ದಾಡಿದರು. ದೀಪಾವಳಿ ವೇಳೆ ವಿದ್ಯುತ್‌ ಅವಘಡವಾಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ಜೆಸ್ಕಾಂ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ವಿದ್ಯುತ್ ಜಾಲ, ಪರಿವರ್ತಕಗಳ ಬಳಿ ಪಟಾಕಿ ಹಚ್ಚಬಾರದು. ಪಟಾಕಿಗಳನ್ನು ಸಿಡಿಸುವಾಗ ಸುರಕ್ಷತೆಗೆ ಗಮನ ಹರಿಸಬೇಕು ಎಂದು ತಿಳಿಸಿದ್ದಾರೆ.

ಇಸ್ಪೀಟ್ ಜೂಜಾಟಕ್ಕೆ ಅವಕಾಶವಿಲ್ಲ: ಹಬ್ಬದ ನೆಪದಲ್ಲಿ ಇಸ್ಪೀಟ್ ಜೂಜಾಟಕ್ಕೆ ಯಾವುದೇ ಅವಕಾಶ ನೀಡುವುದಿಲ್ಲ ಎಂದು ಎಸ್ಪಿ ಡಾ.ಶೋಭಾರಾಣಿ ತಿಳಿಸಿದ್ದಾರೆ.

ಕನ್ನಡಪ್ರಭ ಜೊತೆ ಮಾತನಾಡಿದ ಅವರು, ದೀಪಾವಳಿ ಹಬ್ಬದಲ್ಲಿ ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಇಸ್ಪೀಟ್ ಜೂಜಾಟ ನಡೆಯುತ್ತದೆ ಎಂದು ಗೊತ್ತಾಗಿದೆ. ಆದರೆ, ಇದಕ್ಕೆ ನಾವು ಆಸ್ಪದ ನೀಡುವುದಿಲ್ಲ. ಹಬ್ಬದಲ್ಲಿ ಇಸ್ಪೀಟು ಜೂಜಾಟ ಆಡಲು ಯಾವ ನಿಯಮವಿಲ್ಲ. ಎಲ್ಲ ಠಾಣೆಗಳಿಗೆ ಸೂಚನೆ ನೀಡಿ ಮೈಕ್ ಮೂಲಕ ಜನರಿಗೆ ಸೂಚನೆ ನೀಡಲಾಗಿದೆ. ಒಂದು ವೇಳೆ ಇಸ್ಪೀಟ್ ಜೂಜಾಟ ಕಂಡು ಬಂದರೆ ಕೇಸ್ ಹಾಕಲಾಗುವುದು ಎಂದು ಎಸ್ಪಿ ಶೋಭಾರಾಣಿ ತಿಳಿಸಿದರು.

PREV

Recommended Stories

ಖಾಸಗಿ ಸಂಘಟನೆಗಳಿಗೆ ನಿಷೇಧ ಹೇರಿದ್ದು ಜಗದೀಶ್‌ ಶೆಟ್ಟರ್‌ : ಪರಂ
ಕರ್ನಾಟಕಕ್ಕೆ ₹385 ಕೋಟಿ ಕೇಂದ್ರೀಯ ನೆರೆ ಪರಿಹಾರ