ಧಾರವಾಡ: ಧಾರವಾಡದ ಪರಿಸರ ಆನಂದಿಸಲು ಅಂದು ವರಕವಿ ಡಾ.ದ.ರಾ. ಬೇಂದ್ರೆ ಅವರು "ಬಾರೋ ಸಾಧನಕೇರಿ "ಗೆ ಎಂದು ಮನದುಂಬಿ ಹಾಡಿ, ಪರಿಸರ ಪ್ರಿಯರನ್ನು ಸಾಧನಕೇರಿ ಸೌಂದರ್ಯ ಆಶ್ವಾದಿಸಲು ಆಹ್ವಾನಿಸಿದ್ದರು. ಇಂದು ಅದೇ ಸಾಧನಕೇರಿಗೆ "ಯಾರೂ ಬರಬ್ಯಾಡ್ರೋ " ಎಂದು ಗೋಗರೆಯುವ ಪರಿಸ್ಥಿತಿ ಎದುರಾಗಿದೆ!
ಒಂದು ಬಾರಿ ಸಾಧನಕೇರಿಯ ಬಾರೋ ಸಾಧನಕೇರಿ ಉದ್ಯಾನವನ ಹಾಗೂ ಕೆರೆಗೆ ಭೇಟಿ ನೀಡಿದರೆ, ಬೇಂದ್ರೆ ಅಜ್ಜನ ಹೆಸರಿಗೆ ಕಳಂಕ ತರುವ ವ್ಯವಸ್ಥೆಯೇ ಎದ್ದು ಕಾಣುತ್ತದೆಯೇ ಹೊರತು ಮತ್ತೇನಿಲ್ಲ. ಇತ್ತೀಚಿಗಷ್ಟೇ ₹5 ಕೋಟಿ ವೆಚ್ಚಮಾಡಿ ಕೆರೆ ಹೂಳೆತ್ತಿ, ಉದ್ಯಾನವನ ತುಸು ಸುಧಾರಣೆ ಮಾಡಿದ್ದರೂ ಹೊಳೆಯಲ್ಲಿ ಹುಣಸಿ ಹಣ್ಣು ತೊಳೆದಂತಾಗಿದೆ. ಸಾಧನಕೇರಿ ಮೇಲಿನ ಭಾಗ, ನಾರಾಯಣಪುರ ಹಾಗೂ ಇತರೆ ಪ್ರದೇಶಗಳಿಂದ ಗಟಾರು ನೀರು ಇಳಿಮುಖವಾಗಿ ನೇರವಾಗಿ ಕೆರೆಯ ಒಡಲು ಸೇರುತ್ತಿದ್ದು ಸುತ್ತಲಿನ ಪ್ರದೇಶದಲ್ಲಿ ಗಬ್ಬು ವಾಸನೆ. ಕೆರೆ ತುಂಬೆಲ್ಲಾ ಪ್ಲಾಸ್ಟಿಕ್ ಬಾಟಲ್, ಹರಿದ ಬಟ್ಟೆ, ಚರಂಡಿ ನೀರಿದ್ದು, ಬೇಸಿಗೆಯಲ್ಲಿ ನೀರಿನಲ್ಲಿ ಆಮ್ಲಜನಕ ಕೊರತೆಯಾಗಿ ಸಾವಿರಾರು ಮೀನುಗಳ ಮಾರಣ ಹೋಮ ಆಗಿದ್ದು ಸ್ಮರಿಸಬಹುದು.
ಕೆರೆ ಎದುರಿಗೆ ಇರುವ ಬೇಂದ್ರೆ ಅಜ್ಜನ ಮನೆ ಹಾಗೂ ಭವನ ನೋಡಲು ಬಂದ ಬೇಂದ್ರೆ ಅಭಿಮಾನಿಗಳು ಅಪ್ಪಿ ತಪ್ಪಿ ಉದ್ಯಾನವನ, ಕೆರೆ ಕಡೆಗೆ ಬಂದರೆ, ಅತೀವ ಬೇಸರದ ದೃಶ್ಯಗಳನ್ನು ನೋಡಿ ಮಮ್ಮುಲ ಮರಗುತ್ತಾರೆ.ಕೆಸರು ನೀರಲ್ಲೇ ಬೋಟಿಂಗ್
ಕೆರೆ ಸುತ್ತಲೂ ಉದ್ಯಾನವನ ನಿರ್ಮಿಸಿದ್ದು, ವಾಕಿಂಗ್ ಪಾತ್ ಸಹ ಇದೆ. ಮೂಗು ಮುಚ್ಚಿಕೊಂಡೆ ವಾಯು ವಿಹಾರ ಮಾಡಬೇಕು. ದುರಂತ ಎಂದರೆ, ಸಂಪೂರ್ಣ ಕೊಳಚೆ ನೀರಿನಲ್ಲಿಯೇ ಬೋಟಿಂಗ್ ಮಾಡಬೇಕಾದ ಸ್ಥಿತಿ ಇದೆ. ಆರಂಭದಲ್ಲಿ ಮಕ್ಕಳಿಗೆ ಆಟವಾಡಲು ಕ್ರೀಡಾ ವಲಯ, ರಂಗಭೂಮಿ, ಸಣ್ಣದಾದ ಹೋಟೆಲ್ ಎಲ್ಲವೂ ಇತ್ತು. ಆದರೆ, ನಿರ್ವಹಣೆ ಕೊರತೆಯಿಂದ ಈಗ ಏನೂ ಇಲ್ಲವಾಗಿದೆ. ಹೀಗಾಗಿ, ಈ ಉದ್ಯಾನವನಕ್ಕೆ ಜನರೇ ಬರದಂತಾಗಿದೆ. ನಸುಕಿನಲ್ಲಿ ಯೋಗ ಮಾಡಲು, ವಾಯು ವಿಹಾರಕ್ಕೆ ಜನ ಬಂದು ಹಿಡಿ ಶಾಪ ಹಾಕುತ್ತಲೇ ಹೋಗುತ್ತಾರೆ.
ಪ್ರೀತಿ -ಪ್ರಣಯದ ಸ್ಥಳಹೆಚ್ಚಿನ ಸಂಖ್ಯೆಯಲ್ಲಿ ಜನರು ಬರೋದಿಲ್ಲ ಎಂದರಿತು ಇನ್ನೂ ಗೇಟ್ ತೆರೆಯಲು ಅರ್ಧ ಗಂಟೆ ಮುಂಚೆಯೇ ಯುವ ಪ್ರೇಮಿಗಳ ದಂಡು ಪಾಳಿ ಹಚ್ಚಿರುತ್ತದೆ. ಶಾಲೆ-ಕಾಲೇಜು ತಪ್ಪಿಸಿ ಈ ಉದ್ಯಾನವನಕ್ಕೆ ಬರುವ ಪ್ರೇಮಿಗಳು ಮೈ ಮರೆತು ಪ್ರೀತಿ-ಪ್ರಣಯ ನಡೆಸುತ್ತಾರೆ. ಉದ್ಯಾನವನ ಪಕ್ಕದಲ್ಲಿಯೇ ಇರುವ ಮನೆಗಳ ಜನರಿಗೆ ತೀವ್ರ ಮುಜುಗರ ತರುವಂತಾಗಿದೆ. ಈ ಬಗ್ಗೆ ಹಲವು ಬಾರಿ ಪಾಲಿಕೆ ಹಾಗೂ ಪೊಲೀಸ ಇಲಾಖೆಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ.
ಬೇಂದ್ರೆ ಅಜ್ಜನ ಹೆಸರಿನ ಉದ್ಯಾನವನ, ಕೆರೆಯ ದುಸ್ಥಿತಿ ಬಗ್ಗೆ ಕನ್ನಡಪ್ರಭ ಸೇರಿ ಹಲವು ಮಾಧ್ಯಮಗಳು ಸಾಕಷ್ಟು ಬಾರಿ ಆಡಳಿತ ವ್ಯವಸ್ಥೆ ಎಚ್ಚರಿಸಿದರೂ ಕೊಳಚೆ ನೀರು ಕೆರೆ ಸೇರಿದಂತೆ ಮಾಡಲಾಗುತ್ತಿಲ್ಲ. ಮಳೆಗಾಲದಲ್ಲಿ ಕೆರೆ ಬಳಿಯ ಮಂಗಳಗಟ್ಟಿ ಹಾಗೂ ಹುಬ್ಳೀಕರ ಪ್ಲಾಟ್ ವರೆಗೂ ಕೊಳಚೆ ನೀರು ಬರುತ್ತಿದ್ದು, ಸ್ಥಳೀಯರಿಗೆ ತುಂಬ ತೊಂದರೆಯಾಗಿದೆ. ಜೊತೆಗೆ ಪ್ರೇಮಿಗಳ ಕಾಟವನ್ನು ತಪ್ಪಿಸಬೇಕೆಂದು ಹುಬ್ಳೀಕರ ಪ್ಲಾಟ್ ನಿವಾಸಿಗಳಾದ ಅಭಿಷೇಕ ಪವಾರ, ವೆಂಕಟೇಶ ತೆಲಗಾರ, ಎಸ್.ಎಸ್. ಪಾಟೀಲ, ವಿಶ್ವಾಸ ಭಟ್ ಆಗ್ರಹಿಸಿದ್ದಾರೆ. ಪರಿಶೀಲನೆಸಾಧನಕೇರಿ ಕೆರೆಗೆ ಅನೇಕ ಬಡಾವಣೆಗಳಿಂದ ಕೊಳಚೆ ನೀರು ಹರಿದು ಬರುತ್ತಿದ್ದು ಕೆರೆ ಸ್ಥಿತಿ ಅಯೋಮಯವಾಗಿದೆ. ಸ್ಥಳೀಯರ ದೂರಿನ ಅನ್ವಯ ಈ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಮಳೆ ನೀರು ಮಾತ್ರ ಕೆರೆಗೆ ಸೇರಿ ಕೊಳಚೆ ನೀರು ಸೇರದಂತೆ ಯೋಜನೆ ರೂಪಿಸಲಾಗುತ್ತಿದೆ.
ಮಹಾನಗರ ಪಾಲಿಕೆ ಸಹಾಯಕ ಆಯುಕ್ತ ಅರವಿಂದ ಜಮಖಂಡಿ ತಿಳಿಸಿದ್ದಾರೆ.